ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ‘45’ ಚಿತ್ರವು ತಾರಾಗಣ ಹಾಗೂ ತಾಂತ್ರಿಕವರ್ಗದ ಮೂಲಕವೇ ಬಹು ನಿರೀಕ್ಷೆ ಮೂಡಿಸಿದೆ. ಇದೇ ಡಿ.25ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 15ಕ್ಕೆ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಡಾ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದು, ಈ ಮೂವರ ಜುಗಲ್‌ಬಂದಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಜರ್ನಿ ಹಾಗೂ ವಿಶೇಷತೆ ಕುರಿತು ಅರ್ಜುನ್ ಜನ್ಯ, ‘45’ ಹೊಸತನದ ಸಿನಿಮಾ. ಹೊಸ ಲೋಕವನ್ನೇ ಸೃಷ್ಟಿಸಲಾಗಿದೆ. ಇದು ಲವ್‌ಸ್ಟೋರಿ, ಸೈನ್ಸ್, ಥ್ರಿಲ್ಲರ್ ಈ ತರದ ಜಾನರ್‌ಗೆ ಸೇರಿದ ಚಿತ್ರವಲ್ಲ. ಬದಲಾಗಿ ಇದೊಂದು ್ಯಾಂಟಸಿ ಎನ್ನಬಹುದು. ಜತೆಗೆ ಲಾಜಿಕ್ ಇದೆ. ನಾನು ಈ ಚಿತ್ರದ ನಿರ್ದೇಶಕ ಎನ್ನುವುದಕ್ಕಿಂತ ಮೊದಲು ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟರ ಅಭಿಮಾನಿ. ಒಬ್ಬ ಅಭಿಮಾನಿ ನೆಚ್ಚಿನ ನಾಯಕರಿಗಾಗಿ ಸಿನಿಮಾ ಮಾಡಿದರೆ, ಹೇಗಿರುತ್ತದೆಯೋ ಈ ಚಿತ್ರವೂ ಅದೇ ರೀತಿ ಇದೆ. ಹಾಗಂತ, ಬಿಲ್ಡಪ್ ಇಲ್ಲ. ಶಿವಣ್ಣ, ಉಪೇಂದ್ರ ಕಾಸ್ಟ್ಯೂಮ್, ಲುಕ್, ಸ್ಟೈಲ್ ವಿಭಿನ್ನವಾಗಿದೆ. ಇವರಿಬ್ಬರ ನಡುವೆ ರಾಜ್ ಬಿ. ಶೆಟ್ಟಿ ಸಿಕ್ಕ ಸ್ಪೇಸ್‌ನಲ್ಲೆಲ್ಲ ತಮ್ಮ ನಟನಾ ಕೌಶಲ ಸಾಬೀತುಪಡಿಸಿದ್ದಾರೆ. ಈ ಮೂವರ ಕಾಂಬಿನೇಷನ್ ಇರುವ ಸಿನಿಮಾ ಆದ್ದರಿಂದ ‘45’ ಪ್ರೇಕ್ಷಕರಿಗೆ ಹೊಸ ಜಗತ್ತಿನ ಅನುಭವ ನೀಡುತ್ತದೆ. ಮೊದಲ ಚಿತ್ರಕಥೆಗೂ, ಈಗ ಸಿದ್ಧವಾಗಿರುವ ಸಿನಿಮಾಗೂ ಕೆಲ ಬದಲಾವಣೆಯಾಗಿವೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.