ಮಾದಪ್ಪನಿಗೆ ಉಘೇ ಎಂದ ಅಶೋಕ : ನಟ ಸತೀಶ್ ನೀನಾಸಂ ಬರೆದ ಚಿತ್ರದ ಮೊದಲ ಹಾಡು 25ಕ್ಕೆ ರಿಲೀಸ್

ದ ರೈಸ್ ಆಫ್ ಅಶೋಕ ಪೋಸ್ಟರ್​
ದ ರೈಸ್ ಆಫ್ ಅಶೋಕ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಏನೋ ಮಾದೇವ ಎಂಬ ಮೊದಲ ಸಾಂಗ್ ರಿಲೀಸ್ ಮಾಡಲು ರೆಡಿ
  • ರೈಸ್ ಆಫ್​ ಅಶೋಕ’ ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ
  • ಡೊಳ್ಳು, ನಗಾರಿ ಜತೆಗೆ ಪಾಶ್ಚಿಮಾತ್ಯ ವಾದ್ಯ ಬಳಕೆ
  • ಜಾನಪದ ಶೈಲಿಯ ಜತೆಗೆ ಸಿನಿಮೀಯವಾಗಿ ಮೂಡಿಬಂದಿದೆ
the rise of ashoka: ಬೆಂಗಳೂರು: ನೀನಾಸಂ ಸತೀಶ್ ಮತ್ತು ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ಚಿತ್ರ ‘ದ ರೈಸ್ ಆಫ್ ಅಶೋಕ’. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಧುಮುಕುತ್ತಿದ್ದು, ಇದರ ಅಂಗವಾಗಿ ‘ಏನೋ ಮಾದೇವ ಎಂಬ ಮೊದಲ ಸಾಂಗ್ ರಿಲೀಸ್ ಮಾಡಲು ರೆಡಿಯಾಗಿದೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲೂ ಹಾಡು ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ನಟ ಸತೀಶ್ ನೀನಾಸಂ ರಚಿಸಿರುವುದು ವಿಶೇಷ. ಬಾಲಿವುಡ್ ಗಾಯಕ ಕೈಲಾಶ್ ಖೇರ್ ಕಂಠದಲ್ಲಿ ಹಾಡು ಮೂಡಿಬಂದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಇದೇ 25ಕ್ಕೆ ಈ ಸಾಂಗ್ ರಿಲೀಸ್ ಆಗಲಿದೆ. ಪೂರ್ಣಚಂದ್ರ ತೇಜಸ್ವಿ , ‘‘ದ ರೈಸ್ ಆಫ್ ಅಶೋಕ’ 70-80ರ ದಶಕದ ಕಥೆ. ಇದೀಗ ರಿಲೀಸ್‌ಗೆ ಸಿದ್ಧವಾಗಿರುವುದು ಚಿತ್ರದ ಮೊದಲನೆಯ ಗೀತೆ. ಹಳ್ಳಿಗಳಲ್ಲಿ ಜನರು ಹಬ್ಬ, ಜಾತ್ರೆಗಳನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬ ಪರಿಚಯ ಈ ಹಾಡಿನಲ್ಲಿ ಸಿಗಲಿದೆ. ಜಾನಪದ ಶೈಲಿಯ ಜತೆಗೆ ಸಿನಿಮೀಯ ಬಣ್ಣ ನೀಡಲಾಗಿದೆ. ಡೊಳ್ಳು, ನಗಾರಿ ಜತೆಗೆ ಪಾಶ್ಚಿಮಾತ್ಯ ವಾದ್ಯ ಬಳಕೆ ಮಾಡಲಾಗಿದೆ. ಕೈಲಾಶ್ ಖೇರ್ ಜತೆ 15ಕ್ಕೂ ಹೆಚ್ಚು ಮೈಸೂರಿನ ರಂಗ ಗಾಯಕರು ಧ್ವನಿಗೂಡಿಸಿದ್ದಾರೆ. ಕನ್ನಡದಲ್ಲಿ ನೀನಾಸಂ ಸತೀಶ್, ತೆಲುಗಿನಲ್ಲಿ ಶ್ರೀನಿವಾಸ್ ಕಾಲೇ ಹಾಗೂ ತಮಿಳಿನಲ್ಲಿ ವೈರ ಭಾರತಿ ಹಾಡು ರಚಿಸಿದ್ದಾರೆ. ಮೂರು ಭಾಷೆಯ ಪ್ರೇಕ್ಷಕರಿಗೂ ಹತ್ತಿರವಾಗುವ ರೀತಿಯಲ್ಲಿ ಹಾಡು ಮೂಡಿಬಂದಿದೆ. ಸತೀಶ್‌ಗೆ ನಟನೆಯ ಜತೆಗೆ ಸಾಹಿತ್ಯ ರಚನೆ ಹೊಸ ಪ್ರಯತ್ನ. ಸರಳ ಪದಗಳು ಹಾಗೂ ಆಳ ಚಿಂತನೆಯೊಂದಿಗೆ ಈ ಹಾಡು ರಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ದ ರೈಸ್ ಆಫ್​ ಅಶೋಕ’ ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ. ಆರು ಸಾಂಗ್ಸ್, ಉಳಿದವು ಬಿಟ್‌ಗಳು. ಎಲ್ಲವೂ ಮಣ್ಣಿನ ನೆಟಿವಿಟಿಗೆ ತಕ್ಕಂತೆ ಸೊಗಸಾಗಿ ಮೂಡಿಬಂದಿವೆ. ಆರಂಭದ ದಿನಗಳಿಂದಲೂ ಈ ಚಿತ್ರದ ಹೋರಾಟವನ್ನು ನೋಡಿಕೊಂಡು ಬಂದಿದ್ದೇನೆ. ಇನ್ನೇನು ಸಿನಿಮಾ ಅರ್ಧಕ್ಕೆ ನಿಂತಿತು ಎನ್ನುವಾಗ ಸತೀಶ್ ತಂಡಕ್ಕೆ ಹೆಗಲಾಗಿ ನಿಂತರು. ಅದು ಒಬ್ಬ ಕಲಾವಿದನ ದೊಡ್ಡತನ. ಮೂರು ಭಾಷೆಗಳಲ್ಲೂ ಪ್ರೇಕ್ಷಕರಿಗೆ ಹತ್ತಿರವಾಗುವ ಕಂಟೆಂಟ್ ಚಿತ್ರದಲ್ಲಿದ್ದು, ಎಲ್ಲರಿಗೂ ಇಷ್ಟವಾಗಲಿದೆ.
| ಪೂರ್ಣಚಂದ್ರ ತೇಜಸ್ವಿ, ಸಂಗೀತ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net