ಇನ್ನು ಹೇಳಬೇಕಾದ ವಿಷಯಗಳನ್ನು ದುನಿಯಾ ವಿಜಯ್ ಸ್ಪಷ್ಟವಾಗಿ ಹೇಳಿದ್ದಾರೆ. ಕೇವಲ ಲವ್‌ಸ್ಟೋರಿಯತ್ತ ಗಮನಹರಿಸದೆ ಬೀದಿ ದೀಪಗಳಡಿ ಬದುಕುವ ಜನಸಾಮಾನ್ಯರ ಬದುಕು, ಬವಣೆಯನ್ನು ಬಿಡಿ ಬಿಡಿಯಾಗಿ ಬಿತ್ತರಿಸಿದ್ದಾರೆ. ಅದಕ್ಕಾಗಿ ಹಲವಾರು ಪಾತ್ರಗಳನ್ನು ಸೃಷ್ಟಿಸಿದ್ದು, ಅವರ ಮಧ್ಯೆಯೇ ವಿನಯ್ ರಾಜಕುಮಾರ್ ಹಾಗೂ ಮೋನಿಷಾ ಪಾತ್ರಗಳು ಕಳೆದುಹೋದಂತೆ ಭಾಸವಾಗುತ್ತದೆ. ಇನ್ನು ಪೊಲೀಸ್ ಅಧಿಕಾರಿಗಳ ಸಂಭಾಷಣೆ ಕೆಲವೆಡೆ ನಗು ತರಿಸಿದರೆ, ಇನ್ನು ಕೆಲವೆಡೆ ಕಿರಿಕಿರಿ ಅನಿಸುತ್ತದೆ. ಚರಣ್ ರಾಜ್ ಸಂಗೀತ ಸಂಯೋಜನೆ ಇಡೀ ಸಿನಿಮಾದ ಆತ್ಮ. ಕಥೆಗೆ ಪೂರಕವಾಗಿ ಸಾಹಿತ್ಯ, ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಮಾಸ್ತಿ ಸಂಭಾಷಣೆ ಹರಿತವಾಗಿದೆ. ಬೆಂಗಳೂರು ಮಹಾನಗರದ ಓಣಿ-ಸಂಧಿಗಳನ್ನು ಛಾಯಾಗ್ರಾಹಕ ಶಿವಸೇನಾ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನು ವಿನಯ್ ರಾಜಕುಮಾರ್ ನಟನೆ ಸಹಜವಾಗಿ ಮೂಡಿಬಂದಿದೆ. ಮೋನಿಷಾ ವಿಜಯ್ ಕುಮಾರ್ ಕಣ್ಣುಗಳಲ್ಲಿಯೇ ನಟಿಸಿ, ಚೊಚ್ಚಲ ಚಿತ್ರದಲ್ಲೇ ‘ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಉಳಿದಂತೆ ಉಮಾಶ್ರೀ, ಗಿರಿರಾಜ್, ವಿನೋದ್, ಪುನೀತ್ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.