ನೂರೊಂದು ನೆನಪು ಎದೆಯಾಳದಿಂದ... ಡಾ.ವಿಷ್ಣುವರ್ಧನ್ 16ನೇ ಪುಣ್ಯಸ್ಮರಣೆ ನಿಮಿತ್ತ ನಟ ಅನಿರುದ್ಧ ಲೇಖನ

ಡಾ.ವಿಷ್ಣುವರ್ಧನ್​
ಡಾ.ವಿಷ್ಣುವರ್ಧನ್​
Published on

ಪ್ರಮುಖ ಮುಖ್ಯಾಂಶಗಳು

  • ಡಾ.ವಿಷ್ಣುವರ್ಧನ್ 16ನೇ ಪುಣ್ಯ ಸ್ಮರಣೆ
  • ಅಪ್ಪಾಜಿ ಜತೆಗಿನ ಒಡನಾಟ ನೆನದ ನಟ, ಅಳಿಯ ಅನಿರುದ್ಧ ಜತಕರ
  • ವಿಷ್ಣು ಅಪ್ಪಾಜಿ ಮಾರ್ಗದರ್ಶಕರಾಗಿದ್ದರು ಎಂದು ಹಂಚಿಕೊಂಡ ನಟ
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ 16ನೇ ಪುಣಸ್ಮರಣೆ ಇಂದು. ದೈಹಿಕವಾಗಿ ಅವರು ನಮ್ಮನ್ನು ಬಿಟ್ಟು ಹೋಗಿ 16 ವರ್ಷಗಳಾದರೂ, ಅವರು ನೂರಾರು ನೆನಪುಗಳನ್ನು ಉಳಿಸಿಹೋಗಿದ್ದಾರೆ. ಅಭಿಮಾನಿಗಳ ಪಾಲಿಗೆ ಇಂದಿಗೂ ಸಾಹಸಸಿಂಹನಾಗಿ ಮೆರೆಯುತ್ತಿದ್ದಾರೆ. ಅವರ 16ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಳಿಯ, ನಟ ಅನಿರುದ್ಧ ಜತಕರ, ವಿಷ್ಣು ಜತೆಗಿನ ಒಡನಾಟದ ಕುರಿತು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಅನಿರುದ್ಧ ಜತಕರ, ನಟ, ವಿಷ್ಣು ಅಳಿಯ
ಸರಳತೆ ಹಾಗೂ ಶಿಸ್ತಿನ ವಿಚಾರವಾಗಿ ಅಪ್ಪಾಜಿ ಅವರನ್ನು ದಿನಂಪ್ರತಿ ನೆನಪಿಸಿಕೊಳ್ಳುತ್ತೇನೆ. ಅವರೊಬ್ಬ ದೊಡ್ಡ ಸೂಪರ್‌ಸ್ಟಾರ್ ಆದರೂ ಎಂದಿಗೂ ಸ್ಟಾರ್‌ಡಂ ಪ್ರದರ್ಶಿಸಿದವರಲ್ಲ. ಹಾಗೆಯೇ ಅಭಿಮಾನಿಗಳು ನೀಡುವ ಪ್ರೀತಿ, ಅಭಿಮಾನವನ್ನು ಉಳಿಸಿಕೊಳ್ಳಬೇಕು ಎಂಬ ಅರಿವು, ಜವಾಬ್ದಾರಿ ಅವರಲ್ಲಿ ಕಂಡಿದ್ದೆ. ಇನ್ನು, ಶೂಟಿಂಗ್ ಇರಲಿ, ಬಿಡಲಿ ಎಂದಿಗೂ ಶಿಸ್ತು ಮರೆತವರಲ್ಲ. ಪ್ರತಿ ದಿನ ವ್ಯಾಯಾಮ ಮಾಡುತ್ತಿದ್ದರು. ಹೇಳಿದ ಸಮಯಕ್ಕೆ ಮುಂಚೆಯೇ ಶೂಟಿಂಗ್ ಸ್ಥಳದಲ್ಲಿ ಇರುತ್ತಿದ್ದರು. ಕೆಲಸದ ವಿಚಾರದಲ್ಲಿ ಯಾವತ್ತೂ ರಾಜೀ ಆದವರಲ್ಲ. ಒಂದು ಪಾತ್ರ ಮಾಡುತ್ತಿದ್ದಾರೆ ಎಂದರೆ ಅದಕ್ಕಾಗಿ ಸಾಕಷ್ಟು ಅಧ್ಯಯನ ಮಾಡುತ್ತಿದ್ದರು. ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಪ್ಪಾಜಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದಿನ ಸಿನಿಮಾದಲ್ಲಿ ಹಿಂದಿನ ಪಾತ್ರಗಳ ಛಾಯೆ ಇರಲೇಬಾರದು ಎಂದು ವಿಭಿನ್ನತೆ ಕಾಪಾಡಿಕೊಳ್ಳುವುದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದರು. ಅಷ್ಟು ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಅದುವೇ ನಮಗೆ ದಾರಿದೀಪ. ಅವರ ಒಡನಾಟದಿಂದ ಸಾಕಷ್ಟು ಕಲಿತಿದ್ದೇನೆ. ಬಹುಮುಖ್ಯವಾಗಿ ಸಮಾಜಸೇವೆ ಮಾಡಬೇಕು ಎನ್ನುವುದು ಅಪ್ಪಾಜಿಯಿಂದಾನೇ ಕಲಿತಿದ್ದು. ಇಷ್ಟೆಲ್ಲಾ ನಮಗೆ ನೀಡಿರುವಾಗ ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಬೇಕು ಎನ್ನುವುದು ಅವರ ಕಾಳಜಿಯಾಗಿತ್ತು.
ಮರೆಯಲಾರದ ಘಟನೆ
ವಿಷ್ಣು ಅಪ್ಪಾಜಿ ಜತೆ ಮರೆಯಲಾದಂತ ಘಟನೆಗಳು ಸಾವಿರಾರು ಇವೆ. ಒಮ್ಮೆ ಅವರ ಜತೆ ಒಂದು ಊರಿಗೆ ಹೋಗಿದ್ದೆ. ಸ್ವಾಮೀಜಿಯೊಬ್ಬರು ಅಪ್ಪಾಜಿ ಕೊರಳಿಗೆ ಚೈನ್ ಹಾಕಿದ್ದರು. ಆ ಚೈನ್ ಹಾಕಿ ಎರಡು ನಿಮಿಷನೂ ಕಳೆದಿರಲಿಲ್ಲ. ಕೂಡಲೇ ಆ ಚೈನ್ ನನ್ನ ಕೊರಳಿಗೆ ಹಾಕಿ, ‘ನಿಮಗೆ ಒಳ್ಳೆಯದಾಗಲಿ ಅನಿ’ ಎಂದು ಆಶೀರ್ವದಿಸಿದ್ದರು. ಇದೇ ರೀತಿ ಸದಾ ನನ್ನನ್ನು ಪ್ರೇರೇಪಿಸಿದ ಹಲವು ಘಟನೆಗಳು ನೆನಪಿನ ಬುತ್ತಿಯಲ್ಲಿವೆ. ಅಪ್ಪಾಜಿ ನಟಿಸಿದ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಎಲ್ಲವೂ ನನಗೆ ಇಷ್ಟವಾದ ಸಿನಿಮಾಗಳೇ. ಪ್ರಮುಖವಾಗಿ ‘ಸಿಂಹಾದ್ರಿಯ ಸಿಂಹ’ ಪಾತ್ರ ನನ್ನನ್ನು ಹೆಚ್ಚು ಸೆಳೆದಿದ್ದು. ‘ಸಿಂಹಾದ್ರಿಯ ಸಿಂಹ’ದಲ್ಲಿ ಮೂರು ಪಾತ್ರಗಳನ್ನೂ ಅವರೇ ನಿರ್ವಹಿಸಿದ್ದು ಎಂಬುದು ಗೊತ್ತೇ ಆಗದಂತೆ ಸೂಕ್ಷ್ಮವಾಗಿ ನಟಿಸಿದ್ದಾರೆ. ಅವರ ಮಾವ (ಭಾರತಿ ಅಮ್ಮನವರ ತಂದೆ) ಈ ಸಿನಿಮಾ ನೋಡಿ, ‘ಅಪ್ಪನ ಪಾತ್ರ (ನರಸಿಂಹಗೌಡ ಪಾತ್ರ) ಮಾಡಿದವರು’ ಯಾರು ಎಂದು ಕೇಳಿದ್ದರು. ಆ ಪಾತ್ರವನ್ನು ಅವರ ಅಳಿಯನೇ ಮಾಡಿದ್ದು ಎಂದು ಅವರಿಗೂ ಗೊತ್ತಿರಲಿಲ್ಲ. ಪ್ರತಿ ಪಾತ್ರವನ್ನು ವಿಭಿನ್ನವಾಗಿ ಅಭಿನಯಿಸುವ ಕ್ಷಮತೆ ಅವರಲ್ಲಿತ್ತು.

ನನ್ನ ಹಾಡಿಗೆ ಅಭಿನಂದಿಸಿದ್ದು ಕೊನೇ

ಅವರ ನಿಧನದ ಹಿಂದಿನ ದಿನ ನನಗೆ ಅವರು ಕರೆ ಮಾಡಿ, ಮಾತನಾಡಿ ಅಭಿನಂದಿಸಿದ್ದರು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಹಾಡು ಹಾಡಿದ್ದೆ. ಮೈಸೂರಿನಲ್ಲಿದ್ದ ಅವರು ಕಾರ್ಯಕ್ರಮ ನೋಡಿ, ‘ಚೆನ್ನಾಗಿ ಹಾಡಿದ್ದೀರಿ ಅನಿ’ ಎಂದು ೆನ್ ಕರೆ ಮಾಡಿ, ಅಭಿನಂದಿಸಿದ್ದರು. ಅದುವೇ ಅವರ ಜತೆ ನಾನು ಮಾತನಾಡಿದ ಕೊನೆಯ ಮಾತು. ನಾನು ‘ಜ್ಯೇಷ್ಠ’ ಹಾಗೂ ‘ನಾನೆಲ್ಲೋ ನೀನೆಲ್ಲೋ’ ಚಿತ್ರಗಳಲ್ಲಿ ಅವರ ಜತೆ ಅಭಿನಯಿಸಿದ್ದೇನೆ. ಆ ಸಮಯದಲ್ಲಿ ಅವರು ನನಗೆ ನೀಡಿದ ಪ್ರೋತ್ಸಾಹ, ಸ್ಪೂರ್ತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಎಷ್ಟೇ ಬಿಜಿ ಇದ್ದರೂ, ಅಭಿಮಾನಿಗಳಿಗೆ ಹೆಚ್ಚು ಸಮಯ ನೀಡುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net