ಈ ಸುದೀರ್ಘ ಗ್ಯಾಪ್ ಬಗ್ಗೆ ಪ್ರಕಾಶ್, "ಒಂದು ಕಥೆ ನಮ್ಮನ್ನು ಮಲಗಲು ಬಿಡದಷ್ಟು ಕಾಡಬೇಕು, ಅದೇ ನಮ್ಮನ್ನು ಸೆಟ್ಗೆ ಕರೆದುಕೊಂಡು ಹೋಗಬೇಕು ಅನ್ನೋದು ನನ್ನ ನಂಬಿಕೆ. ಆದರೆ, ನನ್ನ ತಂದೆ, ದೊಡ್ಡಮ್ಮ ಪಾರ್ವತಮ್ಮ ರಾಜಕುಮಾರ್ ಸೇರಿ ಎಲ್ಲರೂ ಒಂದೊಂದು ಚಿತ್ರಕ್ಕೂ ನೀನು ಇಷ್ಟೊಂದು ಸಮಯ ತೆಗೆದುಕೊಂಡರೆ ಹೇಗೋ? ಬೇಗ ಸಿನಿಮಾ ಮಾಡು ಅಂತ ಬೈಯುತ್ತಿದ್ದರು. 2018ರಲ್ಲೇ "ದ ಡೆವಿಲ್' ಕಥೆ ಬಗ್ಗೆ ದರ್ಶನ್ಗೆ ಹೇಳಿದ್ದೆ. ಅದರ ನಡುವೆ ಕರೊನಾ ಬಂತು. ಅಪ್ಪನಿಗೆ ತುಂಬ ದಿನಗಳ ಕಾಲ ಅನಾರೋಗ್ಯವಿತ್ತು. ನಿಜ ಹೇಳಬೇಕೆಂದರೆ "ಕ್ರಾಂತಿ' ಡೇಟ್ಸ್ ಅನ್ನೇ ದರ್ಶನ್ "ಡೆವಿಲ್'ಗೆ ನೀಡಿದ್ದರು. ಆದರೆ, "ಡೆವಿಲ್' ತಡವಾಗುತ್ತಿದ್ದ ಕಾರಣ ದರ್ಶನ್ "ಕ್ರಾಂತಿ' ಮತ್ತು "ಕಾಟೇರ' ಶೂಟಿಂಗ್ಗೆ ಡೇಟ್ಸ್ ಕೊಟ್ಟರು. ಕೇವಲ 80 ದಿನಗಳಲ್ಲಿ "ಡೆವಿಲ್' ಶೂಟಿಂಗ್ ಮುಗಿಸಿದೆವು. ಅದಕ್ಕೆ ಕಾರಣ ಹೋಮ್ ವರ್ಕ್. ಸಿದ್ಧತೆ ಚೆನ್ನಾಗಿದ್ದರೆ ಸೆಟ್ನಲ್ಲಿ ಯಾವುದೇ ಗೊಂದಲವಿರುವುದಿಲ್ಲ. ಏನು ಬೇಕು? ಎಷ್ಟು ಬೇಕು? ಎಂಬ ಸ್ಪಷ್ಟತೆ ಇರುತ್ತದೆ. ಎಷ್ಟೇ ವರ್ಷಗಳ ಬಳಿಕ ನಾನು ನನ್ನ ಸಿನಿಮಾ ಮತ್ತೆ ನೋಡಿದಾಗ, ನಾನೇಕೆ ಈ ಸಿನಿಮಾ ಮಾಡಿದೆ ಅಂತ ನನಗೇ ಅನ್ನಿಸಬಾರದು. ಆ ಅನುಭವ ಕಾಡದಂತಹ ಸಿನಿಮಾ ಮಾಡುವುದಷ್ಟೇ ನನ್ನ ಗುರಿ' ಎಂದು ಹೇಳಿಕೊಳ್ಳುತ್ತಾರೆ.