ಸೆ. 18ಕ್ಕೆ ’ಅಮರ್ಥ’: ಮೂರನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ-ಮೇಘನಾ ರಾಜ್

ಅಮರ್ಥ ಚಿತ್ರದ ಪೋಸ್ಟರ್
ಅಮರ್ಥ ಚಿತ್ರದ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಮೂರನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ-ಮೇಘನಾ ರಾಜ್​
  • ಸೆ. 18ಕ್ಕೆ ‘ಅಮರ್ಥ’ ರಾಜ್ಯಾದ್ಯಂತ ತೆರೆಗೆ
  • ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ

ಬೆಂಗಳೂರು: ‘ಬಹುಪರಾಕ್’, ‘ಬುದ್ಧಿವಂತ 2’ ಬಳಿಕ ನಟ ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ಮೂರನೇ ಬಾರಿಗೆ ತೆರೆ ಹಂಚಿಕೊಂಡಿರುವ ಸಿನಿಮಾ ‘ಅಮರ್ಥ’. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದರೂ, ರಿಲೀಸ್ ವಿಳಂಬವಾಗಿತ್ತು. ಇದೀಗ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಸೆ. 18ಕ್ಕೆ ‘ಅಮರ್ಥ’ ರಾಜ್ಯಾದ್ಯಂತ ತೆರೆಗೆ ಬರಲಿದೆ. ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಜಂಟಿಯಾಗಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ‘‘ಅಮರ್ಥ’ ಎಂದರೆ ನಮ್ಮೆಲ್ಲರನ್ನು ಮೀರಿದ ಒಂದು ಶಕ್ತಿ ಎನ್ನಬಹುದು. ಜೀವನದಲ್ಲಿ ಏನೇ ನಡೆದರೂ, ದೇವರ ದಯೆ, ಹಣೆಬರಹ, ಗ್ರಹಾಚಾರ ಎನ್ನುತ್ತೇವೆ. ಅದು ನಿಜ ಕೂಡ. ಆದರೆ, ಅದಕ್ಕೂ ಮೀರಿದ ಶಕ್ತಿಯೊಂದಿದೆ. ಅದೇ ’ಅಮರ್ಥ’. ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ’ ಎಂದು ಗುರು ಹೆಗ್ಡೆ ತಿಳಿಸಿದರು. ಶ್ರೀನಗರ ಕಿಟ್ಟಿ, ‘ಇದೊಂದು ಮುದ್ದಾದ ಕಥೆ. ಬಾಲ್ಯದಿಂದ ಒಬ್ಬ ಹುಡುಗನ ಜರ್ನಿ ಹೇಗಿರುತ್ತದೆ ಎಂಬುದರ ಸುತ್ತ ಸಾಗುತ್ತದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ 48 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು. ‘ನನ್ನ ಪಾತ್ರದ ಹೆಸರು ಲಕ್ಷ್ಮೀ. ಜೀವನದಲ್ಲಿ ಏರುಪೇರು ಕಂಡಿರುವ ಹುಡುಗಿಯ ಜತೆಗೆ ಕಿಟ್ಟಿ ಪಾತ್ರ ಹೇಗೆ ಬೆಂಬಲವಾಗಿ ನಿಲ್ಲುತ್ತದೆ ಎಂಬುದೇ ಚಿತ್ರದ ಕಥಾವಸ್ತು’ ಎಂದು ಮೇಘನಾ ರಾಜ್ ಪಾತ್ರದ ಬಗ್ಗೆ ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net