ಬೆಂಗಳೂರು: ರವಿಚಂದ್ರನ್ ಅಭಿನಯದ ‘ಪುಟ್ನಂಜ’ ಚಿತ್ರದ ‘ಪುಟ್ಟಮಲ್ಲಿ’ ಇಂದಿಗೂ ಜನಪ್ರಿಯ ಸಾಂಗ್. ಇದೀಗ ಅದೇ ಹೆಸರಿನಲ್ಲಿ ಮತ್ತೊಂದು ಹಾಡು ಮೂಡಿಬಂದಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಡಾಲಿ ಧನಂಜಯ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’ ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿ, ಇದೇ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ‘ಪುಟ್ಟಮಲ್ಲಿ’ ಶೀರ್ಷಿಕೆಯ ಹಾಡು ರಿಲೀಸ್ ಮಾಡಲಾಗಿದ್ದು, ವೈರಲ್ ಆಗಿದೆ. ‘ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ’ ಎಂದು ಸಾಗುವ ರೆಟ್ರೋ ಹಾಗೂ ಮಾಡರ್ನ್ ಶೈಲಿ ಸಮ್ಮಿಶ್ರಣವಾಗಿರುವ ಈ ಹಾಡು ವಾಸುಕಿ ವೈಭವ್ ಸಂಗೀತದಲ್ಲಿ ಮೂಡಿಬಂದಿದ್ದು , ಚೇತನ್ ಕುಮಾರ್ ಸಾಹಿತ್ಯದಲ್ಲಿ ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ನಾಯಕ ಡಾಲಿ ಧನಂಜಯ ಮತ್ತು ನಾಯಕಿ ರೀಷ್ಮಾ ನಾಣಯ್ಯ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ಸಾಂಗ್ ಜಾಲತಾಣದಲ್ಲಿ ವೈರಲ್ ಆಗಿದ್ದು, ರೀಲ್ಸ್‌ನಲ್ಲೂ ಟ್ರೆಂಡಿಂಗ್‌ನಲ್ಲಿದೆ. ಇನ್ನು ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರವನ್ನು ‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ನಿರ್ದೇಶಿಸುತ್ತಿದ್ದು, ಆ್ಯಕ್ಷನ್ ಜತೆಗೆ ಹಾಸ್ಯ ಹಾಗೂ ಕೌಟುಂಬಿಕ ಮನರಂಜನೆಯ ಕಥಾಹಂದರವಿದೆ. ಧನಂಜ, ರೀಷ್ಮಾ ಜತೆಗೆ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ.ರಾವ್ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಅಜಯ್ ಕುಮಾರ್, ನಿರಂಜನ್ ದೇವರಮನೆ ಸಂಕಲನ ಚಿತ್ರಕ್ಕಿದೆ.