ನಿವಿಷ್ಕಾ ಸಿಕ್ಸರ್ : ‘ಬೃಂದಾ ವಿಹಾರಿ’ ಸೇರಿ ನಟಿಯ ಆರು ಸಿನಿಮಾಗಳು ರಿಲೀಸ್‌ಗೆ ಸಿದ್ಧ

ನಿವಿಷ್ಕಾ ಪಾಟೀಲ್
ನಿವಿಷ್ಕಾ ಪಾಟೀಲ್
Published on

ಪ್ರಮುಖ ಮುಖ್ಯಾಂಶಗಳು

  • ಬೃಂದಾ ವಿಹಾರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಿವಿಷ್ಕಾ ಪಾಟೀಲ್
  • ನಟಿಯ ಕನ್ನಡದ ಆರು ಸಿನಿಮಾಗಳು ತೆರೆಗೆ ಬರಲು ಸಿದ್ಧ
  • ಬೆಳಗಾವಿ ಹಿನ್ನೆಲೆಯ ಕಥೆಯಲ್ಲಿ ಬೆಳಗಾವಿ ನಟಿ
ಬೆಂಗಳೂರು: ‘ಸೋಮು ಸೌಂಡ್ ಇಂಜಿನಿಯರ್’, ‘ಕ್ಯಾಲೆಂಡರ್’ ಖ್ಯಾತಿಯ ನಟಿ ನಿವಿಷ್ಕಾ ಪಾಟೀಲ್ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಸದ್ಯ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸೇರಿ ಒಟ್ಟು ಆರು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದ್ದು, ಈ ಮೂಲಕ ನಟಿ ಸಿಕ್ಸರ್ ಬಾರಿಸಿದ್ದಾರೆ. ಅಷ್ಟೆ ಅಲ್ಲದೇ ಇತ್ತೀಚೆಗೆ ‘ಸಾಮ್ರಾಟ್’ ಎಂಬ ನೈಜ ಘಟನೆಯಾಧಾರಿತ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ನಟಿಗೆ ಆಶಾದಾಯಕವಾಗಿದೆ. ‘2026ರ ಮಹತ್ವದ ವರ್ಷ ಎನ್ನಬಹುದು. ಯಾಕೆಂದರೆ, ಈ ವರ್ಷ ನನ್ನ ಆರು ಸಿನಿಮಾಗಳು ರಿಲೀಸ್ ಆಗಲಿವೆ. ಸದ್ಯ ನಾನು ಬಹುನಿರೀಕ್ಷಿತ ‘ಬೃಂದಾ ವಿಹಾರಿ’ ಚಿತ್ರದಲ್ಲಿ ನಟಿಸಿದ್ದೇನೆ. ಅದರಲ್ಲಿ ಗಣೇಶ್ ಅವರ ಸಹೋದರಿ ‘ಲಕ್ಷ್ಮೀ’ ಎಂಬ ಪಾತ್ರದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಗಣೇಶ್ ಸರ್‌ನ್ನು ಬೆಳ್ಳಿಪರದೆ ಮೇಲೆ ನೋಡಿ ಬೆಳದವಳು. ಇದೀಗ ಅವರ ಜತೆ ನಟನೆ ಮಾಡುತ್ತೇನೆ ಅದು ನನ್ನ ಅದೃಷ್ಟ. ಗಣೇಶ್ ಸರ್ ಯಾವುದೇ ಹಮ್ಮುಬಿಮ್ಮು ಇಲ್ಲದ ಕಲಾವಿದ. ನಮ್ಮೊಂದಿಗೆ ಸರಳವಾಗಿಯೇ ಇರುತ್ತಿರುತ್ತಿದ್ದರು. ಆ್ಯಕ್ಟಿಂಗ್ ಬಗ್ಗೆ ಹೇಳಿಕೊಡುತ್ತಿದ್ದರು. ಚೆನ್ನಾಗಿ ನಟಿಸಿದಾಗ ಬೆನ್ನುತಟ್ಟುತ್ತಿದ್ದರು. ಅವರಿಂದ ನಾನು ತುಂಬಾ ಕಲಿತಿದ್ದೇನೆ. ಮೈಸೂರು ಸೇರಿ ವಿವಿಧೆಡೆ 20 ದಿನಗಳ ಕಾಲ ಶೂಟಿಂಗ್ ಮಾಡಿದ್ದೇನೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ನಿವಿಷ್ಕಾ ಪಾಟೀಲ್ ಸದ್ಯ ‘ಬೃಂದಾ ವಿಹಾರಿ’ ಜತೆಗೆ ‘ಅನಂತನ ಪಯಣ’, ‘ಜಾಂಟಿ ಅನ್ ಆಫ್​ ಜಯರಾಜ್’, ‘ಆಕಾಯ್’, ‘ಕಾಫಿ ಬೈಟ್’ ಮತ್ತು ತೆಲುಗಿನ ಒಂದು ಸಿನಿಮಾ ಬಿಡುಗಡೆಗೆ ಎದುರುನೋಡುತ್ತಿದ್ದಾರೆ.

‘ಸಾಮ್ರಾಟ್’ ನಾಯಕಿ

ನಟಿ ನಿವಿಷ್ಕಾ ಪಾಟೀಲ್ ‘ಸಾಮ್ರಾಟ್’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ಕೆಲ ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುವಾಗ ನಮ್ಮೂರು ಬೆಳಗಾವಿಯಲ್ಲಿ ದೊಡ್ಡ ಗಲಾಟೆಯಾಗಿತ್ತು. ಆ ಘಟನೆಯನ್ನಿಟ್ಟುಕೊಂಡೇ ಕನ್ನಡದಲ್ಲಿ ‘ಸಾಮ್ರಾಟ್’ ಸಿನಿಮಾ ಬರುತ್ತಿದೆ. ಕಾಕಾತಾಳೀಯ ಎಂದರೆ, ಕಣ್ಣಾರೆ ಕಂಡ ಘಟನೆಯಾಧಾರಿತ ಆ ಸಿನಿಮಾಕ್ಕೆ ನಾನೇ ಹೀರೋಯಿನ್ ಎಂದರೆ ಅಚ್ಚರಿ ಅನಿಸುತ್ತದೆ. ಸದ್ಯ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದೇನೆ. ಹಾಗೆಯೇ, ಕೆಲ ಕಥೆಗಳನ್ನು ಕೇಳಿದ್ದೇನೆ. ಆದರೆ, ಯಾವುದನ್ನು ಅಂತಿಮಗೊಳಿಸಿಲ್ಲ’ ಎಂದು ನಿವಿಷ್ಕಾ ಹೇಳಿಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net