

ಪ್ರಮುಖ ಮುಖ್ಯಾಂಶಗಳು
ಭಾರತ ತಂಡದ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ಇತ್ತೀಚೆಗೆಷ್ಟೇ ಮಾಡೆಲ್ ಸಮ್ರೀನ್ ಕೌರ್ ಜತೆಗಿನ ಪ್ರೀತಿಯ ಬಗ್ಗೆ ಅಧಿಕೃತವಾಗಿ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ಪಂಜಾಬ್ ಮೂಲದ ಕ್ರಿಕೆಟಿಗ ರಮಣ್‌ದೀಪ್ ಸಿಂಗ್ ಸದ್ದಿಲ್ಲದೇ ಸಿನಿಮಾ ತಾರೆಯನ್ನು ವರಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಮಿಂಚಿರುವ ‘ಕೈಸೇ ಯೇ ಯಾರಿಯಾ?’, ‘ಬೆಸ್ಟ್ ಫ್ರೆಂಡ್ಸ್ ಫಾರೆವರ್? ಖ್ಯಾತಿಯ ಚಾರ್ಲಿ ಚವಾಣ್ ಜತೆ ರಮಣ್‌ದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಂಜಾಬಿ ಸಂಪ್ರದಾಯದಂತೆ ಮದುವೆ ನೆರವೇರಿದ್ದು, ಆಪ್ತರು, ಕುಟುಂಬದವರಷ್ಟೇ ಭಾಗಿಯಾಗಿದ್ದಾರೆ. ಎಂಟು ವರ್ಷಗಳ ಹಿಂದೆ ರಮಣ್‌ಗೆ ಚಾರ್ಲಿ ಪರಿಚಯವಾಗಿ ಸ್ನೇಹ ಬೆಳೆದು, ಇದೀಗ ಮದುವೆ ಹಂತಕ್ಕೆ ಬಂದು ತಲುಪಿದೆ. ಆದರೆ, ಇದುವರೆಗೂ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಥವಾ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಜೋಡಿಯ ಮದುವೆ ಹಲವರಿಗೆ ಸರ್‌ಪ್ರೈಸ್ ಅಂತನ್ನಿಸಿದೆ. ಜಾಲತಾಣದಲ್ಲಿ ಜಂಟಿಯಾಗಿ ಮದುವೆ ಫೋಟೋ ಹಂಚಿಕೊಂಡು ನವಜೋಡಿ ಸಂಭ್ರಮಿಸಿದೆ. ದಂಪತಿಗೆ ಕ್ರಿಕೆಟಿಗರಾದ ಶುಭಮಾನ್ ಗಿಲ್, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ ಸೇರಿ ಹಲವರು ಶುಭ ಕೋರಿದ್ದಾರೆ. ಇನ್ನು ರಮಣ್‌ದೀಪ್ ಸಿಂಗ್ ಪಂಜಾಬ್ ರಾಜ್ಯದ ಪರ ಆಡುತ್ತಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಹಲವು ಕ್ರಿಕೆಟಿಗರು, ತಾರೆಯರನ್ನು ವರಿಸಿದ್ದಾರೆ. ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ, ಜಹೀರ್ ಖಾನ್ - ಸಾಗರಿಕಾ ಘಟ್ಗೆ, ಕೆ.ಎಲ್. ರಾಹುಲ್ - ಅಥಿಯಾ ಶೆಟ್ಟಿ, ಯುವರಾಜ್ ಸಿಂಗ್ - ಹ್ಯಾಜೆಲ್ ಕೀಚ್ ಜೋಡಿಗಳ ಮಧ್ಯೆ ಇದೀಗ ರಮಣ್‌ದೀಪ್-ಚಾರ್ಲಿ ಹೊಸ ಸೇರ್ಪಡೆಯಷ್ಟೇ. -ಏಜೆನ್ಸೀಸ್.