'ಶಾಂತಿ ಕ್ರಾಂತಿ' ಶೂಟಿಂಗ್​ ಸಮಯದಲ್ಲಿ ಹೇಳಿದಂತೆ ನಡೆದುಕೊಂಡ ರವಿಮಾಮ: 8 ವರ್ಷದ ಬಳಿಕ ನಡೆದಿದ್ದೇನು ಗೊತ್ತಾ?

'ಶಾಂತಿ ಕ್ರಾಂತಿ' ಶೂಟಿಂಗ್​ ಸಮಯದಲ್ಲಿ ಹೇಳಿದಂತೆ ನಡೆದುಕೊಂಡ ರವಿಮಾಮ
'ಶಾಂತಿ ಕ್ರಾಂತಿ' ಶೂಟಿಂಗ್​ ಸಮಯದಲ್ಲಿ ಹೇಳಿದಂತೆ ನಡೆದುಕೊಂಡ ರವಿಮಾಮ
Published on

ಪ್ರಮುಖ ಮುಖ್ಯಾಂಶಗಳು

  • 1991ರಲ್ಲಿ ತೆರೆಕಂಡ ಅಂದಿನ ಪ್ಯಾನ್​ ಇಂಡಿಯಾ ಚಿತ್ರ ಶಾಂತಿ ಕ್ರಾಂತಿ
  • ಕ್ರೇಜಿಸ್ಟಾರ್​ ವಿ. ರವಿಚಂದ್ರನ್​ ಅಭಿನಯದ ಸಿನಿಮಾಗೆ ಈಗ ಸಖತ್​ ಡಿಮಾಂಡ್​
  • ಈ ಚಿತ್ರವನ್ನು ರೀ-ರಿಲೀಸ್​ ಮಾಡುವಂತೆ ಕನ್ನಡ ಚಿತ್ರಪ್ರೇಮಿಗಳಿಂದ ಒತ್ತಾಯ
ಬೆಂಗಳೂರು: 1991ರಲ್ಲಿ ರಿಲೀಸ್​ ಆದ ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್​, ನಟ ವಿ. ರವಿಚಂದ್ರನ್​ ಅಭಿನಯದ ಪ್ಯಾನ್ ಇಂಡಿಯಾ 'ಶಾಂತಿ ಕ್ರಾಂತಿ' ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರುವಂತೆ ಕನ್ನಡ ಚಿತ್ರಪ್ರೇಮಿಗಳು ಪಟ್ಟು ಹಿಡಿದಿದ್ದು, ಇದೇ ಆಗಸ್ಟ್​ 15ರಂದು ಬಿಡುಗಡೆಗೊಳಿಸುವಂತೆ ಚಿತ್ರತಂಡಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಾಡು, ತುಣುಕುಗಳನ್ನು ಟ್ರೆಂಡ್​ ಮಾಡುವ ಮೂಲಕ ರೀ-ರಿಲೀಸ್​ಗೆ ಡಿಮಾಂಡ್​ ಮಾಡಿದ್ದಾರೆ. ಇದೇ ಸಮಯದಲ್ಲಿ, ಮತ್ತೊಂದು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ರವಿಚಂದ್ರನ್​, ತಮಿಳಿನ ರಜಿನಿಕಾಂತ್​, ತೆಲುಗಿನ ನಾಗಾರ್ಜುನ್, ಜುಹಿ ಚಾವ್ಲಾ, ರಮೇಶ್​ ಅರವಿಂದ್​, ಖುಷ್ಬೂ ಸುಂದರ್​, ಅನಂತ್ ನಾಗ್​, ಅನು ಪ್ರಭಾಕರ್​, ರೋಹಿಣಿ, ಶ್ರೀನಾಥ್​, ಶಿವರಾಂ ಸೇರಿದಂತೆ ಮುಂತಾದ ಹಿರಿಯ ಸೂಪರ್​ಸ್ಟಾರ್​ ನಟರು ಅಭಿನಯದ ಈ ಚಿತ್ರವು ಇಂದಿನ ಪ್ಯಾನ್​ ಇಂಡಿಯಾ ಕಲ್ಪನೆಯನ್ನು ಅಂದೇ ಮಾಡಿದ್ದು ಇಂದಿಗೂ ಇತಿಹಾಸ. ದೊಡ್ಡ ಸ್ಟಾರ್​ಗಳ ಸಮಾಗಮ ಹಾಗೂ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲು ತಯಾರಾದ ಶಾಂತಿ ಕ್ರಾಂತಿ, ಅಂದಿನ ಮಟ್ಟಿಗೆ ಬಾಕ್ಸ್ ಆಫೀಸ್​ನಲ್ಲಿ ಹೇಳಿಕೊಳ್ಳುವಂತ ಗಳಿಕೆ ಕಾಣಲಿಲ್ಲ. ಜತೆಗೆ ಹೆಚ್ಚಿನ ಜನರಿಗೆ ತಲುಪಬೇಕಿದ್ದ ಕಥೆಯು, ರವಿಚಂದ್ರನ್​ ಅವರ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆಯುವಂತೆ ಮಾಡಿದ್ದು ದುರಂತ.
ಈ ಬಗ್ಗೆ ಹಳೆಯ ಸಂದರ್ಶನಗಳಲ್ಲಿ ಸಾಕಷ್ಟು ಬೇಸರ ತೋಡಿಕೊಂಡಿರುವ ಕ್ರೇಜಿಸ್ಟಾರ್​, ಶಾಂತಿ ಕ್ರಾಂತಿ ಚಿತ್ರವನ್ನು ಭಾರಿ ಬಜೆಟ್​ ಹಾಗೂ ದೊಡ್ಡ ತಾರಾಬಳಗವನ್ನು ಹಾಕಿಕೊಂಡು ಮಾಡಿದಂತ ಪ್ಯಾನ್​ ಇಂಡಿಯಾ ಸಿನಿಮಾ. ಚಿತ್ರೀಕರಣದ ಸಮಯದಲ್ಲೇ ಎಲ್ಲೋ ಮಿಸ್​ ಹೊಡೆಯುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದ ರವಿಚಂದ್ರನ್​, ಈ ಪ್ರಾಜೆಕ್ಟ್​ ಅರ್ಧಕ್ಕೆ ಬಿಡಲು ನಿರ್ಧರಿಸಿದ್ದರು. ಆದರೆ, ಬಿಗ್ ಸ್ಟಾರ್​ಗಳು ಕೊಟ್ಟಿರುವ ಸಮಯಕ್ಕೆ ನ್ಯಾಯ ಒದಗಿಸಬೇಕು ಎಂಬ ತಂದೆಯ ಮಾತಿನ ಬೆನ್ನಲ್ಲೇ ಶೂಟಿಂಗ್ ಮುಗಿಸಿ, ಚಿತ್ರವನ್ನು ರಿಲೀಸ್​ ಮಾಡಿದ್ದಾಗಿ ತಿಳಿಸಿದ್ದಾರೆ. ಆದ್ರೆ, ಅಂತಿಮವಾಗಿ ಗೆಲುವು ನೋಡಬೇಕಿದ್ದ ಸಿನಿಮಾ ಸೋಲು ಕಂಡಿದ್ದು ಅವರ ಬೇಸರಕ್ಕೆ ಕಾರಣವಾಯಿತು. ಅಂದು ಜನರಿಗೆ ತಿಳಿಯುವ ಮುನ್ನವೇ ಮರೆಯಾಗಿದ್ದ ಚಿತ್ರವು ಈಗ ದಿಢೀರ್​ ಜಾಲತಾಣಗಳಲ್ಲಿ ಟ್ರೆಂಡ್​ ಆಗುತ್ತಿದ್ದು, ಮೊದಲ ಪ್ಯಾನ್​ ಇಂಡಿಯಾ ಫಿಲಂ ಈಗ ರೀ-ರಿಲೀಸ್​ ಆಗಬೇಕು, ಅದನ್ನು ನಾವೆಲ್ಲರೂ ಸೇರಿ ಗೆಲ್ಲಿಸೋಣ ಎಂಬ ಕೂಗುಗಳು ಜೋರಾಗಿವೆ.
ಇದೇ ಸಂದರ್ಭದಲ್ಲಿ, ನಟ ಮಾಸ್ಟರ್ ಆನಂದ್​ ಕೂಡ ಒಂದು ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ​ನೀವೆಲ್ಲರೂ ಶಾಂತಿ-ಕ್ರಾಂತಿ ಬಗ್ಗೆ ಮಾತನಾಡಿ, ಬೆಂಬಲ ಕೊಡಿ ಎಂದು ಹೇಳುತ್ತಿದ್ದೀರಿ. ಖಂಡಿತ, ನಮ್ಮ ಸಿನಿಮಾಗೆ ಮಾಡದಿದ್ದರೆ ಹೇಗೆ? ನೀವು ಹೇಳದೆ ಹೋದರೂ ಅದು ನಮ್ಮದೊಂದು ಜವಾಬ್ದಾರಿ. ನೀವೆಲ್ಲರೂ ನನ್ನನ್ನು ಹೇಗೆ ಟ್ಯಾಗ್​ ಮಾಡುತ್ತಿದ್ದೀರೋ, ಹಾಗೆ ಆ ಚಿತ್ರದಲ್ಲಿ ನಟಿಸಿದ ಮತ್ತೊಬ್ಬ ನಟಿ ಕಮಲಿ ಅವರನ್ನು ಟ್ಯಾಗ್​ ಮಾಡಿ ಎಂದರು.
'ಯಾರೇ ನೀನು ಚೆಲುವೆ' ಚಿತ್ರದ ಹೀರೋಯಿನ್​ ಕಮಲಿ ಅವರು ನೀವು ನನ್ನನ್ನು ಟ್ಯಾಗ್​ ಮಾಡುವ ಶಾಂತಿ ಕ್ರಾಂತಿ ಸಿನಿಮಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಟಿ ಸಂಗೀತಾ ಅವರು ಈಗ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕುತೂಹಲಕಾರಿ ವಿಷಯ ಏನಂದರೆ, ಆಕೆ ಆಗಲೇ ಶಾಂತಿ ಕ್ರಾಂತಿ ಮಾಡುವಾಗ ರವಿ ಸರ್​ ಬಳಿ ಹೋಗಿ, ನನ್ನನ್ನು ನೀವು ನಾಯಕ ನಟಿಯಾಗಿ ಮಾಡೋದಿಲ್ವಾ ಎಂದು ನೇರವಾಗಿ ಕೇಳಿದ್ದರು. ಅದಕ್ಕೆ ಉತ್ತರಿಸಿದ ರವಿಚಂದ್ರನ್​ ಸರ್​, ನಿನಗೆಷ್ಟೇ ವಯಸ್ಸು ಇವಾಗ? ಎಂದರು.
ಸರಿ ಈಗ ನಿನಗೆ 8 ವರ್ಷ ಅಲ್ವಾ? ಇನ್ನು ಎಂಟು ವರ್ಷ ಬಿಟ್ಟು ಬಾ, ನಿನ್ನನ್ನು ಹೀರೋಯಿನ್ ಮಾಡುತ್ತೀನಿ ಅಂತ ಹೇಳಿದ್ರು. ನೋಡಿ ಆ ಮಾತು ಎಷ್ಟು ನಿಜವಾಯ್ತು ಅಂದ್ರೆ, ಶಾಂತಿ ಕ್ರಾಂತಿ 1991ರಲ್ಲಿ ರಿಲೀಸ್​ ಆಯ್ತು. ಅದೇ 8 ವರ್ಷ ಅಂದರೆ 1998ರಲ್ಲಿ ಯಾರೇ ನೀನು ಚೆಲುವೆ ಬಿಡುಗಡೆಯಾಯಿತು. ಅಲ್ಲಿಂದ 8 ವರ್ಷಕ್ಕೆ ಅವರು ಸುಮಾರು 15ರಿಂದ 16 ವಯಸ್ಸಿನ ಹುಡುಗಿ ಅಂದುಕೊಳ್ತೀನಿ. ಇದೊಂದು ಇಂಟ್ರೆಸ್ಟಿಂಗ್​ ಫ್ಯಾಕ್ಟ್​. ಆಲ್​ ದಿ ಬೆಸ್ಟ್ ಟು ಶಾಂತಿ ಕ್ರಾಂತಿ ಎಂದು ಮಾಸ್ಟರ್​ ಆನಂದ್ ಅವರು​ ಹೇಳಿದ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net