ಸರಳ ಪ್ರೇಮಕಥೆಯನ್ನು ಹೇಳುತ್ತಿದ್ದ ಸಿಂಪಲ್ ಸುನಿ ‘ಗತವೈಭವ’ ಮೂಲಕ ನಿರ್ದೇಶನ ಕೌಶಲದ ಸಾಧ್ಯತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಜನ್ಮ-ಜನ್ಮಾಂತರದ ಫ್ಯಾಂಟಸಿ ಕಥೆಗೆ ದೃಶ್ಯವೈಭವ ಸೃಷ್ಟಿಸಿದ್ದಾರೆ. ಪ್ರತಿ ದೃಶ್ಯ ಕಲಾತ್ಮಕವಾಗಿ ಮೂಡಿಬಂದಿದೆ. ಅದ್ದೂರಿ ಸೆಟ್‌ಗಳು, ವಸಾಲಂಕಾರ, ವರ್ಣಾಲಂಕಾರ ಗಮನಸೆಳೆಯುತ್ತವೆ. ಪುರಾತನ-ಆಧುನಿಕ ನಾಯಕ- ನಾಯಕಿಯ ಹೆಸರು ಹೇಳುವಂತೆಯೇ ಈ ಒಂದು ಸಿನಿಮಾದಲ್ಲಿ ಹಳೆಯ ಕಾಲದ ಮೂರು ಕಥೆಗಳು ಹಾಗೂ ಆಧುನಿಕ ಕಥೆಯನ್ನು ಹೇಳಿದ್ದಾರೆ. ಕಾಲಘಟ್ಟಗಳಿಗೆ ಅನುಗುಣವಾಗಿ ಕಥೆ ನಿರೂಪಿಸಿರುವುದರಿಂದ ಎಲ್ಲಿಯೂ ಗೊಂದಲವಾಗದೆ ಪ್ರೇಕ್ಷಕರು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಮೊದಲು ಸಮುದ್ರ ಮಂಥನ, ನಂತರ ವಾಸ್ಕೊ-ಡಾ-ಗಾಮ 1498ರಲ್ಲಿ ಭಾರತಕ್ಕೆ ಬರುವ ಕಥೆ, ಬಳಿಕ ಬ್ರಿಟಿಷರ ಕಾಲದ ಕರಾವಳಿಯ ವೀರ ಕಂಬಳ ಸಾಹಸ. ಕಥೆಯಲ್ಲಿ ಎಲ್ಲ ಕಾಲದಲ್ಲಿ ಪ್ರೀತಿ ಸಿಗುತ್ತದೆ. ಅದು ಅನುಭವಕ್ಕೆ ದಕ್ಕುವ ಮುನ್ನವೇ ಅದಕ್ಕೊಂದು ದುರಂತ ಆರಂಭವಾಗುತ್ತದೆ. ಅದು ಪ್ರೇಕ್ಷಕನಿಗೆ ನಾಟುತ್ತದೆ. ದುಷ್ಯಂತ್ ನಾಲ್ಕು ಶೇಡ್‌ಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ ವೀರ ಕಂಬಳ ಚೆನ್ನಯನಾಗಿ ಖಡಕ್ ಆಗಿ ಗಮನ ಸೆಳೆಯುತ್ತಾರೆ. ಇನ್ನು ಆಶಿಕಾ ದೇವಕನ್ಯೆಯಂತೆ ಕಂಗೊಳಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಜೂಡಾ ಸ್ಯಾಂಡಿ ಸಂಗೀತ, ಹಿನ್ನೆಲೆ ಸಂಗೀತ ಆಪ್ತವಾಗಿದ್ದು, ಛಾಯಾಗ್ರಾಹಕ ವಿಲಿಯಂ ಡೇವಿಡ್ ಪ್ರತಿ ದೃಶ್ಯಗಳನ್ನು ಸುಂದರವಾಗಿಸಿದ್ದಾರೆ. ‘ಜನ್ಮಕ್ಕೆ ಸಾವಿರಬಹುದು, ಪ್ರೀತಿಗಲ್ಲ’ ಎಂಬ ಮಾತಿನ ಅನುಭವ ಪಡೆಯಬೇಕಾದರೆ ‘ಗತವೈಭವ’ ಕಣ್ತುಂಬಿಕೊಳ್ಳಬಹುದು.