ನಟ ದರ್ಶನ್​ಗೆ ಎದುರಾಯ್ತು ಮಹಾ ಸಂಕಷ್ಟ: ಪ್ರದೋಶ್​ ಸೇರಿ ಮೂವರಿಂದ ಮಾಫಿ ಸಾಕ್ಷಿಗೆ ಅರ್ಜಿ, ಕೋರ್ಟ್​ ಹೇಳಿದ್ದೇನು? ​Actor Darshan

ನಟ ದರ್ಶನ್​ಗೆ ಎದುರಾಯ್ತು ಮಹಾ ಸಂಕಷ್ಟ: ಪ್ರದೋಶ್​ ಸೇರಿ ಮೂವರಿಂದ ಮಾಫಿ ಸಾಕ್ಷಿಗೆ ಅರ್ಜಿ, ಕೋರ್ಟ್​ ಹೇಳಿದ್ದೇನು? ​Actor Darshan
ನಟ ದರ್ಶನ್​ಗೆ ಎದುರಾಯ್ತು ಮಹಾ ಸಂಕಷ್ಟ: ಪ್ರದೋಶ್​ ಸೇರಿ ಮೂವರಿಂದ ಮಾಫಿ ಸಾಕ್ಷಿಗೆ ಅರ್ಜಿ, ಕೋರ್ಟ್​ ಹೇಳಿದ್ದೇನು? ​Actor Darshan
Published on

ಪ್ರಮುಖ ಮುಖ್ಯಾಂಶಗಳು

  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ನಟ ದರ್ಶನ್ ಗ್ಯಾಂಗ್ ನ ಮೂವರು ಆರೋಪಿಗಳು ಅರ್ಜಿ
  • ದರ್ಶನ್ ಅವರಿಂದ ಬೆದರಿಕೆ ಇರುವ ಕಾರಣ ತನಗೆ ಬೇರೆ ಕೊಠಡಿ ನೀಡಿ ಭದ್ರತೆ ಕೋರಿದ ಎ14 ಆರೋಪಿ ಪ್ರದೋಶ್
  • ಪ್ರಕರಣದ ಎ8 ರವಿಶಂಕರ್ ಹಾಗೂ ಎ10 ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಸಿದ್ಧರಾಗಿ ನ್ಯಾಯಾಲಯಕ್ಕೆ ಮನವಿ
  • ಇತರರ ಅರ್ಜಿಯೊಂದಿಗೆ ಪ್ರದೋಶ್ ಅರ್ಜಿಯನ್ನು ಒಟ್ಟಾಗಿ ಪರಿಗಣಿಸದಂತೆ ವಕೀಲ ದಿವಾಕರ್ ವಾದ ಮಂಡನೆ
  • ಸಹಆರೋಪಿಗಳ ಈ ಅಚ್ಚರಿಯ ನಡೆ ನಟ ದರ್ಶನ್ ಗೆ ಕಾನೂನುರೀತ್ಯಾ ಭಾರಿ ಹಿನ್ನಡೆ ಉಂಟುಮಾಡುವ ಸಾಧ್ಯತೆ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ಗೆ ( ​Actor Darshan ) ಭಾರಿ ಸಂಕಷ್ಟ ಎದುರಾಗಿದೆ. ತಮ್ಮದೇ ಗ್ಯಾಂಗ್​ನಲ್ಲಿದ್ದ ಎ14 ಆರೋಪಿ ಪ್ರದೋಶ್ ಸೇರಿದಂತೆ ಮೂವರು ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವಂತೆ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ತಮ್ಮ ವಕೀಲ ದಿವಾಕರ್​ ಅವರಿಂದ ಅರ್ಜಿ ಸಲ್ಲಿಸಿರುವ ಪ್ರದೋಶ್​, ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಪೂರ್ಣ ನಿಜಾಂಶವನ್ನು ಬಹಿರಂಗಪಡಿಸುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತನ್ನನ್ನು ಕ್ಷಮಿಸುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದಾನೆ.
ಅರ್ಜಿ ವಿಚಾರಣೆ ನಡೆಸುವ ವೇಳೆ ಆರೋಪಿ ದರ್ಶನ್​ ಇರುವ ಜೈಲು ಕೊಠಡಿ ಬಿಟ್ಟು ಬೇರೊಂದು ಕೊಠಡಿಯಿಂದ ನನ್ನನ್ನು ಹಾಜರುಪಡಿಸಬೇಕೆಂದು ಪ್ರದೋಶ್​ ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದ. ಅದಕ್ಕೆ ಕಾರಣವನ್ನೂ ನೀಡಿರುವ ಆತ ದರ್ಶನ್​ ನನ್ನ ಮೇಲೆ ಬೆದರಿಕೆ ಹಾಕಬಹುದು ಎಂದಿದ್ದಾನೆ. ಅಲ್ಲದೆ, ತನಗೆ ಭದ್ರತೆ ನೀಡುವಂತೆಯೂ ಕೋರಿದ್ದಾನೆ.

ಇನ್ನಿಬ್ಬರಿಂದಲೂ ಅರ್ಜಿ

ಪ್ರದೋಷ್ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಇಂದು ಮಧ್ಯಾಹ್ನ ವಿಚಾರಣೆ ನಡೆಸಿತು. ಮಾಫಿ ಸಾಕ್ಷಿ ವಿಚಾರದಲ್ಲಿ ಸರ್ಕಾರಿ ವಕೀಲರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಕೇಳಿತು. ಇದರ ವಿಚಾರಣೆ ನಡೆಯುವಾಗ ಇನ್ನಿಬ್ಬರು ಆರೋಪಿಗಳು ತಮ್ಮನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸುವಂತೆ ಕೋರಿ ಮುಂದೆ ಬಂದಿದ್ದಾರೆ.
ಪ್ರಕರಣದ ಎ8 ಮತ್ತು ಎ10 ಆರೋಪಿಗಳಾದ ರವಿಶಂಕರ್ ಹಾಗೂ ವಿನಯ್ ಪರ ವಕೀಲರು ನ್ಯಾಯಾಲಯದ ಮುಂದೆ ಅಚ್ಚರಿಯ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಕಕ್ಷಿದಾರರು ಸರ್ಕಾರಿ ಸಾಕ್ಷಿಯಾಗಲು ಸಿದ್ಧರಿರುವುದಾಗಿ ತಿಳಿಸಿದ್ದು, ಈ ಸಂಬಂಧ ಮಧ್ಯಾಹ್ನದ ಒಳಗೆ ಅಧಿಕೃತ ಅರ್ಜಿ ಸಲ್ಲಿಸುವುದಾಗಿ ಕೋರ್ಟ್‌ಗೆ ತಿಳಿಸಿದ್ದಾರೆ. ಈ ಬೆಳವಣಿಗೆಯು ದರ್ಶನ್ ಮತ್ತು ಅವರ ಬೆಂಬಲಿಗರಿಗೆ ಕಾನೂನು ತೊಡಕುಗಳನ್ನು ಮತ್ತಷ್ಟು ಹೆಚ್ಚಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.
ಇದೇ ವೇಳೆ, ಹದಿನಾಲ್ಕನೇ ಆರೋಪಿ ಪ್ರದೋಶ್ ಪರ ವಕೀಲ ದಿವಾಕರ್ ಅವರು ನ್ಯಾಯಾಲಯದ ಗಮನ ಸೆಳೆದು, ಇತರರ ಅರ್ಜಿಯೊಂದಿಗೆ ತಮ್ಮ ಕಕ್ಷಿದಾರನ ಅರ್ಜಿಯನ್ನು ಒಟ್ಟಾಗಿ ಪರಿಗಣಿಸಬಾರದು ಎಂದು ವಾದಿಸಿದರು. ಮೊದಲು ತಮ್ಮ ಕಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆಯೂ, ಆ ಬಳಿಕವಷ್ಟೇ ಪ್ರಾಸಿಕ್ಯೂಷನ್ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದೂ ನ್ಯಾಯಾಲಯಕ್ಕೆ ಬಲವಾದ ಮನವಿ ಮಾಡಿದರು. ಎಲ್ಲರ ವಾದಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ವಿಚಾರಣೆಯನ್ನು ಕೆಲಕಾಲ ಮುಂದೂಡಿದೆ.

ದರ್ಶನ್​ಗೆ ಭಾರಿ ಸಂಕಷ್ಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹಆರೋಪಿಗಳಾದ ಪ್ರದೋಶ್​, ರವಿಶಂಕರ್ ಹಾಗೂ ವಿನಯ್ ಮಾಫಿ ಸಾಕ್ಷಿಯಾಗಲು ಮುಂದೆ ಬಂದಿರುವುದು ದರ್ಶನ್ ಹಾಗೂ ಅವರ ಬೆಂಬಲಿಗರಿಗೆ ಕಾನೂನುರೀತ್ಯಾ ಭಾರಿ ಹಿನ್ನಡೆಯನ್ನುಂಟು ಮಾಡಲಿದೆ. ಅಪರಾಧ ಕೃತ್ಯದಲ್ಲಿ ನೇರವಾಗಿ ಭಾಗಿಯಾದವರೇ ಪ್ರಾಸಿಕ್ಯೂಷನ್ ಪರ ಸಾಕ್ಷಿದಾರರಾಗಿ ಬದಲಾದಾಗ, ತನಿಖಾಧಿಕಾರಿಗಳಿಗೆ ಪ್ರಕರಣದ ಒಳಮರ್ಮ ಹಾಗೂ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದಲ್ಲಿ ದೃಢಪಡಿಸುವುದು ಅತ್ಯಂತ ಸುಲಭವಾಗುತ್ತದೆ. ಆಂತರಿಕ ವ್ಯಕ್ತಿಗಳೇ ಸರ್ಕಾರದ ಪರ ಸಾಕ್ಷ್ಯ ನುಡಿಯುವುದರಿಂದ ದರ್ಶನ್ ಮತ್ತು ಅವರ ಪಡೆಗೆ ಜಾಮೀನು ಪಡೆಯುವುದು ಕಷ್ಟವಾಗುವುದಲ್ಲದೆ, ಭವಿಷ್ಯದಲ್ಲಿ ವಿಚಾರಣೆಯು ದರ್ಶನ್​ ವಿರುದ್ಧ ತಿರುಗುವ ಸಾಧ್ಯತೆಗಳು ಮತ್ತು ಗಂಭೀರ ಕಾನೂನು ತೊಡಕುಗಳು ದಟ್ಟವಾಗಿ ಹೆಚ್ಚಾಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net