_1786626438024.webp?w=480&auto=format%2Ccompress&fit=max)
_1786626438024.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ‘ಉಪಾಧ್ಯಕ್ಷ’ ಬಳಿಕ ಹಾಸ್ಯ ಕಲಾವಿದ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ ‘ಜೋಡೆತ್ತು’. ಈ ಚಿತ್ರಕ್ಕೆ ಸುಧಾಕರ್ ಛಾಯಾಗ್ರಹಣದ ಜತೆಗೆ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿಕ್ಕಣ್ಣ ಜತೆಗೆ ತೆಲುಗಿನ ಸುನಿಲ್ ಅಭಿನಯಿಸುತ್ತಿರುವುದು ವಿಶೇಷ. ಈಗಾಗಲೇ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದ್ದು, ಇತ್ತೀಚೆಗೆ ಮೈಸೂರಿನ ಹೊರಭಾಗದ ಇಮ್ಮಾವು ಬಳಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಯಿತು. ಸಾವಿರಕ್ಕೂ ಅಧಿಕ ಕಲಾವಿದರು ಮತ್ತು ನೂರಾರು ಎತ್ತಿನ ಗಾಡಿಗಳನ್ನು ಬಳಸಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಚಿತ್ರೀಕರಿಸಲಾಯಿತು. ಚಿಕ್ಕಣ್ಣ, ‘ಕಳೆದ ಒಂದು ವಾರದಿಂದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುತ್ತಿದ್ದೇವೆ. ಇದರೊಂದಿಗೆ ಮಾತಿನ ಭಾಗದ ಶೂಟಿಂಗ್ ಮುಕ್ತಾಯವಾಗಲಿದೆ. ಎರಡು ಹಾಡು ಮಾತ್ರ ಬಾಕಿಯಿದೆ. ಈ ಎತ್ತಿನಗಾಡಿ ಸ್ಪರ್ಧೆಯ ಶೂಟಿಂಗ್‌ಗಾಗಿ ಸುತ್ತಮುತ್ತ ಊರುಗಳಿಂದ ಎತ್ತಿನ ಗಾಡಿಗಳನ್ನು ತರಿಸಲಾಗಿದೆ’ ಎಂದು ಮಾಹಿತಿ ನೀಡಿದರು. ನಿರ್ದೇಶಕ ಸುಧಾಕರ್, ‘‘ಜೋಡೆತ್ತು’ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, 1990-95ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಚಿತ್ರದಲ್ಲಿ ಎಮೋಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಇರಲಿದೆ. ಶೇ.95ರಷ್ಟು ಶೂಟಿಂಗ್ ಮುಗಿದಿದೆ. ಮೈಸೂರು, ಮಂಡ್ಯ, ಮದ್ದೂರು, ಚನ್ನಪಟ್ಟಣ ಸೇರಿ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ’ ಎಂದು ಹೇಳಿದರು. ಚಿಕ್ಕಣ್ಣ, ಸುನಿಲ್ ಜತೆ ಕಲ್ಯಾಣಿ, ಜಯಶ್ರೀ, ಉಗ್ರಂ ಮಂಜು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ, ಹುಲಿ ಕಾರ್ತಿಕ್ ತಾರಾಗಣದಲ್ಲಿದ್ದಾರೆ.