Toss - ಸೆ. 18ಕ್ಕೆ ಅರ್ಜುನ್​ ದೇವ್​ ನಟಿಸಿ, ನಿರ್ದೇಶಿಸಿರುವ ಟಾಸ್​

Toss
Toss
Published on
Toss -

ಕೋಸ್ಟಲ್​ವುಡ್​ ಸೂಪರ್​ಸ್ಟಾರ್​ ಅರ್ಜುನ್​ ದೇವ್​ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಟಾಸ್​'. ಇದು ರೊಮ್ಯಾಂಟಿಕ್​ ಕಾಮಿಡಿ ಆ್ಯಕ್ಷನ್​ ಡ್ರಾಮಾ ಚಿತ್ರವಾಗಿದ್ದು, ಸೆ. 18ಕ್ಕೆ ರಾಜ್ಯಾದ್ಯಂತ ಕನ್ನಡ ಮತ್ತು ತುಳು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. "ಪಿಚ್ಚರ್​' ಸಿನಿಮಾ ನಿರ್ಮಿಸಿದ್ದ ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಪತ್ನಿ ಶಿಲ್ಪಾ, ಇದೀಗ "ಗೋಲ್ಡನ್​ ಮೂವೀಸ್​' ಬ್ಯಾನರ್​ನಲ್ಲಿ "ಟಾಸ್​'ಅನ್ನು ಅರ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ನಾಗಾರ್ಜುನ್​ ಶರ್ಮಾ ಸಾಹಿತ್ಯ, ಮಣಿಕಾಂತ್​ ಕದ್ರಿ ಸಂಗೀತದಲ್ಲಿ ಮೂಡಿಬಂದಿರುವ "ಬೇಡ ಯಾವ ಸುಂದರಿ' ಎಂದು ಸಾಗುವ ರೊಮ್ಯಾಂಟಿಕ್​ ಸಾಂಗ್​ ಬಿಡುಗಡೆ ಮಾಡಲಾಗಿದ್ದು, ಅರ್ಜುನ್​ ಮತ್ತು ನಾಯಕಿ ಸುತೇಜ್​ ಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ. ರಂಗಭೂಮಿ ಮತ್ತು ತುಳು ಚಿತ್ರರಂಗದ ದಿಗ್ಗಜ ಡಾ. ದೇವದಾಸ್​ ಕಾಪಿಕಾಡ್​ ಮಗನ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ, "ಅರ್ಜುನ್​ ಮನೆಯಲ್ಲಿ ನನಗೆ ಮಗ. ಕೆಲಸದ ವಿಷಯದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ. ಅತ್ಯುತ್ತಮ ತಂತ್ರಜ್ಞ. ಹೀಗಾಗಿ ನಾನು ಚಿತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಆತನ ಹಿಂದೆ ನಿಂತೆ' ಎಂದು ಪುತ್ರನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಟ ದೇವದಾಸ್​ ಕಾಪಿಕಾಡ್​ ಮೇಲಿನ ಗೌರವ ಮತ್ತು ಚಿತ್ರದ ಕಂಟೆಂಟ್​ ನೋಡಿ ಅರ್ಜುನ್​ರನ್ನು ಕನ್ನಡಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ಶಿವರಾಜಕುಮಾರ್​ "ಟಾಸ್​' ಝಲಕ್​ ನೋಡಿ ತಂಡಕ್ಕೆ ಶುಭಹಾರೈಸಿದ್ದಾರೆ. ಅರ್ಜುನ್​, ಸುತೇಜ್​, ದೇವದಾಸ್​ ಜತೆ ಗರುಡ ರಾಮ್​, ಬಾಲಾಜಿ ಮನೋಹರ್​, ಕೃತಿ ಶೆಟ್ಟಿ, ನವೀನ್​ ಡಿ. ಪಡೀಲ್​, ಅರವಿಂದ್​ ಬೋಳಾರ್​, ಭೋಜರಾಜ ವಾಮಂಜೂರು, ಶಶಿರಾಜ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಜೋಯೆಲ್​ ಡಿಸೋಜಾ ಛಾಯಾಗ್ರಹಣ, ಯಾಶ್ವಿನ್​ ಕೆ. ಶೆಟ್ಟಿಗಾರ್​ ಸಂಕಲನದಲ್ಲಿ "ಟಾಸ' ಮೂಡಿಬಂದಿದೆ.

ಕೋಟ್​:

ರೊಮ್ಯಾಂಟಿಕ್​ ಕಾಮಿಡಿ ಆ್ಯಕ್ಷನ್​ ಡ್ರಾಮಾ ಜಾನರ್​ ಆಗಿದ್ದರೂ ಚಿತ್ರದಲ್ಲಿ ಎಲ್ಲ ರೀತಿಯ ಎಮೋಷನ್​ಗಳೂ ಇವೆ. ಪ್ರತಿ ದೃಶ್ಯವನ್ನೂ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಎರಡು ಬಾರಿ ಚಿತ್ರೀಕರಿಸಿದ್ದೇವೆ. ಹೀಗಾಗಿ 40 ದಿನ ಹಾಕಿಕೊಂಡಿದ್ದ ಶೆಡ್ಯೂಲ್​ ಪ್ಲ್ಯಾನ್​​ 60 ದಿನವಾಯಿತು. ಕಳೆದ 14 ವರ್ಷಗಳಿಂದ ತಂದೆ ಮತ್ತು ಚಿತ್ರರಂಗವನ್ನು ನೋಡಿ ಕಲಿತಿದ್ದೇನೆ. ಆ ಅನುಭವಗಳ ಲಿತಾಂಶ "ಟಾಸ್​'.
- ಅರ್ಜುನ್​ ದೇವ್​, ನಾಯಕ/ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net