D. SATHYA PRAKASH: ಮಕ್ಕಳಿಗೆ ಭಾಷೆ ಹೇಳಿಕೊಟ್ಟಷ್ಟು ಬದುಕುತ್ತದೆ

ಡಿ.ಸತ್ಯಪ್ರಕಾಶ್
ಡಿ.ಸತ್ಯಪ್ರಕಾಶ್
Published on

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನವನ್ನು ಕನ್ನಡಕ್ಕೆ ಬಳಕೆ ಮಾಡಬೇಕು
  • ತಾಂತ್ರಿಕವಾಗಿಯೂ ಕನ್ನಡವನ್ನು ಬಲಿಷ್ಠಗೊಳಿಸಬೇಕು
  • ಏನೇ ಕಲಿಸಬೇಕು ಎಂದರೂ ಇಂದಿನ ಶೈಲಿಯಲ್ಲಿಯೇ ತಲುಪಬೇಕು
ಡಿ.ಸತ್ಯಪ್ರಕಾಶ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ
ಜಾಗತೀಕರಣದಿಂದಾಗಿ ಎಲ್ಲ ಕಂಪನಿಗಳು ಹೊರದೇಶಗಳ ಜತೆ ವ್ಯವಹರಿಸುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸದ ಭಾಷೆ ಬೇರೆಯಾಗಿರುವುದರಿಂದ ವ್ಯವಹಾರಿಕವಾಗಿ ಕನ್ನಡ ಭಾಷೆ ಬಳಕೆ ಕಡಿಮೆಯಾಗಿದೆ ಅನಿಸುತ್ತದೆ. ವಾಸ್ತವ ಹೀಗಿರುವಾಗ ಮನೆಯೊಳಗೆ ಕನ್ನಡ ಬಳಸುವುದು ಹೆಚ್ಚಾಗಬೇಕು.
ಇದು ತಂತ್ರಜ್ಞಾನದ ಯುಗ. ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ), ಚಾಟ್ ಜಿಪಿಟಿ ಪಾರಮ್ಯ ಕಾಣುತ್ತಿದ್ದೇವೆ. ಈ ತಂತ್ರಜ್ಞಾನವನ್ನು ಕನ್ನಡಕ್ಕೆ ಬಳಕೆ ಮಾಡಿಕೊಂಡು, ಭೌತಿಕ ಉಪಕರಣಗಳ ಮೂಲಕ ಮಕ್ಕಳಿಗೆ ಆಸಕ್ತಿ ಅನಿಸುವಂತಹ ವಿಷಯಗಳನ್ನು ತಿಳಿಸಬೇಕು. ಗಿಡವಾಗಿರುವಾಗಲೇ ಚೆನ್ನಾಗಿ ಪೋಷಿಸಿದರೆ, ಅದು ಹೆಮ್ಮರವಾಗುವುದು. ಆಸಕ್ತಿ ಅನಿಸುವ ವಿಚಾರಗಳು, ಐತಿಹಾಸಿಕ ವ್ಯಕ್ತಿಗಳು, ನಾಡಿನ ಗಣ್ಯರ ಜೀವನ, ಸಾಧಕರು ಹಾಗೂ ಕನ್ನಡದ ಕಥೆಗಳನ್ನು ಕಾರ್ಟೂನ್ ಮೂಲಕ ತೋರಿಸಿದಾಗ ಮಕ್ಕಳಿಗೂ ಭಾಷೆಯ ಬಗ್ಗೆ ಪ್ರೀತಿ ಮೂಡುತ್ತದೆ. ಹೀಗಾಗಿ ತಾಂತ್ರಿಕವಾಗಿಯೂ ಕನ್ನಡವನ್ನು ಬಲಿಷ್ಠಗೊಳಿಸಬೇಕು.
ನಾವೇನೇ ತಲುಪಬೇಕು, ಏನೇ ಕಲಿಸಬೇಕು ಎಂದರೂ ಇಂದಿನ ಶೈಲಿಯಲ್ಲಿಯೇ ತಲುಪಬೇಕು, ಕಲಿಸಬೇಕು. ಇತ್ತೀಚೆಗೆ ಕನ್ನಡದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಬಂತು. ಹೆಚ್ಚು ಪಾಲಕರು ಮಕ್ಕಳ ಜತೆ ತೆರಳಿ ಸಿನಿಮಾ ನೋಡಿದರು. ಅಂತಹ ಸಿನಿಮಾಗಳು ಹೆಚ್ಚಾಗಬೇಕು. ಮಕ್ಕಳಿಗೆ ಭಾಷೆ ಕೊಟ್ಟಷ್ಟು ಅದು ಹೆಚ್ಚು ಬದುಕಿರುತ್ತದೆ. ಶಿವರಾಮ ಕಾರಂತರು, ಕುವೆಂಪು, ಜಿ.ಪಿ.ರಾಜರತ್ನಂ ಸೇರಿ ಅನೇಕ ಸಾಹಿತಿಗಳು ಮಕ್ಕಳಿಗಾಗಿಯೇ ಸಾಹಿತ್ಯ ರಚಿಸಿದ್ದಾರೆ. ಅಂತಹ ಸಾಹಿತ್ಯ ಓದುವ ಕೆಲಸವಾಗಬೇಕು. ನಾವು ಕನ್ನಡ ಮಾತನಾಡಿದರೆ, ಅವರು ನಮ್ಮ ಜತೆ ಕನ್ನಡದಲ್ಲಿಯೇ ಮಾತನಾಡುತ್ತಾರೆ. ಹಾಗಾಗಿ, ನಮ್ಮಿಂದಲೇ ಭಾಷೆ ಎಂದು ನಮ್ಮ ಕೆಲಸವನ್ನು ನಾವು ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net