ಕನ್ನಡಕ್ಕೆ ಬಂದ ಕುನಾಲ್ : ‘ಲಂಬೋದರ 2.0’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಬಾಲಿವುಡ್ ನಟ

ಕುನಾಲ್ ಕಪೂರ್
ಕುನಾಲ್ ಕಪೂರ್
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಬಾಲಿವುಡ್ ನಟ
  • ದೇಶವನ್ನೇ ಪ್ರತಿನಿಧಿಸುವ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ
  • 10 ದಿನಗಳ ಶೂಟಿಂಗ್ ಮುಗಿಸಿದ ತಾರೆ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಸುನಿಲ್ ಶೆಟ್ಟಿ (‘ಪೈಲ್ವಾನ್’, ‘ಜೈ’), ಸಂಜಯ್ ದತ್ (‘ಕೆಜಿಎಫ್​’, ‘ಕೆಡಿ’), ಗುಲ್ಶಾನ್ ದೇವಯ್ಯ (‘ಕಾಂತಾರಾ ಅಧ್ಯಾಯ 1’) ಸೇರಿ ಹಲವರು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಮಿಂಚಿದ್ದಾರೆ. ಇದೀಗ ಮತ್ತೊಬ್ಬ ಹಿಂದಿ ನಟ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರೇ ಕುನಾಲ್ ಕಪೂರ್. ಹಿಂದಿಯ ‘ರಂಗ್ ದೇ ಬಸಂತಿ’, ‘ಡಾನ್ 2’, ‘ಡಿಯರ್ ಜಿಂದಗಿ’ ಸೇರಿ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕುನಾಲ್ ಇದೀಗ ‘ಲಂಬೋದರ 2.0’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ, ಅನಿಲ್ ಶೆಟ್ಟಿ ಅಭಿನಯದ ಈ ಚಿತ್ರದಲ್ಲಿ ಅವರು ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಚಿತ್ರತಂಡ ಸ್ವಾಗತಿದೆ. ಬಾಲಿವುಡ್ ನಟನ ಆಯ್ಕೆ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಹೇಳುವಂತೆ, ‘ಭಾರತೀಯ ಚಿತ್ರರಂಗದಲ್ಲಿ ಕುನಾಲ್ ಕಪೂರ್ ತಮ್ಮದೇ ಕೊಡುಗೆ ಮೂಲಕ ಗುರುತಿಸಿಕೊಂಡಿದ್ದಾರೆ. ಎಲ್ಲ ರಾಜ್ಯಗಳಿಗೂ ಅವರು ಚಿರಪರಿಚಿತರು. ನಮ್ಮ ಚಿತ್ರದಲ್ಲೂ ಕೂಡ ಇಡೀ ದೇಶಕ್ಕೆ ಸಂಬಂಧಿಸಿದಂತೆ ಒಂದು ವಿಷಯ ಬರುತ್ತದೆ. ಆ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಶೀಘ್ರದಲ್ಲಿ ಅವರ ಪಾತ್ರವನ್ನು ಪರಿಚಯಿಸಲಾಗುತ್ತದೆ. ಮೊದಲಿಗೆ ನಟರಾದ ಅನಿಲ್ ಶೆಟ್ಟಿ, ಕುನಾಲ್‌ರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ ಉತ್ಸುಕರಾದ ಅವರು ನಟಿಸಲು ಒಪ್ಪಿಕೊಂಡರು’ ಎಂದು ಮಾಹಿತಿ ನೀಡುತ್ತಾರೆ. ಸದ್ಯ ಕುನಾಲ್ ಕಪೂರ್ ತೆಲುಗಿನ ‘ವಿಶ್ವಂಭರ’, ‘ರಾಮಾಯಣ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನ ವಿಶೇಷ ಒಡನಾಟ
ಬೆಂಗಳೂರಿನ ಜತೆ ವಿಶೇಷ ಒಡನಾಟವನ್ನು ಹೊಂದಿರುವ ಕುನಾಲ್ ಕಪೂರ್ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರಂತೆ. ಸ್ವತಃ ಅವರೇ ಕನ್ನಡದಲ್ಲಿ ಡೈಲಾಗ್ ಹೇಳುತ್ತಿದ್ದಾರಂತೆ. ‘ಕುನಾಲ್ ಈಗಾಗಲೇ 10 ದಿನಗಳ ಶೂಟಿಂಗ್ ಮುಗಿಸಿದ್ದಾರೆ. ಚಿತ್ರೀಕರಣದಲ್ಲಿ ಸ್ವತಃ ಅವರೇ ಕನ್ನಡದಲ್ಲಿ ಡೈಲಾಗ್ ಹೇಳುತ್ತಿರುವುದು ವಿಶೇಷ. ಕೆಲವೊಂದು ಕನ್ನಡ ಪದಗಳು ಗೊತ್ತಾಗದಿರುವಾಗ ನಮ್ಮನ್ನು ಕೇಳಿ ಪದೇ ಪದೇ ಉಚ್ಚರಿಸಿ ಬಳಿಕ ಹೇಳುತ್ತಿದ್ದರು. ಇನ್ನು ಬೆಂಗಳೂರಿನ ವಿಶೇಷ ಒಡನಾಟ ಹೊಂದಿರುವ ಕುನಾಲ್ ಇಲ್ಲಿನ ಪರಿಸರ ಹಾಗೂ ಊಟವನ್ನು ಇಷ್ಟಪಡುತ್ತಾರೆ. ಕನ್ನಡ ಭಾಷೆಯನ್ನು ತುಂಬಾ ಗೌರವಿಸುತ್ತಾರೆ’ ಎಂದು ಸುನಿ ಮಾಹಿತಿ ನೀಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net