Arjun Dev - ಸ್ಯಾಂಡಲ್​ವುಡ್​ಗೆ ನಾಯಕ, ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಕೋಸ್ಟಲ್​ವುಡ್​ ಸ್ಟಾರ್

Arjun Dev
Arjun Dev
Published on
Arjun Dev -
ತುಳು ರಂಗಭೂಮಿ ಮತ್ತು ಚಿತ್ರರಂಗದ ದಿಗ್ಗಜ ಡಾ. ದೇವದಾಸ್​ ಕಾಪಿಕಾಡ್​ ಪುತ್ರ ಅರ್ಜುನ್​ ದೇವ್​ ನಟಿಸಿ, ನಿರ್ದೇಶಿಸಿರುವ ಚಿತ್ರ "ಟಾಸ್​'. ಇದೊಂದು ರೊಮ್ಯಾಂಟಿಕ್​ ಕಾಮಿಡಿ ಆ್ಯಕ್ಷನ್​ ಜಾನರ್​ ಚಿತ್ರವಾಗಿದ್ದು, ದೇವದಾಸ್​ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಇಲ್ಲಿ ಅರ್ಜುನ್​ಗೆ ಯುವನಟಿ ಸುತೇಜ್​ ಶೆಟ್ಟಿ ನಾಯಕಿಯಾಗಿದ್ದು, ಗರುಡ ರಾಮ್​, ಬಾಲಾಜಿ ಮನೋಹರ್​, ನವೀನ್​ ಪಡೀಲ್​, ಅರವಿಂದ್​ ಬೋಳಾರ್​, ಭೋಜರಾಜ ವಾಮಂಜೂರ್​, ಪ್ರಕಾಶ್​ ತೂಮಿನಾಡ್​, ದೀಪಕ್​ ರೈ ಪಾಣಾಜೆ ತಾರಾಗಣದಲ್ಲಿದ್ದಾರೆ. ಇಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ​, "2022ರ "ಅಬತರ' ಬಳಿಕ "ಟಾಸ್​'ಗಾಗಿ ಸಮಯ ತೆಗೆದುಕೊಂಡೆ. ಕಥೆ ತುಂಬ ಚೆನ್ನಾಗಿದೆ. ಅಪ್ಪ ಕಥೆಯ ಒಂದು ಡ್ರಾಫ್ಟ್​ ಮಾಡಿಕೊಟ್ಟರು. ಬಳಿಕ ನಾನು ಎಂಟು ವರ್ಷನ್​ಗಳನ್ನು ಮಾಡಿದೆ. ಕ್ರಮೇಣ ಕಥೆ ಭರವಸೆ ನೀಡಿದ ಕಾರಣ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮಾಡಲು ನಿರ್ಧರಿಸಿದೆವು. ಎರಡೂ ಭಾಷೆಗಳಲ್ಲಿ ಎರಡು ಬಾರಿ ಚಿತ್ರೀಕರಿಸಲಾಗಿದ್ದು, ಹೊಸ ರೀತಿಯ ಅನುಭವ ನೀಡಿದ ಚಿತ್ರವಿದು. ಮಂಗಳೂರು ಹಿನ್ನೆಲೆಯ "ಒಂದು ಮೊಟ್ಟೆಯ ಕಥೆ', "ಕಾಂತಾರ', "ಸು ಫ್ರಮ್​ ಸೋ' ಹೀಗೆ ಬೇರೆ ಬೇರೆ ಜಾನರ್​ ಸಿನಿಮಾಗಳು ಬಂದಿವೆ. ಆದರೆ, ರೊಮ್ಯಾಂಟಿಕ್​ ಕಾಮಿಡಿ ಆ್ಯಕ್ಷನ್​ ಕಮರ್ಷಿಯಲ್​ ಚಿತ್ರ ಬಂದಿಲ್ಲ. ಹೀಗಾಗಿ ಜನರಿಗೆ "ಟಾಸ್​' ಇಷ್ಟವಾಗುವ ಭರವಸೆ ಇದೆ. ಕನ್ನಡ, ತುಳು ಭಾಷೆಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ತೆಲುಗು, ಮಲಯಾಳಂ ಸೇರಿ ಬೇರೆ ಭಾಷೆಗಳಲ್ಲೂ ಡಬ್​ ಮಾಡಿ ರಿಲೀಸ್​ ಮಾಡುವ ಯೋಜನೆಯಿದೆ' ಎಂದು ಮಾಹಿತಿ ನೀಡುತ್ತಾರೆ.

ಮನೆಯಲ್ಲೇ ಇದೆ ವಿಶ್ವವಿದ್ಯಾಲಯ!

ದೇವದಾಸ್​ ಕಾಪಿಕಾಡ್​ರಂತಹ ದಿಗ್ಗಜ ಕಲಾವಿದರ ಪುತ್ರನಾದ ಕಾರಣ ಅರ್ಜುನ್​ಗೆ ಬಾಲ್ಯದಿಂದಲೇ ಕಲೆಯ ಮೇಲೆ ಒಲವು ಜಾಸ್ತಿ. "ಎಲ್ಲರಿಗೂ ಸಿನಿಮಾದಲ್ಲಿ ನಟಿಸುವ, ಕೆಲಸ ಮಾಡುವ ಆಸೆ ಇರುತ್ತದೆ. ಆದರೆ, ಕಲಿಕೆ ಕಷ್ಟ. ನನ್ನ ಅಪ್ಪನೇ ನನಗೆ ಉಚಿತ ವಿಶ್ವವಿದ್ಯಾಲಯ. ಅವರನ್ನು ನೋಡಿ ಕಲಿತಿದ್ದೇ ಹೆಚ್ಚು. ಸಣ್ಣ ವಯಸ್ಸಿನಿಂದಲೇ ಕಥೆ ಬರೆದು, ಅಭಿನಯಿಸುತ್ತಿದ್ದೆ. ಕಾಲೇಜು ದಿನಗಳಲ್ಲೇ ರಾಜ್ಯ ಮಟ್ಟದ ರಂಗಭೂಮಿ ಸ್ಪರ್ಧೆಗಳಲ್ಲಿ ನಾಟಕಗಳನ್ನು ಮಾಡಿದ್ದೇನೆ. ಚಿತ್ರರಂಗದಲ್ಲೂ ನಟನೆಗೆ ಸೀಮಿತವಾಗದೇ, ಎಲ್ಲ ವಿಭಾಗಗಲ್ಲಿ ಕೆಲಸ ಮಾಡುತ್ತಿದ್ದೆ. ಆ ಅನುಭವಗಳಿಂದ ಆತ್ಮವಿಶ್ವಾಸ ಬಂದ ಬಳಿಕ "ಟಾಸ್​' ಶುರು ಮಾಡಿದೆ. ಸ್ಟಾರ್​ ಕಿಡ್​ ಆಗಿರುವುದು ನನಗೆ ಪ್ರೆಷರ್​. ಅಪ್ಪನ ಲೆಗಸಿ ಮುಂದೆ ನಾನೇನೂ ಅಲ್ಲ' ಎಂದು ಹೇಳಿಕೊಳ್ಳುತ್ತಾರೆ ಅರ್ಜುನ್​.

ಕೋಸ್ಟಲ್​ವುಡ್​ ರೈಸಿಂಗ್​

ಇತ್ತೀಚಿನ ವರ್ಷಗಳಲ್ಲಿ ತುಳು ಚಿತ್ರರಂಗದ ಬೆಳವಣಿಗೆಯ ಬಗ್ಗೆ ಸಂತಸ ಹಂಚಿಕೊಳ್ಳುವ ಅರ್ಜುನ್​, "ಬೇರೆ ಬೇರೆ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಹಲವರು ಈಗ ವಾಪಸ್​ ತುಳು ಚಿತ್ರರಂಗಕ್ಕೆ ಬಂದು, ಒಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಈ ಬೆಳವಣಿಗೆ ಕೋಸ್ಟಲ್​ವುಡ್​ಗೆ ಬಲ ನೀಡಿದೆ. ಈಗಂತೂ ಒಂದೇ ವಾರ ಎರಡೆರಡು ಸಿನಿಮಾ ರಿಲೀಸ್​ ಆಗುವ ಪ್ರೆಷರ್​ ಕೂಡ ಇದೆ' ಎನ್ನುತ್ತಾರೆ. ಅಂದಹಾಗೆ, "ಟಾಸ್​' ಬಳಿಕ ಅರ್ಜುನ್​ ಎರಡು ಕಥೆಗಳನ್ನು ಓಕೆ ಮಾಡಿದ್ದಾರಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net