ಭವ್ಯಾ ಗೌಡ ‘ದೇವಿ’ ಅವತಾರ : ‘ಬಿಗ್‌ಬಾಸ್’ ಬಳಿಕ ಕಿರುತೆರೆ, ಹಿರಿತೆರೆಯಲ್ಲಿ ಬಿಜಿಯಾದ ನಟಿ

ಭವ್ಯಾ ಗೌಡ
ಭವ್ಯಾ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಹಿರಿತೆರೆ, ಕಿರುತೆರೆಯಲ್ಲಿ ಹೆಜ್ಜೆ ಹಾಕುತ್ತಿರುವ ಭವ್ಯಾ ಗೌಡ
  • ದೇವಿ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾದ ನಟಿ
  • ಶೂಟಿಂಗ್ ಬಿಜಿ ನಡುವೆ ಪಾತ್ರಕ್ಕಾಗಿ ವರ್ಕಶಾಪ್ ಆರಂಭಿಸಿದ ನಟಿ

ಬೆಂಗಳೂರು:

ಕನ್ನಡ ಧಾರಾವಾಹಿ ಲೋಕದಲ್ಲಿ ಮಿಂಚಿ ಬಳಿಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿಯರ ಪಟ್ಟಿ ದೊಡ್ಡದಿದೆ. ರಾಧಿಕಾ ಪಂಡಿತ್, ರಚಿತಾ ರಾಮ್, ಸಂಗೀತಾ ಶೃಂಗೇರಿ, ನಮ್ರತಾ ಗೌಡ.. ಇದೀಗ ಈ ಸಾಲಿಗೆ ‘ಗೀತಾ’ ಖ್ಯಾತಿಯ ಭವ್ಯಾ ಗೌಡ ಸೇರ್ಪಡೆಯಾಗುತ್ತಿದ್ದಾರೆ. ಕಿರುತೆರೆಯಲ್ಲಿ ಛಾಪು ಮೂಡಿಸಿದ ಬಳಿಕ ಅವರು ‘ಬಿಗ್‌ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಯಾಗಿದ್ದರು. ಅಲ್ಲಿಂದ ಸಿಕ್ಕ ಯಶಸ್ಸು ನಟಿಯ ಬದುಕು ಬದಲಾಗಿದ್ದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಲ್ಯಾಂಡ್‌ಲಾರ್ಡ್’ನಲ್ಲಿ ನಟಿಸಿರುವ ಭವ್ಯಾ ಗೌಡ ‘ದೇವಿ’ ಚಿತ್ರದ ಮೂಲಕ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕನಟಿಯಾಗುತ್ತಿದ್ದಾರೆ. ‘‘ಬಿಗ್‌ಬಾಸ್’ನಿಂದ ಸಿಕ್ಕಿರುವ ಯಶಸ್ಸಿನ ಬಗ್ಗೆ ಖುಷಿಯಿದೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದೇನೆ. ಸದ್ಯ ಚೇತನ್‌ಕುಮಾರ್ ಅಭಿನಯದ ‘ದೇವಿ’ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈಗಾಗಲೇ ಎರಡು ಶೆಡ್ಯೂಲ್ ಮುಗಿಸಿರುವ ಚಿತ್ರತಂಡವು ಮೂರನೇ ಹಂತದ ಶೂಟಿಂಗ್‌ಗೆ ತಯಾರಿ ನಡೆಸುತ್ತಿದೆ. ಮುಂದಿನ ಹಂತದ ಶೂಟಿಂಗ್‌ನಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಸದ್ಯ ‘ಕರ್ಣ’ ಧಾರಾವಾಹಿ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದೇನೆ. ಡೇಟ್ ಕೂಡ ಕ್ಲ್ಯಾಶ್ ಆಗುತ್ತಿದೆ. ಅದನ್ನು ಚಿತ್ರತಂಡ ಅರ್ಥಮಾಡಿಕೊಂಡಿದೆ. ಬಿಡುವು ಮಾಡಿಕೊಂಡು ‘ದೇವಿ’ ತಂಡ ಸೇರಿಕೊಳ್ಳಲಿದ್ದೇನೆ. ಹೊಸಬರ ತಂಡ. ಸಿನಿಮಾದ ಮೇಲಿನ ಪ್ಯಾಷನ್ ಚೇತನ್ ಹಾಗೂ ತಂಡಕ್ಕೆ ಎದ್ದು ಕಾಣುತ್ತದೆ. ಇಲ್ಲಿ ನಾನು ಮಧ್ಯಮ ವರ್ಗದ ಕಾಲೇಜು ಹುಡುಗಿಯ ಪಾತ್ರದಲ್ಲಿದ್ದೇನೆ. ಸದ್ಯಕ್ಕೆ ಹೆಸರು ರಿವೀಲ್ ಮಾಡುವಂತಿಲ್ಲ. ಪಾತ್ರಕ್ಕೆ ಹಲವು ಆಯಾಮಗಳಿದ್ದು, ಮೂಡ್‌ಗೆ ತಕ್ಕಂತೆ ಆಕೆಯ ಭಾವನೆಗಳಲ್ಲಿ ಬದಲಾವಣೆಯಾಗುತ್ತವೆ. ನಾನೇ ತಯಾರಿ ನಡೆಸಿಯೇ ಸೆಟ್‌ಗೆ ತೆರಳಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿ ಕೆಲ ದಿನಗಳ ವರ್ಕ್‌ಶಾಪ್ ನಡೆಸಲಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು.

ವ್ಯತ್ಯಾಸ ಅಂತೇನಿಲ್ಲ

ಕಿರುತೆರೆ ಹಾಗೂ ಹಿರಿತೆರೆಯ ಕೆಲಸ ವಾತಾವರಣದ ಕುರಿತಂತೆ ವಿಭಿನ್ನ ಅನುಭವ ಇದೆಯೇ ಎಂಬುದಕ್ಕೆ ನಟಿ ಭವ್ಯಾ ಗೌಡ ಉತ್ತರಿಸಿ, ‘ಕಿರುತೆರೆ, ಹಿರಿತೆರೆ ಎಂದು ವ್ಯತ್ಯಾಸ ಮಾಡುವುದು ಬೇಡ. ಎಲ್ಲಿಯಾದರೂ ಕ್ಯಾಮರಾ ಮುಂದೆಯೇ ಕೆಲಸ ಮಾಡಬೇಕು. ಹಾಗಾಗಿ, ಎರಡು ಒಂದೇಯಾಗಿದ್ದು, ವ್ಯತ್ಯಾಸ ಅಂತಾ ಎಂದಿಗೂ ಅನಿಸಿಲ್ಲ’ ಎನ್ನುವ ಅವರು ಸದ್ಯ ಎರಡು-ಮೂರು ಕಥೆಗಳನ್ನು ಕೇಳಿದ್ದು ‘ದೇವಿ’ ಮುಗಿದ ಬಳಿಕ ನಿರ್ಧರಿಸಲಿದ್ದಾರಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net