ಹೊಸ ಚೈತ್ರಕಾಲ : ಇಪ್ಪತ್ತು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ ‘ಶಿಷ್ಯ’ ನಟಿ

ನಟಿ ಚೈತ್ರಾ ಹಳ್ಳಿಕೇರಿ
ನಟಿ ಚೈತ್ರಾ ಹಳ್ಳಿಕೇರಿ
Published on

ಪ್ರಮುಖ ಮುಖ್ಯಾಂಶಗಳು

  • ಹಲ್ಕಾ ಡಾನ್ ಚಿತ್ರದ ಮೂಲಕ ಚಂದನವನಕ್ಕೆ ಮರಳಿದ ಚೆಲುವೆ
  • ನಟ ಪ್ರಮೋದ್ ತಾಯಿ ಪಾತ್ರದಲ್ಲಿದ್ದಾರೆ ನಟಿ
  • ಪಾತ್ರ ಚಿಕ್ಕದಾದರೂ, ಆಳವಾದುದು ಎಂದ ನಟಿ
ಬೆಂಗಳೂರು : ‘ಖುಷಿ’, ‘ಗೌಡ್ರು’, ‘ಪಾರ್ಥ’, ‘ಗುನ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಚೈತ್ರಾ ಹಳ್ಳಿಕೇರಿ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 2006ರಲ್ಲಿ ತೆರೆಕಂಡಿದ್ದ ದೀಪಕ್ ನಟನೆಯ ‘ಶಿಷ್ಯ’ ಚಿತ್ರವೇ ಚೈತ್ರಾ ಅಭಿನಯಿಸಿದ್ದ ಕೊನೆಯ ಸಿನಿಮಾ. ಇದೀಗ ಆ ಚಿತ್ರ ತೆರೆಕಂಡು 20 ವರ್ಷಗಳ ಬಳಿಕ ಮಂಗಳೂರಿನ ಚಲ ನಿರ್ದೇಶನದ, ಪ್ರಮೋದ್ ಪಂಜು ನಟನೆಯ ‘ಹಲ್ಕಾ ಡಾನ್’ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹೊಸ ಸಿನಿ ಜರ್ನಿ ಕುರಿತು. ‘ಸಿನಿಮಾದಲ್ಲಿ ಅವಕಾಶಗಳಿರುವಾಗಲೇ ಮದುವೆಯಾಯಿತು. ಅದಕ್ಕೆ ನಟನೆಯಿಂದ ದೂರವಾದ ಅಷ್ಟೇ. ಸ್ಟುಡಿಯೋ ಹಾಗೂ ನನ್ನದೇ ಕಂಪನಿ ಮೂಲಕ ಚಿತ್ರರಂಗದ ಜತೆ ನಂಟು ಹೊಂದಿದ್ದೆ. ಈ ನಡುವೆಯೂ ಗ್ಲಾಮರಸ್ ರೋಲ್‌ಗೆ ಅವಕಾಶಗಳು ಬಂದವಾದರೂ ನಾನು ಒಪ್ಪಲಿಲ್ಲ. ಇದೀಗ ‘ಹಲ್ಕಾ ಡಾನ್’ ಮೂಲಕ ನಟನೆಗೆ ಮರಳುತ್ತಿದ್ದೇನೆ. ತಾಯಿ ಪಾತ್ರ ಸಣ್ಣದಾದರೂ, ಅದಕ್ಕೆ ಸಿಗುವ ಒತ್ತು ದೊಡ್ಡದಿದೆ. ಇನ್ನು 20 ವರ್ಷಗಳ ಬಳಿಕ ಕ್ಯಾಮರಾ ಫೇಸ್ ಮಾಡಿದಾಗ ಮೊದಲು ಸಣ್ಣಮಟ್ಟಿಗೆ ಗೊಂದಲವಾಗಿದ್ದೆ. ತಂಡದಿಂದ ಮೊದಲೇ ಸ್ಕ್ರಿಪ್ಟ್ ನೀಡಿದ್ದರಿಂದ ತಯಾರಿಯಾಗಿಯೇ ಬಂದಿದ್ದರಿಂದ ಧೈರ್ಯದಿಂದ ನಟಿಸಿದೆ. ಪಾತ್ರಕ್ಕಾಗಿ 9 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ದಿನಕ್ಕೆ ಮೂರು ತಾಸು ಜಿಮ್‌ನಲ್ಲಿ ಬೆವರು ಹರಿಸಿದ್ದೇನೆ. ಐದು ಕಿಮೀ ರನ್ನಿಂಗ್ ಮಾಡುತ್ತಿದ್ದೆ’ ಎಂದು ಚೈತ್ರಾ ಹಳ್ಳಿಕೇರಿ ಹೇಳಿಕೊಂಡರು. ‘ಹಲ್ಕಾ ಡಾನ್’ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿಸಿದೆ. ಮುಂದೆ ಮಂಗಳೂರು, ಹೈದರಾಬಾದ್‌ನಲ್ಲಿ ಮುಂದಿನ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಬಿಗ್‌ಬಾಸ್’ ಮರುಜನ್ಮ:
ನಟಿ ಚೈತ್ರಾ ಹಳ್ಳಿಕೇರಿ ಈ ನಡುವೆ ‘ಕನ್ನಡ ಬಿಗ್‌ಬಾಸ್: ಒಟಿಟಿ ಸೀಸನ್ 1’ರ ಸ್ಪರ್ಧಿಯಾಗಿದ್ದರು. ‘ಬಿಗ್‌ಬಾಸ್’ ಬಳಿಕ ಜನರು ನನಗೆ ಬಹಳ ಪ್ರೀತಿ ನೀಡಿದರು. ಆ ಶೋನಿಂದಾಗಿಯೇ ಹೆಚ್ಚು ಗುರುತಿಸುತ್ತಾರೆ’ ಎನ್ನುವ ಚೈತ್ರಾ, ಈ 20 ವರ್ಷಗಳಲ್ಲಿ ಚಿತ್ರರಂಗದಲ್ಲಾಗಿರುವ ಬದಲಾವಣೆ ಬಗ್ಗೆ, ‘ಅಂದಿಗೂ-ಇಂದಿಗೂ ಸಿನಿಮಾ ರಂಗದಲ್ಲಿ ತುಂಬಾ ಬದಲಾವಣೆಯಾಗಿವೆ. ಅಂದು ರೀಲ್ ಕ್ಯಾಮರಾ ಇದ್ದರೆ, ಇದೀಗ ಡಿಜಿಟಲ್ ಆಗಿದೆ. ಇನ್ನು ಮಹಿಳಾ ಸಹಭಾಗಿತ್ವ ಇಂದು ಹೆಚ್ಚಿದೆ. ಆಗ ಸೆಟ್‌ನಲ್ಲಿ ನಾನೊಬ್ಬಳೇ ಮಹಿಳೆ ಇರುತ್ತಿದೆ. ಆದರೆ, ಈಗ ನಿರ್ದೇಶನ, ಮೇಕಪ್, ಬರವಣಿಗೆ, ಪ್ರೊಡಕ್ಷನ್ ಟೀಂ ಸೇರಿ ಹಲವು ವಿಭಾಗಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಕಂಡೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಹರ್ಷವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net