ಧರ್ಮ ದಂಗಲ್ : ಕಣ್ಣೀರು ಹಾಕಿದ ಫರಿಯಾ ಅಬ್ದುಲ್ಲಾ, ಬ್ರೇಕಪ್ ಬಗ್ಗೆ ಮೌನ ಮುರಿದ ಹಿಮಾನ್ಶಿ

ಫರಿಯಾ ಅಬ್ದುಲ್ಲಾ
ಫರಿಯಾ ಅಬ್ದುಲ್ಲಾ
Published on

ಪ್ರಮುಖ ಮುಖ್ಯಾಂಶಗಳು

  • ಬೊನಾಲು ಹಬ್ಬದಲ್ಲಿ ಪಾಲ್ಗೊಂಡಿದ್ದಕ್ಕೆ ಟೀಕಿಸಿದವರಿಗೆ ಉತ್ತರಿಸಿದ ನಟಿ ಫರಿಯಾ ಅಬ್ದುಲ್ಲಾ
  • ದಾರಿತಪ್ಪಿದವಳು ಎಂದವರಿಗೆ ಧರ್ಮದ ಪಾಠ ಮಾಡಿದ ಜಾತಿ ರತ್ನಲು ನಟಿ
  • ಧಾಮಿರ್ಕ ಭಿನ್ನಾಭಿಪ್ರಾಯದಿಂದಾಗಿ ಬ್ರೇಕಪ್ ಮಾಡಿಕೊಂಡಿದ್ದರ ಬಗ್ಗೆ ಬಾಯ್ಬಿಟ್ಟ ಹಿಮಾನ್ಸಿ ಖುರಾನಾ
ಕಲಾವಿದರು ದೈನಂದಿನ ಜೀವನದಲ್ಲಿ ಒಂದು ಧರ್ಮವನ್ನು ಅನುರಿಸುತ್ತಿದ್ದರೂ, ಬೇರೆ ಧರ್ಮಗಳನ್ನು ಗೌರವಿಸುವ ಜತೆಗೆ ಉತ್ಸವ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾಮರಸ್ಯ ಮೆರೆಯುತ್ತಾರೆ. ಆದರೆ, ಇತ್ತೀಚೆಗೆ ತೆಲಗು ನಟಿ ರಿಯಾ ಅಬ್ದುಲ್ಲಾ ಹೈದರಾಬಾದ್ ಸಮೀಪದ ಹಳ್ಳಿಯೊಂದರಲ್ಲಿ ಬೊನಾಲು ಹಬ್ಬದಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ಹೆಚ್ಚು ಟ್ರೋಲ್‌ಗೆ ಒಳಗಾಗಿದ್ದರು. ಮಿರಲಂ ಮಂಡಿಯ ಶ್ರೀ ಮಹಾಂಕಾಳೇಶ್ವರ ಅಮ್ಮಾವರಿ ದೇವಸ್ಥಾನದಲ್ಲಿ ಇದೇ 10ರಂದು ಆಯೋಜಿಸಿದ್ದ ಬೊನಾಲು ಹಬ್ಬದಲ್ಲಿ ನಟಿ ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದ ಅವರು ದೇವರಿಗೆ ಸೇವೆ ಅರ್ಪಿಸಿದ ಬಳಿಕ ನೃತ್ಯ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಕೆಲವರು ನಟಿಗೆ ‘ಧರ್ಮದ್ರೋಹಿ’ ಎಂದು ಆರೋಪಿಸಿದ್ದರು. ಇದೀಗ ಟೀಕೆಗಳ ವಿರುದ್ಧ ನಟಿ ಗರಂ ಆಗಿದ್ದು, ಅಳುತ್ತಲೇ ಪ್ರತಿಕ್ರಿಯಿಸಿದ್ದಾರೆ. ‘ನನ್ನ ತಂದೆ (ಸಂಜಯ್ ಅಬ್ದುಲ್ಲಾ) ಇಸ್ಲಾಂ ಮೆಚ್ಚಿ ಮತಾಂತರಗೊಂಡಿದ್ದರು. ಚಿಕ್ಕಂದಿನಿಂದಲೂ ನನಗೆ ಅಪ್ಪ ಇಸ್ಲಾಂ ಕುರಿತಂತೆ ಒಳ್ಳೆಯ ವಿಷಯಗಳನ್ನೇ ಹೇಳಿಕೊಟ್ಟಿದ್ದಾರೆ. ಆದರೆ, ಈಗ ನನಗೆ ದಾರಿತಪ್ಪಿದವಳು, ಕಾಫಿರ್ ಎಂದೆಲ್ಲಾ ಹೇಳುವ ಮೂಲಕ ದ್ವೇಷ ಕಾರುತ್ತಿದ್ದೀರಿ. ನಾನು ಮಾತ್ರ ನಿಮಗೆ ಪ್ರೀತಿ ಹಂಚುವ ಮೂಲಕ ಒಳ್ಳೆಯದನ್ನೇ ಬಯಸುತ್ತೇನೆ. ಅದೇ ನನ್ನ ಧರ್ಮ’ ಎಂದು ವಿಡಿಯೋ ಮೂಲಕ ಟ್ರೋಲ್‌ಗಳಿಗೆ ಉತ್ತರಿಸಿದ್ದಾರೆ. ರಿಯಾ ಅಬ್ದುಲ್ಲಾ ತೆಲುಗಿನ ‘ಜಾತಿ ರತ್ನಲು’, ‘ರಾವಣಾಸುರ’, ‘ಮಾತು ವದಲರಾ 2’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಸದ್ಯ ‘ಸಿಗ್ಮಾ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್ 

ದೇವರಿಗೆ ದ್ರೋಹ ಬಗೆಯುತ್ತಿದ್ದೇನೆ ಅನಿಸಿತ್ತು

 ಪಂಜಾಬ್ ಮೂಲದ ನಟಿ ಹಿಮಾನ್ಶಿ ಖುರಾನ ‘ಬಿಗ್‌ಬಾಸ್ ಹಿಂದಿ ಸೀಸನ್ 13ರ’ ಮೂಲಕ ಜನಪ್ರಿಯರಾಗಿದ್ದರು. ಬಳಿಕ ಅದೇ ಶೋ ಸ್ಪರ್ಧಿಯಾಗಿದ್ದ ಅಸೀಮ್ ರಿಯಾಜ್ ಜತೆ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ನಾಲ್ಕು ವರ್ಷಗಳಲ್ಲಿ ಅರ್ಥಾತ್ 2023ರಲ್ಲಿ ಜೋಡಿಯ ನಡುವೆ ಬಿರುಕು ಮೂಡಿತ್ತು. ‘ಇಬ್ಬರ ನಡುವಿನ ಧಾರ್ಮಿಕ ಭಿನ್ನಾಭಿಪ್ರಾಯದ ಕಾರಣಕ್ಕಾಗಿಯೇ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿ ಬಂತು’ ಎಂದು ಹಿಮಾನ್ಶಿ ಇತ್ತೀಚೆಗೆ ಅಸೀಮ್ ಹೆಸರು ಪ್ರಸ್ತಾಪಿಸದೆ ಹೇಳಿಕೊಂಡಿದ್ದಾರೆ. ‘ಆತ ತನ್ನ ಧರ್ಮದ ಬಗ್ಗೆ ಹೆಚ್ಚು ಹೇಳುತ್ತಿದ್ದಾಗ ನನಗೆ ಅದು ತಪ್ಪಲ್ಲ ಅನಿಸಿತ್ತು. ನಾನು ಅ ಧರ್ಮವನ್ನು ಸ್ವೀಕರಿಸಲಿ ಎಂಬುದು ಆತನ ಅಭಿಪ್ರಾಯವಾಗಿರಬಹುದು. ನನಗೆ ಮತಾಂತರವಾಗಲು ಇಷ್ಟವಿರಲಿಲ್ಲವಾದರೂ, ಕೊನೆಯ ಬಾರಿಗೆ ಚಾರ್‌ಧಾಮ್‌ಗೆ ಹೋಗಿಬರುತ್ತೇನೆ, ಮುಂದೆ ಹೋಗಲು ಅವಕಾಶವಿರುವುದಿಲ್ಲ ಅಂತ ಹೇಳಿ, ಹೊರಟೆ. ದೇವರ ಮುಂದೆ ಕುಳಿತು ಪ್ರಾರ್ಥಿಸುವಾಗ, ವಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಪಾಲಿಸುತ್ತಲೇ ಜತೆಗಿರಬಹುದಿತ್ತಲ್ಲವೇ ಎಂದು ಯೋಚಿಸಿದೆ. ನನ್ನ ಮೂಲವನ್ನು ಬಿಟ್ಟು ಹೊರಬರಲು ನನಗೆ ಸಾಧ್ಯವಿಲ್ಲ ಅಂತನ್ನಿಸಿತು. ವಾಪಸ್ಸಾದ ಬಳಿಕ ಆತನಿಗೂ ಅದು ತಿಳಿಯಿತು. ಬ್ರೇಕಪ್ ಮಾಡಿಕೊಂಡೆವು’ಎಂದು ಹೇಳಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net