ಬೆಂಗಳೂರು: ‘ಜೋಗಿ’ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಚಿತ್ರ ‘ಕೆಡಿ’. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಬಹುತಾರಾಗಣವಿರುವ ಚಿತ್ರವಿದು. ಈಗಾಗಲೇ ಎರಡು ಹಾಡುಗಳು ವೈರಲ್ ಆಗಿವೆ. ಕಳೆದ ಜುಲೈನಲ್ಲಿ ಇಡೀ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರಚಾರ ನಡೆಸಿ, ಟೀಸರ್ ರಿಲೀಸ್ ಮಾಡಿತ್ತು. ‘ಮಾರ್ಟಿನ್’ ತೆರೆಕಂಡು ಅಕ್ಟೋಬರ್‌ಗೆ ಒಂದು ವರ್ಷವಾಗಿದ್ದು, ಹೀಗಾಗಿಯೇ ‘ಕೆಡಿ’ಯನ್ನು ಕಣ್ತುಂಬಿಕಳ್ಳಲು ಧ್ರುವ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಈವರೆಗೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡದಿರುವುದು ಅವರಲ್ಲೂ ನಿರಾಸೆ ಮೂಡಿಸಿತ್ತು. ಇದೀಗ ಚಿತ್ರತಂಡ ಅಚ್ಚರಿ ಎಂಬಂತೆ ‘ಕೆಡಿ’ ಬಿಡುಗಡೆ ದಿನಾಂಕ ಘೋಷಿಸಿದೆ. ಶುಕ್ರವಾರ ‘ಕೆಡಿ’ ಚಿತ್ರದ ‘ಅಣ್ತಮ್ಮ ಜೋಡೆತ್ತು ಕಣೋ’ ಎಂದು ಸಾಗುವ ಮೂರನೇ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನ ಕೊನೆಯಲ್ಲಿ ಸಿನಿಮಾ ತೆರೆಗೆ ಬರುವ ದಿನಾಂಕ ಘೋಷಿಸಿದ್ದು, 2026ರ ಏಪ್ರಿಲ್ 30ರಂದು ‘ಕೆಡಿ’ ದರ್ಶನ ನೀಡುವುದು ಪಕ್ಕಾ ಆಗಿದೆ. ಬೇಸಗೆ ರಜೆ ಗಮನದಲ್ಲಿಟ್ಟುಕೊಂಡು ಈ ದಿನಾಂಕ ನಿಗದಿಪಡಿಸಲಾಗಿದೆ. ಇನ್ನು ‘ಕೆಡಿ’ಯಲ್ಲಿ ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಕಲಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕ್ರಾಂತಿ ಕುಮಾರ್ ಸಂಭಾಷಣೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ಕೆ.ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.