ಮತ್ತೊಮ್ಮೆ ಭಗತ್ ಸಿಂಗ್ : ವೆಬ್ ಸರಣಿ ಆಗಲಿದೆ ಕ್ರಾಂತಿಕಾರಿ ಯುವಕನ ಬದುಕು

ಭಗತ್ ಸಿಂಗ್ ವೆಬ್​ ಸರಣಿಯ ಪೋಸ್ಟರ್
ಭಗತ್ ಸಿಂಗ್ ವೆಬ್​ ಸರಣಿಯ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ತೆರೆ ಮೇಲೆ ಬರಲಿದೆ ಭಗತ್ ಸಿಂಗ್ ಬಯೋಪಿಕ್
  • ವೆಬ್ ಸರಣಿ ತಯಾರಿಗೆ ಮುಂದಾದ ನಿರ್ಮಾಪಕ ಮನೀಶ್​
  • ತಾರಾಗಣ, ತಾಂತ್ರಿಕ ಬಳಗ ಆಯ್ಕೆಗೆ ಮುಂದಾದ ಚಿತ್ರತಂಡ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು ಹಿಂದಿಯಲ್ಲಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ‘ಶಹೀದ್’ (1965), ‘ಶಹೀದ್ ಎ- ಅಜಂ’ (2002), ‘23 ಮಾರ್ಚ್, 1931: ಶಹೀದ್’, (2002), ‘ದ ಲೆಜೆಂಡ್ ಆ್ ಭಗತ್ ಸಿಂಗ್’ (2002), ‘ರಂಗ್ ದೇ ಬಸಂತಿ’ (2006) ಸಿನಿಮಾಗಳ ಮೂಲಕ ಪ್ರೇಕ್ಷಕರು ಭಗತ್ ಸಿಂಗ್ ಜೀವನ ಮತ್ತು ಹೋರಾಟವನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಭಗತ್ ಸಿಂಗ್ ಬಯೋಪಿಕ್ ತೆರೆಗೆ ಬರುತ್ತಿದೆ. ಅದು ಬೆಳ್ಳಿತೆರೆ ಮೇಲೆ ಅಲ್ಲ ಬದಲಾಗಿ ಕಿರುತೆರೆಯಲ್ಲಿ ಎಂಬುದು ವಿಶೇಷ. ಹಿಸ್ಟರಿವರ್ಸ್ ಕಲೆಕ್ಟಿವ್ ಸ್ಟುಡಿಯೋ ಜತೆಗೆ ಕೈಜೋಡಿಸಿರುವ ನಿರ್ಮಾಪಕ ಮನೀಷ್ ಭಗತ್ ಸಿಂಗ್ ಕುರಿತು ವೆಬ್ ಸರಣಿ ತಯಾರಿಸಲು ಮುಂದಾಗಿದ್ದಾರೆ. 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಸರಣಿ ಘೋಷಿಸಲಾಗಿದೆ. ತರುಣ ಭಗತ್ ಸಿಂಗ್‌ನ ಬದುಕು ಹಾಗೂ ಸ್ವಾತಂತ್ರ್ಯ ಹೋರಾಟದ ಕಿಚ್ಚು, ಕ್ರಾಂತಿಕಾರಿ ಯುವಕನೊಬ್ಬ ರಾಷ್ಟ್ರನಾಯಕನಾಗಿ ಬೆಳೆದ ಪರಿ.. ಹೀಗೆ ಹಲವು ವಿಚಾರಗಳ ಮೇಲೆ ಈ ಸರಣಿ ಬೆಳಕು ಚೆಲ್ಲಲಿದೆ. ಇನ್ನು ಈ ಸರಣಿಯ ಟೈಟಲ್ ನಿಗದಿಪಡಿಸಿಲ್ಲ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭವಾಗಿವೆ. ಜತೆಗೆ ಕಲಾ ಹಾಗೂ ತಾಂತ್ರಿಕ ಬಳಗದ ಆಯ್ಕೆ ನಡೆಯುತ್ತಿದೆ. ನಿರ್ಮಾಪಕ ಮನೀಶ್, ‘ಭಗತ್ ಸಿಂಗ್ ನಮಗೆ ಕ್ರಾಂತಿಕಾರಿ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿ ಗೊತ್ತು. ಆದರೆ, ಈ ಸರಣಿಯು ಅವರ ಜೀವನದ ವಿವಿಧ ಆಯಾಮಗಳ ಜತೆಗೆ ಅವರು ದೇಶದ ಮಹಾನ್ ವ್ಯಕ್ತಿಯಾಗಿ ರೂಪುಗೊಂಡ ಬಗ್ಗೆ ತಿಳಿಸುತ್ತದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಭಗತ್ ಸಿಂಗ್ ಜತೆಗೆ ಮುಂದಿನ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸ್ವಾಮಿ ಸಮರ್ಥರ ಜೀವನಾಧಾರಿತ ವೆಬ್‌ಸರಣಿಗಳನ್ನು ನಿರ್ಮಿಸುವ ಪ್ಲ್ಯಾನ್ ಹಿಸ್ಟರಿವರ್ಸ್ ತಂಡದ್ದು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net