Jodettu - ಜೋಡೆತ್ತು ಚಿತ್ರದಿಂದ ಮಹೇಶ್​ ಔಟ್​, ಸುಧಾಕರ್​ ಇನ್​!

Jodettu
Jodettu
Published on
Jodettu - "ಉಪಾಧ್ಯಕ್ಷ' ಯಶಸ್ಸಿನ ಬಳಿಕ "ಲಕ್ಷಿ$್ಮಪುತ್ರ'ದಲ್ಲಿ ನಾಯಕನಾಗಿ ನಟಿಸುತ್ತಿರುವ ಹಾಸ್ಯನಟ ಚಿಕ್ಕಣ್ಣ ಅದರ ನಡುವೆಯೇ "ಜೋಡೆತ್ತು' ಸಿನಿಮಾ ಒಪ್ಪಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಟೀಸರ್​ ಮೂಲಕ ಚಿತ್ರದ ಘೋಷಣೆ ಮಾಡಲಾಗಿತ್ತು. ಸದ್ಯ "ಅಯೋಗ್ಯ 2' ಚಿತ್ರದಲ್ಲಿ ಬಿಜಿಯಾಗಿರುವ "ಮದಗಜ' ನಿರ್ದೇಶಕ ಮಹೇಶ್​ ಕುಮಾರ್​ "ಜೋಡೆತ್ತು'ಗೆ ಆ್ಯಕ್ಷನ್​-ಕಟ್​ ಹೇಳಬೇಕಿತ್ತು. ಆದರೆ, "ಜೋಡೆತ್ತು' ತಂಡ ಹೊಸ ವರ್ಷದಿಂದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಮಹೇಶ್​ ತಂಡದಿಂದ ಹೊರ ನಡೆದಿದ್ದಾರೆ. "ಅಯೋಗ್ಯ 2' ಶೂಟಿಂಗ್​ನಲ್ಲಿ ಬಿಜಿಯಿರುವ ಕಾರಣ, ಅವರು "ಜೋಡೆತ್ತು' ಚಿತ್ರ ಕೈಬಿಟ್ಟಿದ್ದಾರೆ.
ಹೀಗಾಗಿ "ಅಧ್ಯಕ್ಷ', "ರಾರ್ಬಟ್​', "ಕಾಟೇರ' ಮತ್ತು "ದ ಡೆವಿಲ್​' ಖ್ಯಾತಿಯ ಚಿತ್ರದ ಛಾಯಾಗ್ರಾಹಕ ಸುಧಾಕರ್​ ಎಸ್​. ರಾಜ್​ ಇದೀಗ ಡೈರೆಕ್ಟರ್​ ಕ್ಯಾಪ್​ ಧರಿಸಲು ರೆಡಿಯಾಗಿದ್ದಾರೆ. ಛಾಯಾಗ್ರಹಣದ ಜತೆಗೆ ಚೊಚ್ಚಲ ಬಾರಿಗೆ "ಜೋಡೆತ್ತು'ಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಇದೊಂದು ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಅದಕ್ಕಾಗಿ ಚಿಕ್ಕಮಗಳೂರಿನಲ್ಲಿ ಹಳ್ಳಿಯೊಂದರ ಬೃಹತ್​ ಸೆಟ್​ ನಿರ್ಮಿಸಲಾಗಿದೆ. 2026ರ ಜ.5ರಿಂದ ಶೂಟಿಂಗ್​ ಆರಂಭವಾಗಲಿದೆ. ಈ ಹಿಂದೆ "ಫೈಟರ್​' ನಿರ್ಮಿಸಿದ್ದ ಸೋಮಶೇಖರ್​ (ಕಟ್ಟಿಗೇನಹಳ್ಳಿ) ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿಕ್ಕಣ್ಣ ಜತೆ ಬಹುಭಾಷಾ ನಟ ಸುನಿಲ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ ಕಲಾವಿದರ ಕುರಿತು ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿ. ಹರಿಕೃಷ್ಣ ಸಂಗೀತದಲ್ಲಿ ಮೂಡಿಬರಲಿವೆ.
"ಜೋಡೆತ್ತು' ನನ್ನ ಕರಿಯರ್​ನಲ್ಲೇ ಅತಿ ದೊಡ್ಡ ಬಜೆಟ್​ ಸಿನಿಮಾ. 80ರ ದಶಕದಲ್ಲಿ ನಡೆಯುವ ಕಥೆ. ಹಳ್ಳಿಯಲ್ಲಿ ಪ್ರಾರಂಭವಾಗಿ, ಹಳ್ಳಿಯಲ್ಲೇ ಮುಗಿಯುವ ಸ್ಟೋರಿ. ಫ್ಯಾಮಿಲಿ ಸೆಂಟಿಮೆಂಟ್​, ಕಾಮಿಡಿ, ಆ್ಯಕ್ಷನ್​ ಎಲ್ಲ ಅಂಶಗಳೂ ಇರುವ ಸಿನಿಮಾ. ಜನವರಿಯಲ್ಲಿ ಪ್ರಾರಂಭವಾಗಿ ಮುಂದಿನ ವರ್ಷವೇ ರಿಲೀಸ್​ ಆಗಲಿದೆ. ಎಂದು ಮಾಹಿತಿ ನೀಡುತ್ತಾರೆ ನಾಯಕ ಚಿಕ್ಕಣ್ಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net