The Devil Review ; ನಟ ದರ್ಶನ್​ ಎರಡು ಮುಖಗಳ ದರ್ಶನ

ದ ಡೆವಿಲ್​
ದ ಡೆವಿಲ್​
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾದಲ್ಲಿ ಒಂದು ರೀತಿ ನಟ ದರ್ಶನ್​ರದ್ದೇ ಎರಡು ವಿಭಿನ್ನ ಮುಖಗಳ, ವ್ಯಕ್ತಿತ್ವಗಳ ದರ್ಶನವಾಗುತ್ತಿದೆಯಾ ಅಂತ ಅನ್ನಿಸುವುದುಂಟು
  • "ಡೆವಿಲ್​'ನಲ್ಲಿ ದರ್ಶನ್​ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
  • ಅಜನೀಷ್​ ಲೋಕನಾಥ್​ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಪ್ಲಸ್​ ಆಗಿವೆ.
  • ದರ್ಶನ್​ ಫ್ಯಾನ್ಸ್​ಗಾಗಿಯೇ ಪ್ರಕಾಶ್​ ವೀರ್​ ಈ ಸಿನಿಮಾ ಮಾಡಿದಂತಿದೆ.
ಚಿತ್ರ: ದ ಡೆವಿಲ್​
ನಿರ್ದೇಶನ: ಪ್ರಕಾಶ್​ ವೀರ್​
ತಾರಾಗಣ: ದರ್ಶನ್​, ರಚನಾ ರೈ, ಅಚ್ಯುತ್​ ಕುಮಾರ್​, ಮಹೇಶ್​ ಮಂಜ್ರೇಕರ್​, ಹುಲಿ ಕಾರ್ತಿಕ್​, ಗಿಲ್ಲಿ ನಟ, ರೋಜರ್​ ನಾರಾಯಣ್​, ವಿನಯ್​, ಚಂದು ಮತ್ತಿತರರು
| ಹರ್ಷವರ್ಧನ್​ ಬ್ಯಾಡನೂರು
ಹೀರೋಗೆ ಬಿಲ್ಡಪ್​ ಕೊಡಲು ಒಂದು ಮಾಸ್​ ಡೈಲಾಗ್​ ಇಡುವುದು ಅಥವಾ ಸೀನ್​ ಸೃಷ್ಟಿಸುವುದು ಸಾಮಾನ್ಯ. ಬಜೆಟ್​ ಹೆಚ್ಚಿದ್ದರೆ ಒಂದು ಹಾಡನ್ನೋ ಅಥವಾ ಆ್ಯಕ್ಷನ್​ ಸನ್ನಿವೇಶವನ್ನೋ ಇಡುವುದೂ ಕಾಮನ್​. ಆದರೆ, ಆ ನಾಯಕನ ಅಭಿಮಾನಿಗಳಿಗಾಗಿ, ಆ ನಟನನ್ನು ಸಂಭ್ರಮಿಸಲೆಂದೇ ಬಿಲ್ಡಪ್​ ಸಿನಿಮಾ ಮಾಡುವುದು ಇದೆಯಲ್ಲಾ ಅದು ದರ್ಶನ್​ ಅವರಂತಹ ಕ್ರೇಜ್​ ಇರುವ ನಟರಿಗೆ ಮಾತ್ರ ಸಾಧ್ಯ. ಆದರೂ, ಸದ್ಯದ ಪರಿಸ್ಥಿತಿಗಳಿಂದಾಗಿ "ಡೆವಿಲ್​' ಸಿನಿಮಾ ದರ್ಶನ್​ ನಟನೆ, ಸಂಭಾಷಣೆ, ಸನ್ನಿವೇಶಗಳು ಅವರ ನೈಜ ವ್ಯಕ್ತಿತ್ವ, ಪರಿಸ್ಥಿತಿ ಮತ್ತು ಟನೆಗಳನ್ನು ನೆನಪಿಸುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಒಂದು ರೀತಿ ನಟ ದರ್ಶನ್​ರದ್ದೇ ಎರಡು ವಿಭಿನ್ನ ಮುಖಗಳ, ವ್ಯಕ್ತಿತ್ವಗಳ ದರ್ಶನವಾಗುತ್ತಿದೆಯಾ ಅಂತ ಅನ್ನಿಸುವುದುಂಟು (2019ರ ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಮಂಡ್ಯದಲ್ಲಿ ಖುದ್ದು ದರ್ಶನ್​ ತಮಗೆ ಎರಡು ಮುಖಗಳಿವೆ ಎಂದು ಹೇಳಿದ್ದರು).
ಆತ ಧನುಷ್​ (ದರ್ಶನ್​). ಸಿಎಂ ರಾಜಶೇಖರನ (ಮಹೇಶ್​) ಏಕೈಕ ಸುಪುತ್ರ. ಪುತ್ರನ ಆಟಾಟೋಪ ತಾಳಲಾರದೇ ಅಪ್ಪ ಆತನನ್ನು ಹೊರದೇಶಕ್ಕೆ ಕಳುಹಿಸಿರುತ್ತಾರೆ. ಹಣಬಲದ ಮದವೇರಿರುವ ಮಗನಿಗೆ ಅಲ್ಲೂ ಬ್ರೇಕ್​ ಬೀಳುವುದಿಲ್ಲ. ಮೂರನೇ ಬಾರಿ ಸಿಎಂ ಆಗಿರುವ ಕಸದ ಕಾಂಟ್ರಾ$್ಯಕ್ಟರ್​ ರಾಜಶೇಖರನಿಗೆ ಕುರ್ಚಿಯ ಮೇಲೆ ಎಲ್ಲಿಲ್ಲದ ಆಸೆ. ಆದರೆ, ಆತನನ್ನು ಕುರ್ಚಿಯಿಂದ ಕೆಳಗೆ ಇಳಿಸಲೇಬೇಕೆಂದು ಪಣತೊಡುವ ರಾಜಶೇಖರ್​ ತಂಗಿ ಮಕ್ಕಳು, ವಿಪಕ್ಷ ನಾಯಕ ಪಾಟೀಲ ಒಂದಾಗಿ ಪಿತೂರಿ ಹೂಡುತ್ತಾರೆ. ಭ್ರಷ್ಟಾಚಾರ ಆರೋಪದಿಂದಾಗಿ ರಾಜಶೇಖರ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಆಗ ಮಗನನ್ನು ಸಿಎಂ ಮಾಡಲು ಆತ ನಿರ್ಧರಿಸುತ್ತಾನೆ. ಆದರೆ, ಆತ ಬರಲೊಪ್ಪದ ಕಾರಣ ಸಿಎಂ ಬಂಟ "ಚಾಣಕ್ಯ' ಅನಂತ ನಂಬಿಯಾರ್​ (ಅಚ್ಯುತ್​) ಧನುಷ್​ನಂತೆಯೇ ಕಾಣುವ ಹೋಟೆಲ್​ ಮಾಲೀಕ ಕೃಷ್ಣನನ್ನು (ದರ್ಶನ್​) ಕರೆತರುತ್ತಾನೆ. ಕೃಷ್ಣನಿಗೋ ನಟನಾಗುವ ಆಸೆ. ಸೌಟು ಬಿಟ್ಟು ಕಟೌಟ್​ ಹಾಕಿಸಿಕೊಳ್ಳುವ ಕನಸು. ಇತ್ತ ಡೂಪ್ಲಿಕೇಟ್​ ಧನುಷ್​ ಆಗಿ ಕೃಷ್ಣ ಎಂಟ್ರಿ ಕೊಟ್ಟ ಬೆನ್ನಲ್ಲೇ, ಅತ್ತ ಒರಿಜಿನಲ್​ ಧನುಷ್​ ಕೂಡ ಭಾರತಕ್ಕೆ ವಾಪಸ್ಸಾಗುತ್ತಾನೆ. ಮುಂದೆ? "ಡೆವಿಲ್​' ನೋಡಿ.
"ಡೆವಿಲ್​'ನಲ್ಲಿ ದರ್ಶನ್​ ದ್ವಿಪಾತ್ರದಲ್ಲಿ ನಟಿಸಿದ್ದು, ಎರಡು ವಿಭಿನ್ನ ಲುಕ್​, ಮ್ಯಾನರಿಸಂ, ಬಾಡಿ ಲಾಂಗ್ವೇಜ್​, ಡೈಲಾಗ್​ ಡೆಲಿವರಿ ಮೂಲಕ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಖಡಕ್​ ಒನ್​ಲೈನರ್​, ಭರ್ಜರಿ ನಟನೆ, ಭರಪೂರ ಆ್ಯಕ್ಷನ್​ ಇದ್ದು ದರ್ಶನ್​ ಅಭಿಮಾನಿಗಳಿಗೆ ಫುಲ್​ ಮೀಲ್ಸ್​ ಸವಿದ ಖುಷಿ. ರಚನಾ ರೈ ಪಾತ್ರಕ್ಕೆ ತಕ್ಕಂತೆ ನಟಿಸಿದ್ದು, ಚಾಣಕ್ಯನಾಗಿ ಅಚ್ಯುತ್​ ಮತ್ತು ಸಿಎಂ ಪಾತ್ರದಲ್ಲಿ ಮಹೇಶ್​ ಮಂಜ್ರೇಕರ್​ ಗಮನ ಸೆಳೆಯುತ್ತಾರೆ. ಉಳಿದ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಅಜನೀಷ್​ ಲೋಕನಾಥ್​ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಪ್ಲಸ್​ ಆಗಿವೆ. ಛಾಯಾಗ್ರಾಹಕ ಸುಧಾಕರ್​ ರಾಜ್​ ಮತ್ತುಕಲಾನಿರ್ದೇಶಕ ಮೋಹನ್​ ಬಿ.ಕೆರೆ ಚಿತ್ರವನ್ನು ತೆರೆಯ ಮೇಲೆ ಮತ್ತಷ್ಟು ಅದ್ಧೂರಿಯಾಗಿಸಿದ್ದಾರೆ. ದರ್ಶನ್​ ಫ್ಯಾನ್ಸ್​ಗಾಗಿಯೇ ಪ್ರಕಾಶ್​ ವೀರ್​ ಈ ಸಿನಿಮಾ ಮಾಡಿದಂತಿದೆ. ಹೀಗಾಗಿಯೇ ಅವರ ಅಭಿಮಾನಿಗಳು "ಡೆವಿಲ್​' ಮಿಸ್​ ಮಾಡಿಕೊಳ್ಳುವಂತಿಲ್ಲ!
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net