After OLC movie review: ಕ್ರಾಂತಿಕಾರಿ ಕೇಶವನ ಕಿಚ್ಚಿನ ಹೋರಾಟ

AFTER OLC POSTER
AFTER OLC POSTER
Published on

ಪ್ರಮುಖ ಮುಖ್ಯಾಂಶಗಳು

  • ಆಫ್ಟರ್ ಒಎಲ್​ಸಿ ಒಂದು ಕ್ರಾಂತಿಕಾರಿ ಕೇಶವನ ಸಂಘರ್ಷದ ಕಥೆ
  • ಹೋರಾಟದ ಹಾದಿಯಲ್ಲಿ ಪ್ರೀತಿಯ ಪಯಣವಿದೆ
  • ಕವೀಶ್ ಕಿಚ್ಚಿನಿಂದ, ಮೇಘಾ ಶೆಟ್ಟಿ ಕ್ಯೂಟ್ ಆಗಿ ನಟಿಸಿದ್ದಾರೆ
ಚಿತ್ರ: ಆಫ್ಟರ್​ ಆಪರೇಷನ್ ಲಂಡನ್ ಕೆಫೆ
ನಿರ್ದೇಶನ: ಸಡಗರ ರಾಘವೇಂದ್ರ
ತಾರಾಗಣ: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ, ಶಿವಾನಿ ಸುರ್ವೆ, ಬಿ. ಸುರೇಶ್, ಅರ್ಜುನ್ ಕಾಪಿಕಾಡ್, ವಿರಾಟ್ ಮಡಕೆ ಮತ್ತಿತರರು
ಶಿವ ಸ್ಥಾವರಮಠ
ದೊಡ್ಡ ಕಾಡೊಂದರ ಪಕ್ಕದ 30 ಗ್ರಾಮಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಗ್ರಾಮಗಳನ್ನು ವಶಕ್ಕೆ ತೆಗೆದುಕೊಂಡರೆ, ಗ್ರಾಮಸ್ಥರು ಎಲ್ಲಿಗೆ ಹೋಗುವುದು ಎಂಬ ಚಿಂತೆಯಲ್ಲಿರುವಾಗಲೇ ಆ ಗ್ರಾಮಕ್ಕೆ ಕ್ರಾಂತಿಕಾರರ ಗುಂಪೊಂದು ಬರುತ್ತದೆ. ಆ ಗುಂಪಿನ ನಾಯಕನೇ ಕೇಶವ (ಕವೀಶ್). ಗ್ರಾಮಸ್ಥರಿಗಾಗಿ ಕೇಶವ, ಕ್ರಾಂತಿ ಮೊಳಗಿಸುತ್ತಿರುವಾಗಲೇ ಅದೇ ಊರಿನ ಮುದ್ದು ಹುಡುಗಿ ಭವ್ಯಾ (ಮೇಘಾ) ಆತನನ್ನು ಪ್ರೀತಿಸುತ್ತಾಳೆ. ಕೇಶವನದು ವಿಭಿನ್ನ ಹಾದಿ. ಪ್ರತಿನಿತ್ಯ ಗುಂಡಿನ ಸದ್ದು, ಸಾವು-ಬದುಕಿನ ಮಧ್ಯೆ ಹೋರಾಟ. ಸಮಾಜಕ್ಕಾಗಿ ಇಡೀ ಬದುಕು ಅರ್ಪಿಸುವ ತವಕ. ಇಂತಹ ಕೇಶವನ ಬಂದೂಕಿನ ಹೋರಾಟದ ಸುತ್ತ ಸಡಗರ ರಾಘವೇಂದ್ರ ನಿರ್ದೇಶನದ ಆಫ್ಟರ್​ ಆಪರೇಷನ್ ಲಂಡನ್ ಕೆಫೆ ಕಥೆ ಸುತ್ತುತ್ತದೆ. ನಡು ನಡುವೆ ಪ್ರೇಮದ ರಾಗ ಇಣುಕು ಹಾಕಿದೆ.
ಸೇನಾಧಿಕಾರಿಯೊಬ್ಬ ದೇಶದ್ರೋಹದ ಮೇಲೆ ಶಿಕ್ಷಿತನಾಗಿ ಕಾಡು ಸೇರಿ ಕ್ರಾಂತಿಕಾರಿಯಾಗಿರುವ ಕಥೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇದು ಸಿನಿಮಾದ ಎರಡನೇ ಭಾಗವಾಗಿರುವ ಕಾರಣ, ಈ ಭಾಗದ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಗ್ರಾಮಸ್ಥರನ್ನೇ ಒಕ್ಕೆಲ್ಲೆಬ್ಬಿಸುವ ವಿಚಾರ ಇಟ್ಟುಕೊಂಡು ನಿರ್ದೇಶಕರು ಇನ್ನೊಂದಿಷ್ಟು ಪರಿಣಾಮಕಾರಿಯಾಗಿ ಕಥೆಯನ್ನು ನಿರೂಪಿಸಬಹುದಿತ್ತು. ಕೇವಲ ಗುಂಡಿನ ಸದ್ದು, ಆವೇಷಭರಿತ ಸಂಭಾಷಣೆಗೆ ಸೀಮಿತಗೊಳಿಸಿದ್ದಾರೆ. ಮೊದಲರ್ಧದಲ್ಲಿ ಕಥೆ ವೇಗವಾಗಿ ಸಾಗಿದರೆ, ದ್ವಿತೀಯಾರ್ಧ ನಿಧಾನವಾಗಿದೆ. ಮೇಕಿಂಗ್ ಚಿತ್ರದ ಹೈಲೈಟ್. ಗ್ರಾಮವನ್ನು ಚೆನ್ನಾಗಿ ತೋರಿಸಲಾಗಿದ್ದು, ಕಾಡಿನ ದೃಶ್ಯಗಳೂ ಗಮನ ಸೆಳೆಯುತ್ತವೆ. ನಟ ಕವೀಶ್ ಮೈಕಟ್ಟು ಹುರಿಗೊಳಿಸಿದ್ದು, ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಒಪ್ಪಿದ್ದಾರೆ. ಮೇಘಾ ಶೆಟ್ಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶಿವಾನಿ ಸುರ್ವೆ ಆರ್ಭಟವೂ ಜೋರಾಗಿದೆ. ಉಳಿದಂತೆ ಎಲ್ಲ ಕಲಾವಿದರು ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರಾಂಶು ಝಾ ಹಿನ್ನೆಲೆ ಸಂಗೀತ ಕ್ರಾಂತಿಕಾರಿಗಳ ಹೋರಾಟವನ್ನು ಹುರಿದುಂಬಿಸುವಂತಿದೆ. ಕೇಶವ ಹಿನ್ನೆಲೆ ಏನು? ಈ ಬಿಸಿ ರಕ್ತದ ಯುವಕ ಕಾಡಿನ ಹಾದಿ ಹಿಡಿಯಲು ಕಾರಣವೇನು? ತಿಳಿಯಲು ಮೊದಲನೇ ಭಾಗಕ್ಕೆ ಕಾಯಬೇಕಷ್ಟೇ.
ರೇಟಿಂಗ್: 3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net