_1788010070317.webp?w=480&auto=format%2Ccompress&fit=max)
_1788010070317.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಸಿನಿಮಾ ಗೆದ್ದ ಖುಷಿಯಲ್ಲಿ ಕೆಲ ಚಿತ್ರತಂಡಗಳು ಬಂದ ಲಾಭದಲ್ಲಿ ಸಣ್ಣಪುಟ್ಟ ದೇಣಿಗೆ ನೀಡುವುದು, ಕಲಾವಿದರು ಅಥವಾ ತಾಂತ್ರಿಕ ವರ್ಗಕ್ಕೆ ಉಡುಗೊರೆ ಕೊಡುವುದನ್ನು ನೋಡಿದ್ದೇವೆ. ಆದರೆ, ಮರಾಠಿ ಚಿತ್ರವೊಂದು ಬಂದ ಎಲ್ಲ ಲಾಭಾಂಶವನ್ನು ಮಹಾರಾಷ್ಟ್ರದ ರೈತರ ಕುಟುಂಬಗಳ ಕಲ್ಯಾಣಕ್ಕಾಗಿ ಮೀಸಲಿಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದ ಹೆಸರು ‘ದೇವೂಳ್ ಬಂದ್ 2’. ಪೋಸ್ಟ್ -ಪ್ರೊಡಕ್ಷನ್ ವೆಚ್ಚ ಭರಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಚಿತ್ರ ಅತಂತ್ರದಲ್ಲಿತ್ತು. ಶಾರುಖ್ ಖಾನ್ ಒಡೆತನದ ಕಂಪನಿಯಲ್ಲಿ ಪೋಸ್ಟ್- ಪ್ರೊಡಕ್ಷನ್ ವೆಚ್ಚ ಭರಿಸಲು ಸಾಧ್ಯವಾಗದಿದ್ದಾಗ, ಸ್ವತಃ ಶಾರುಖ್ 45 ಲಕ್ಷ ರೂ. ಮಾಫಿ ಮಾಡಿ, ಸಿನಿಮಾ ರಿಲೀಸ್‌ಗೆ ಅನುವು ಮಾಡಿಕೊಟ್ಟಿದ್ದರು. ಅದರಂತೆ, ‘ದೇವೂಳ್ ಬಂದ್ 2’ ಮೇ 21ರಂದು ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕೆಲವೇ ದಿನಗಳಲ್ಲಿ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುವ ಮೂಲಕ ಮರಾಠಿ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಇದೀಗ ಚಿತ್ರಕ್ಕೆ ಬಂದ ಸಂಪೂರ್ಣ ಲಾಭವನ್ನು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೀಡಾದ ರೈತರ ಮಕ್ಕಳ ಶಿಕ್ಷಣಕ್ಕೆ ಮೀಸಲಿರಿಸಲು ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ನಿರ್ದೇಶಕ ಪ್ರವೀಣ್ ತಾರ್ಡೆ, ‘‘ದೇವೂಳ್ ಬಂದ್ 2’ ಸಿನಿಮಾ ದೇಶಾದ್ಯಂತ ಗಮನ ಸೆಳೆದು 100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ನಮ್ಮ ಚಿತ್ರದ ಬಜೆಟ್ ಹಾಗೂ ಇತರ ಖರ್ಚು ವೆಚ್ಚಗಳನ್ನು ಉಳಿಸಿಕೊಂಡು, ಉಳಿದ ಲಾಭವನ್ನು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೀಡಾದ ರೈತರ ಮಕ್ಕಳ ಶಿಕ್ಷಣ ಹಾಗೂ ಕಲ್ಯಾಣಕ್ಕಾಗಿ ಬಳಸಲಿದ್ದೇವೆ. ಆ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿದ್ದೇವೆ. ಸದ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಈ ಸಹಾಯ ಧನ ವಿತರಣೆ ನಡೆಯಲಿದೆ. ಹಾಗೆಯೇ, 250ಕ್ಕೂ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಉಚಿತ ಪೌಷ್ಠಿಕ ಆಹಾರ ನೀಡಲು ಚಿತ್ರತಂಡ ಮುಂದಾಗಿದೆ’ ಎಂದು ಘೋಷಿಸಿದ್ದಾರೆ. ಚಿತ್ರತಂಡದ ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. -ಏಜೆನ್ಸೀಸ್