ತೆಲುಗಿನಲ್ಲಿ ಬಿಜಿಯಾದ ಆಶಿಕಾ: ‘ಸರ್ದಾರ್ 2’ ರಿಲೀಸ್‌ಗೆ ಸಿದ್ಧವಾಗಿರುವಾಗಲೇ ಮತ್ತೊಂದು ಸಿನಿಮಾ ಘೋಷಿಸಿದ ನಟಿ

ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
Published on

ಪ್ರಮುಖ ಮುಖ್ಯಾಂಶಗಳು

  • ಬಣ್ಣದ ಲೋಕಕ್ಕೆ ಬಂದು ಹತ್ತು ವರ್ಷಗಳ ಸಂಭ್ರಮದಲ್ಲಿ ಆಶಿಕಾ ರಂಗನಾಥ್​
  • ಕನ್ನಡ ಸೇರಿ ತೆಲುಗು, ತಮಿಳಿನಲ್ಲಿ ಬಿಜಿಯಾದ ಗತವೈಭವ ನಟಿ
  • ಸರ್ದಾರ್ 2 ರಿಲೀಸ್ ನಲ್ಲಿರುವಾಗಲೇ ಹೊಸ ತೆಲುಗು ಚಿತ್ರಕ್ಕೆ ಸಹಿ ಮಾಡಿದ ನಟಿ
ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಬಣ್ಣದ ಲೋಕಕ್ಕೆ ಬಂದು ಹತ್ತು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಕನ್ನಡದ ‘ಕ್ರೇಜಿ ಬಾಯ್’ (2016) ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು ಇದೀಗ ದಶಕದ ಸಂಭ್ರಮದಲ್ಲಿದ್ದಾರೆ. 10 ವರ್ಷಗಳ ಕರಿಯರ್‌ನಲ್ಲಿ ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲೂ ಮಿಂಚುತ್ತಿರುವ ಅವರು, ಸದ್ಯ ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ‘ಗತವೈಭವ’ ಬಳಿಕ ಆಶಿಕಾ ರಂಗನಾಥ್ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲವಾದರೂ, ತೆಲುಗು, ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಾರ್ತಿ, ಮಾಳವಿಕಾ ಮೋಹನನ್, ಎಸ್. ಜೆ. ಸೂರ್ಯ ಜತೆ ಆಶಿಕಾ ನಟಿಸಿರುವ ತಮಿಳಿನ ‘ಸರ್ದಾರ್ 2’ ಇದೇ 10ರಂದು ತೆರೆ ಕಾಣಲಿದೆ. ಹಾಗೆಯೇ, ಚಿರಂಜೀವಿ ನಟನೆಯ ತೆಲುಗಿನ ‘ವಿಶ್ವಂಭರ’ದಲ್ಲೂ ಕನ್ನಡದ ಹುಡುಗಿ ನಟಿಸಿದ್ದು, ಸಿನಿಮಾ ಬಿಡುಗಡೆ ವಿಳಂಬವಾಗಿದ್ದರೂ ಇದೇ ವರ್ಷ ರಿಲೀಸ್ ಆಗಲಿದೆ. ಇದೇ ಖುಷಿಯಲ್ಲಿ ಆಶಿಕಾ ರಂಗನಾಥ್ ಹೊಸ ತೆಲುಗು ಚಿತ್ರಕ್ಕೆ ಸಹಿ ಮಾಡಿದ್ದಾರೆ. ‘ಓಂ ಬೀಂ ಬುಷ್, ‘ವಿಷ್ಣು ವಿನ್ಯಾಸಂ’ ಸೇರಿ ರೊಮ್ಯಾಂಟಿಕ್ ಕಾಮಿಡಿಗಳ ಮೂಲಕ ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಶ್ರೀವಿಷ್ಣು ನಾಯಕನಾಗಿದ್ದು, ಇನ್ನಷ್ಟೇ ಟೈಟಲ್ ಫಿಕ್ಸ್ ಮಾಡಬೇಕಿದೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಇಂದಿನ ಯುವಜನರ ಭಾವನೆಗಳ ಹೋರಾಟದ ಮೇಲೆ ಈ ಚಿತ್ರ ಮೂಡಿಬರಲಿದೆ. ಕಳೆದ ವರ್ಷ ತೆರೆಕಂಡ ‘ಅನಗನಗ’ ಖ್ಯಾತಿಯ ಸನ್ನಿ ಸಂಜಯ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಗಣದ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಷ್ಟೇ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net