AMERICA AMERICA 2 REVIEW: ಅವ್ರನ್ನ ಬಿಟ್ಟು ಇವ್ರನ್ನ, ಇವ್ರನ್ನ ಬಿಟ್ಟು ಅವ್ರನ್ನ?

ಅಮೆರಿಕಾ ಅಮೆರಿಕಾ 2 ಪೋಸ್ಟರ್
ಅಮೆರಿಕಾ ಅಮೆರಿಕಾ 2 ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಲೇಖಕಿ ಸಹನಾ ವಿಜಯ್ ಕುಮಾರ್ ಅವರ ‘ಕ್ಷಮೆ’ ಕಾದಂಬರಿ ಆಧಾರಿತ ಸಿನಿಮಾ
  • ದಾಂಪತ್ಯ ಜೀವನದ ಸಂಕೀರ್ಣ ವಿಷಯಗಳು, ಹೆಣ್ಣಿನ ತಲ್ಲಣಗಳ ಜತೆಗೆ ಆಧುನಿಕ ತಾಂತ್ರಿಕ ಕಾಲಘಟ್ಟದ ಜೀವನಶೈಲಿ ಮೇಲೆ ಬೆಳಕು ಚೆಲ್ಲುವ ಚಿತ್ರ
  • ನುಡಿಯಾಗಿ ಸಾನ್ವಿ ಶ್ರೀವಾಸ್ತವ್ ಇದುವರೆಗಿನ ಬೆಸ್ಟ್ ಫರ್ಪಾಮೆನ್ಸ್ ನೀಡಿದ್ದಾರೆ.
ಚಿತ್ರ: ಅಮೆರಿಕಾ ಅಮೆರಿಕಾ 2
ನಿರ್ದೇಶಕ : ನಾಗತಿಹಳ್ಳಿ ಚಂದ್ರಶೇಖರ್
ತಾರಾಗಣ: ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ, ಸಾನ್ವಿ ಶ್ರೀವಾಸ್ತವ್, ಮಂಡ್ಯ ರಮೇಶ್, ಬೇಬಿ ರೀತು ಸಿಂಗ್ ಮತ್ತಿತರರು.
ಶಿವ ಸ್ಥಾವರಮಠ
ವಿಮಾನದಲ್ಲಿ ಪ್ರಯಾಣಿಸುತ್ತಿರುವ ನುಡಿಗೆ (ಸಾನ್ವಿ) ಗಗನಸಖಿ ಬಂದು ತಿನ್ನಲು ಏನು ಬೇಕು ಎಂದು ಕೇಳುತ್ತಾಳೆ. ಏನಿದೆ? ಎಂಬ ಪ್ರಶ್ನೆಗೆ ಗಗನಸುಖಿ ನಗುತ್ತಾ ‘ಚಿಕನ್ ಮತ್ತು ಫಿಶ್’ ಎನ್ನುತ್ತಾಳೆ. ‘ಫಿಶ್’ ಕೊಡಿ ಎಂದಾಗ ಟ್ರಾಲಿಯ ಒಳಗಡೆ ನೋಡಿ ಗಗನಸಖಿ ನುಡಿಗೆ ಕ್ಷಮೆಯಾಚಿಸಿ, ‘ಫಿಶ್’ ಇಲ್ಲ ‘ಚಿಕನ್’ ಕೊಡಲೇ’ ಎನ್ನುತ್ತಾಳೆ. ‘ಹಾಗಾದರೆ, ನನಗ್ಯಾಕೆ ಆಯ್ಕೆಗಳು ನೀಡಿದಿರಿ’ ಎಂದು ನುಡಿ ಪ್ರಶ್ನಿಸುತ್ತಾಳೆ. ಈ ರೀತಿಯ ಸಂಭಾಷಣೆಗಳು ಚಿತ್ರದುದ್ದಕ್ಕೂ ಆಗಾಗ ಅನುರಣಿಸುತ್ತವೆ. ಕೇವಲ ಊಟ, ವಸ್ತು ಖರೀದಿಸುವಾಗ ಅಷ್ಟೇ ಅಲ್ಲ, ಮಹತ್ವದ ನಿರ್ಧಾರದ ಸಮಯದಲ್ಲಿಯೂ ಆಯ್ಕೆ ವಿಚಾರ ನುಡಿಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡುತ್ತದೆ. ಆಗ ಆಕೆ ಅನುಭವಿಸುವ ತಳಮಳ ಹಾಗೂ ಭಾವನೆಗಳ ಹೊಯ್ದಟವೇ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಪ್ರಮುಖ ಘಟ್ಟ.
‘ಅಮೆರಿಕಾ ಅಮೆರಿಕಾ’ (1997) ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಯಶಸ್ವಿ ಕಲ್ಟ್ ಕ್ಲಾಸಿಕ್ ಸಿನಿಮಾ. ಹಾಗಂತ, ‘ಅಮೆರಿಕಾ ಅಮೆರಿಕಾ 2’ ಅದರ ಮುಂದುವರಿದ ಭಾಗವಲ್ಲ. ಬೇರೆಯದ್ದೆ ಕಥೆ. ‘ಹಳೇ ಕಥೆಯಿಂದಲೇ ಹೊಸ ಕಥೆಗಳು ಹುಟ್ಟುವುದು’ ಎಂಬ ಸಿನಿಮಾ ಟ್ಯಾಗ್‌ಲೈನ್‌ನಂತೆ ಲೇಖಕಿ ಸಹನಾ ವಿಜಯ್ ಕುಮಾರ್ ಅವರ ‘ಕ್ಷಮೆ’ ಕಾದಂಬರಿ ಆಧಾರವಾಗಿಟ್ಟುಕೊಂಟು ಈ ಚಿತ್ರ ನಿರೂಪಿಸಲಾಗಿದೆ. ಇಲ್ಲಿ ಅಮೆರಿಕಾ ಕೇವಲ ಸ್ಥಳವಷ್ಟೇ ಪಾತ್ರವಾಗಿಲ್ಲ. ದಾಂಪತ್ಯ ಜೀವನದ ಸಂಕೀರ್ಣ ವಿಷಯಗಳು, ಹೆಣ್ಣಿನ ತಲ್ಲಣಗಳ ಜತೆಗೆ ಆಧುನಿಕ ತಾಂತ್ರಿಕ ಕಾಲಘಟ್ಟದ ಜೀವನಶೈಲಿ ಮೇಲೆ ಬೆಳಕು ಚೆಲ್ಲಲಾಗಿದೆ. ಇದು ಕೂಡ ತ್ರಿಕೋನ ಪ್ರೇಮಕಥೆಯಾಗಿದ್ದು, ಮೊದಲ ಭಾಗದ ಭೂಮಿ, ಸೂರ್ಯ ಹಾಗೂ ಶಶಾಂಕ್ ಪಾತ್ರಗಳ ಛಾಯೆ ಇದೆ. ‘ಭೂಮಿ’ಯ ತುಂಟುತನ ಮಿಸ್ ಆದರೂ, ನುಡಿಯಲ್ಲಿ ‘ಭೂಮಿ ತೂಕದ ಸಹನೆ’ ಕಾಣಬಹುದು. ‘ಅಮೆರಿಕಾ ಅಮೆರಿಕಾ 2’ ಕೇವಲ ಭಾವನಾತ್ಮಕ ನಿರೂಪಣೆಯಲ್ಲ, ಬದಲಾಗಿ ಬದುಕಿನ ಹಾಗೂ ಆಧುನಿಕ ಯುಗದ ಸಂಕೀರ್ಣ ವಿಷಯಗಳ ಕುರಿತ ಸಿನಿಮಾ. ಅದಕ್ಕೆ ತಕ್ಕಂತೆ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಎಐ ಇಂಜಿನಿಯರ್ ಆಗಿರುವ ನುಡಿ, ರೋಬೋ ಮೂಲಕ ತೀರಿಹೋದ ಅಜ್ಜಿಯ ಧ್ವನಿಯನ್ನು ಮರುಸೃಷ್ಟಿಸಿ, ಆಕೆಯ ಜತೆಗೆ ಸಂವಾದಿಸುವುದು, ‘ಗಂಡ ಬೇಕಾಗಿದ್ದಾನೆ’ ಎಂದು ಜಾಹೀರಾತು ನೀಡುವುದು, ಪತಿ ನಿನಾದ್ (ನಿರೂಪ್) ಮಕ್ಕಳು ಬೇಕು ಎಂದು ಮೂಢನಂಬಿಕೆಯ ಮೊರೆ ಹೋಗುವುದು ಹೀಗೆ ಹಲವು ಯಾಂತ್ರಿಕ, ಸಾಮಾಜಿಕ ವಿಚಾರಗಳ ಮೂಲಕ ಪ್ರೇಮಕಥೆಯೊಂದು ವಿಸ್ತಾರ ರೂಪ ಪಡೆದುಕೊಂಡಿದೆ. ಇನ್ನು ಕೆಲವು ಕಡೆ ಲಾಜಿಕ್ ಮಿಸ್ ಆಗಿದೆ. ವಿವಾಹಿತ ಹೆಣ್ಣು ಹಾಗೂ ಅವಿವಾಹಿತ ಗಂಡು ಇಬ್ಬರು ಕೂಡಿ ಮಗು ಮಾಡಿಕೊಳ್ಳುವ ವಿಚಾರವನ್ನು ಅಮೆರಿಕದಂತಹ ಮುಂದುವರಿದ ರಾಷ್ಟ್ರದಲ್ಲಿ ನಿಂತು ಸಂಸ್ಕೃತಿಯ ಪರಧಿ, ಸಾಮಾಜಿಕ ಸ್ಥಿತಿಗಳಲ್ಲಿ ನೋಡುವ ಸಂಭಾಷಣೆಗಳು ಅಷ್ಟು ಎಫೆಕ್ಟ್ ಅನಿಸುವುದಿಲ್ಲ.
ನುಡಿಯಾಗಿ ಸಾನ್ವಿ ಶ್ರೀವಾಸ್ತವ್ ಇದುವರೆಗಿನ ಬೆಸ್ಟ್ ಫರ್ಪಾಮೆನ್ಸ್ ನೀಡಿದ್ದಾರೆ. ಸೂಕ್ಷ್ಮ ಭಾವನೆಗಳನ್ನು ಅಷ್ಟೇ ಸೂಕ್ಷ್ಮವಾಗಿ ನಟಿಸಿ ಪಾತ್ರದಲ್ಲಿ ಜೀವಿಸಿದ್ದಾರೆ. ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ ಅಭಿನಯ ಕೂಡ ಚೆನ್ನಾಗಿ ಮೂಡಿಬಂದಿದೆ. ಮಂಡ್ಯ ರಮೇಶ್, ಬೇಬಿ ರೀತು ಸಿಂಗ್ ಗಮನ ಸೆಳೆಯುತ್ತಾರೆ. ಛಾಯಾಗ್ರಾಹಕ ಎಸ್.ಕೆ.ರಾವ್ ದೃಶ್ಯಗಳನ್ನು ಅದ್ದೂರಿಯಾಗಿಸಿದ್ದಾರೆ. ಹಾಡುಗಳು ಗುನುಗುವಂತೆ ಮಾಡದಿದ್ದರೂ, ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ.
ರೇಟಿಂಗ್: 3.5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net