"ಬಾಬ', "ಗಣೇಶ ಮತ್ತೆ ಬಂದ', "ಕೆಂಚ', "ಮಳೆಬಿಲ್ಲೆ' ಸೇರಿ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ಪ್ರಜ್ಞಾ ಶ್ಯಾಮಪ್ರಸಾದ್ ಕಳೆದ 10 ವರ್ಷಗಳಿಂದ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಹಾಗಂತ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಿರಲಿಲ್ಲವಾದರೂ, ತಮ್ಮದೇ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಬಿಜಿಯಾಗಿದ್ದರು. ಇದೀಗ ದಶಕದ ಬಳಿಕ ಸತೀಶ್ ನೀನಾಸಂ, ರಚಿತಾ ರಾಮ್ ನಟಿಸಿರುವ, ಮಹೇಶ್ ನಿರ್ದೇಶನದ "ಅಯೋಗ್ಯ 2' ಚಿತ್ರದ "ಮಿಲ್ಕಿ ಬ್ಯೂಟಿ' ಪೆಪ್ಪಿ ಸಾಂಗ್ ಮೂಲಕ ಪ್ರಜ್ಞಾ ಕಮ್ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ಇಷ್ಟು ವರ್ಷಗಳ ಬ್ರೇಕ್, ಈಗಿನ ಕಮ್ಬ್ಯಾಕ್, ಮುಂದಿನ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಯುವದಸರಾ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಕಾರಣ ನಾನು ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲವಾದರೂ, ಚಿತ್ರರಂಗದ ನಂಟು ಕಡಿದುಕೊಂಡಿರಲಿಲ್ಲ. ಸಂಪರ್ಕ ಇದ್ದೇ ಇತ್ತು. ಕೆಲ ದಿನಗಳ ಹಿಂದೆ ನಿರ್ದೇಶಕ ಮಹೇಶ್ ಕರೆ ಮಾಡಿ, ಒಂದು ಹಾಡಿದೆ ಮಾಡುತ್ತೀರಾ? ಅಂತ ಕೇಳಿದರು. ಎನರ್ಜಿಟಿಕ್ ಸಾಂಗ್ ಕೇಳಿದೆ. ಖುಷಿಯಾಯಿತು. ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಅಂದರೆ ಅದಕ್ಕೊಂದು ಒಳ್ಳೆ ವೇದಿಕೆ ಬೇಕಲ್ಲವೇ? ಈ ಹಾಡು ಒಳ್ಳೆ ಅವಕಾಶ ಅನ್ನಿಸಿತು. ತುಂಬ ಗ್ಯಾಪ್ ಆಗಿದ್ದ ಕಾರಣ, ನನಗೂ ತರಬೇತಿ ಬೇಕಿತ್ತು. ಹೀಗಾಗಿ ಹರ್ಷ ಮಾಸ್ಟರ್ ಜತೆ 2, 3 ದಿನ ರಿಹರ್ಸಲ್ ಮಾಡಿದೆ. ಎರಡೇ ದಿನಗಳಲ್ಲಿ ತುಂಬ ಗ್ಯಾಪ್ ಆಗಿದ್ದ ಕಾರಣ, ನನಗೂ ತರಬೇತಿ ಬೇಕಿತ್ತು. ಚಿತ್ರೀಕರಣ ಮುಗಿಸಿದೆವು. ಬಳಿಕ ನನಗೆ ಎರಡು ದಿನ ರೆಸ್ಟ್ ಬೇಕಾಯಿತು. ಅಷ್ಟು ಶ್ರಮ ಕೇಳಿದ ಹಾಡಿದು. ನಾನು ಒಳ್ಳೆ ಡಾನ್ಸರ್ ಅಂತ ಅಂತ ತುಂಬ ಜನರಿಗೆ ಗೊತ್ತಿರಲಿಲ್ಲ. ಈಗ ಹಲವಾರು ಮಂದಿ ಕರೆ ಮಾಡಿ ತುಂಬ ಚೆನ್ನಾಗಿ ಡಾನ್ಸ್ ಮಾಡಿದ್ದೀರಾ ಎನ್ನುತ್ತಿದ್ದಾರೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.