Oscar Awards - ಆಸ್ಕರ್​​ ಬಗ್ಗೆ ಕನ್ನಡ ಚಿತ್ರರಂಗಕ್ಕೆ ಅಸಡ್ಡೆಯೋ? ಮಾಹಿತಿ ಕೊರತೆಯೋ?

Oscar Awards -
Oscar Awards -
Published on
Oscar Awards -
ಆಸ್ಕರ್​ ಅರ್ಥಾತ್​ ಅಕಾಡೆಮಿ ಪ್ರಶಸ್ತಿಯನ್ನು ಸಿನಿಮಾಗಳಿಗೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಹೇಳಲಾಗುತ್ತದೆ. ಇದೀಗ 2027ರ ಮಾರ್ಚ್​ನಲ್ಲಿ ನಡೆಯಲಿರುವ 99ನೇ ಸಾಲಿನ ಆಸ್ಕರ್​ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಪ್ರತಿ ವರ್ಷ ಭಾರತದಿಂದ ಒಂದು ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಅಕಾಡೆಮಿಗೆ ಕಳುಹಿಸಲಾಗುತ್ತದೆ. ಅದರಂತೆ ಈ ವರ್ಷವೂ ಎಫ್​ಎಫ್​ಐ (ಫಿಲಂ ಫೆಡರೇಷನ್​ ಆಫ್​ ಇಂಡಿಯಾ) ಕನ್ನಡದ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರ ಅಧ್ಯಕ್ಷತೆಯಲ್ಲಿ 14 ಜನರ ಸಮಿತಿ ರಚಿಸಿತ್ತು. ಆ ಸಮಿತಿ ವಿವಿಧ ಭಾಷೆಗಳ 33 ಸಿನಿಮಾಗಳನ್ನು ವೀಸಿ "ಗೋಂಧಳ್​' ಎಂಬ ಮರಾಠಿ ಚಿತ್ರವನ್ನು ಆಯ್ಕೆ ಮಾಡಿದೆ. ಆದರೆ ವಿಪರ್ಯಾಸವೆಂದರೆ ಈ 33 ಚಿತ್ರಗಳಲ್ಲಿ ಒಂದೂ ಕನ್ನಡ ಸಿನಿಮಾ ಇಲ್ಲ! ಈ ಬಗ್ಗೆ ಬೇಸರ ವ್ಯಕ್ತಪಡಿಸುವ ನಿರ್ದೇಶಕ ಪಿ. ಶೇಷಾದ್ರಿ, "ಕಳೆದ ಅಕ್ಟೋಬರ್​ 1ರಿಂದ ಈ ಸೆ. 30ರವರೆಗೆ ರಿಲೀಸ್​ ಆದ, ಆಗಲಿರುವ ಸಿನಿಮಾಗಳು ಅರ್ಜಿ ಸಲ್ಲಿಸಬಹುದು. ಈ ಬಾರಿ ಹಿಂದಿ (14), ಮರಾಠಿ (5), ತೆಲುಗು (4), ತಮಿಳು (2), ಗುಜರಾತಿ (2), ಮಲಯಾಳಂ ಜತೆಗೆ ನಾಗಾಲ್ಯಾಂಡ್​, ರಾಜಸ್ಥಾನದಿಂದಲೂ ಒಟ್ಟು 33 ಚಿತ್ರಗಳು ಬಂದಿದ್ದವು. ಆದರೆ, ಒಂದೂ ಕನ್ನಡ ಸಿನಿಮಾ ಇರಲಿಲ್ಲ. "ಟಾಕ್ಸಿಕ್​' ಚಿತ್ರವನ್ನು ಕಳುಹಿಸಿರುತ್ತಾರೆ ಎಂಬ ನಿರೀೆ ಇತ್ತು. ಆದರೆ, ಇರಲಿಲ್ಲ. ಒಂದೂ ಕನ್ನಡ ಚಿತ್ರ ಇಲ್ಲವಲ್ಲಾ, ನಾವು ಬಾವಿ ಕಪ್ಪೆಗಳಾಗಿದ್ದೇವೆಯೇ ಹೊರತು, ಸಮುದ್ರಕ್ಕೆ ಹೋಗುತ್ತಿಲ್ಲ ಅಂತನ್ನಿಸಿ ತೀರಾ ಬೇಸರವಾಯಿತು' ಎಂದರು.

ಒಂದೂ ಕನ್ನಡ ಸಿನಿಮಾ ಆಯ್ಕೆಯಾಗಿಲ್ಲ!

1929ರಲ್ಲಿ ಪ್ರಾರಂಭವಾದ ಆಸ್ಕರ್ಸ್​ ಸದ್ಯ 99ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದೆ. ಅದಕ್ಕೆ 1957ರಿಂದ ಅರ್ಥಾತ್​ ಕಳೆದ 69 ವರ್ಷಗಳಿಂದ "ಗೋಂಧಳ್​' ಸೇರಿ 59 ಚಿತ್ರಗಳನ್ನು ಆಸ್ಕರ್ಸ್​ಗೆ ಭಾರತದಿಂದ ಅಧಿಕೃತವಾಗಿ ಕಳುಹಿಸಲಾಗಿದೆ. ಅವುಗಳಲ್ಲಿ 34 ಹಿಂದಿ, 10 ತಮಿಳು, ತಲಾ ನಾಲ್ಕು ಮರಾಠಿ ಮತ್ತು ಮಲಯಾಳಂ, ತಲಾ ಎರಡು ಬೆಂಗಾಲಿ ಮತ್ತು ಗುಜರಾತಿ, ತೆಲುಗು, ಅಸ್ಸಾಮೀಸ್​, ಉರ್ದು ಭಾಷೆಗಳಲ್ಲಿ ತಲಾ ಒಂದು ಸಿನಿಮಾಗಳು ಆಯ್ಕೆಯಾಗಿವೆ. ಆದರೆ, ಇದುವರೆಗೆ ಒಂದೇ ಒಂದು ಕನ್ನಡ ಸಿನಿಮಾ ಆಸ್ಕರ್​ಗೆ ಅಧಿಕೃತವಾಗಿ ಆಯ್ಕೆಯಾಗಿಲ್ಲ.

ಅಧಿಕೃತ ಆಯ್ಕೆಯ ಉಪಯೋಗವೇನು?

"ಆಯ್ಕೆಯಾಗಲಿ, ಬಿಡಲಿ ತಮ್ಮ ಸಿನಿಮಾ ಕಂಟೆಂಟ್​ ಬಗ್ಗೆ ಭರವಸೆ ಇರುವ ತಂಡಗಳು ಮುಂದಾಗಬೇಕು. ಅದರಿಂದ ಹಲವು ಉಪಯೋಗಗಳಿವೆ' ಎನ್ನುವ ನಿರ್ದೇಶಕ ಪಿ. ಶೇಷಾದ್ರಿ, "ಅಕಾಡೆಮಿ ಅವಾರ್ಡ್ಸ್​ನಲ್ಲಿ ವಿಶ್ವಾದ್ಯಂತ 9,500ಕ್ಕೂ ಅಧಿಕ ಸದಸ್ಯರಿದ್ದಾರೆ. ಒಂದು ದೇಶದಿಂದ ಅಧಿಕೃತವಾಗಿ ಆಯ್ಕೆಯಾಗುವ ಚಿತ್ರಗಳನ್ನ ಬಹುತೇಕರು ವೀಸುತ್ತಾರೆ. ಅವರೆಲ್ಲರಿಗೂ ನಮ್ಮ ಭಾಷೆ, ಸಂಸತಿ, ನಮ್ಮ ನಾಡಿನ ಬಗ್ಗೆ ತಿಳಿಯುತ್ತದೆ. ಆಗ ನಮ್ಮ ಚಿತ್ರರಂಗದ ಬಗ್ಗೆ ಅವರಲ್ಲೂ ಅರಿವು ಮೂಡುತ್ತದೆ. ಹಾಗೇ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ನಮ್ಮ ಚಿತ್ರಕ್ಕೆ ಪ್ರಚಾರ ದೊರೆಯುತ್ತದೆ' ಎನ್ನುತ್ತಾರೆ.

ನಿರಾಸಕ್ತಿಯೋ? ಮಾಹಿತಿಯ ಕೊರತೆಯೋ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ, ಹಿರಿಯ ನಟ ಸುಂದರ್​ ರಾಜ್​, "ಮಾಹಿತಿ ಕೊರತೆ ಇದೆ. ಜತೆಗೆ ನಿರಾಸಕ್ತಿಯೂ ಕಾರಣ' ಎನ್ನುತ್ತಾರೆ. ಮುಂದುವರಿದು "ಕನ್ನಡದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಸಿನಿಮಾಗಳೇನೋ ಬರುತ್ತಿವೆ. ಆದರೆ, ಆಸ್ಕರ್​ವರೆಗೆ ಹೋಗುತ್ತಿಲ್ಲವಲ್ಲಾ ಎಂಬ ಬೇಸರ ನಮಗೂ ಇದೆ. ಆಸ್ಕರ್ಸ್​, ಪನೋರಮಾ, ವಿವಿಧ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಬಗ್ಗೆ ಕೆಲವರಿಗೆ ಗೊತ್ತು, ಕೆಲವರಿಗೆ ಮಾಹಿತಿಯ ಕೊರತೆ ಇದೆ. ಜತೆಗೆ ಮಾಹಿತಿ ಇರುವವರು ಪ್ರವೇಶ ಶುಲ್ಕ ₹1.25 ಲಕ್ಷ ಸೇರಿ ಸುಮಾರು ₹2 ಲಕ್ಷ ರ್ಖಚಾಗುತ್ತದೆ. ಅದೇ ಹಣವನ್ನು ಥಿಯೇಟರ್​ಗೆ ಖರ್ಚು ಮಾಡಿದರೆ, ಜನ ಬಂದು ನೋಡುತ್ತಾರಲ್ಲವೇ ಅಂತ ಯೋಚಿಸುತ್ತಾರೆ. ಫಿಲಂ ಚೇಂಬರ್​ಗೆ ನಿರ್ಮಾಪಕರು ಬಂದು ಕೇಳಿದರೆ, ನಾವಂತೂ ಎಲ್ಲ ರೀತಿಯ ಮಾಹಿತಿ ನೀಡಲು ಸಿದ್ಧ. ಆದರೆ, ಅವರೇ ಹಿಂದೇಟು ಹಾಕುತ್ತಿದ್ದಾರೆ' ಎನ್ನುತ್ತಾರೆ.

ಕೋಟ್​:

ಆಸ್ಕರ್​ ಪ್ರಶಸ್ತಿ ಆಯ್ಕೆಯ ಕುರಿತು ಕನ್ನಡದ ನಿರ್ಮಾಪಕರಿಗೆ ಮಾಹಿತಿ ಕೊರತೆ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಆ ಬಗ್ಗೆ ತಿಳಿದುಕೊಂಡು ನನ್ನ ಸಿನಿಮಾಗಳನ್ನೇ ಕಳುಹಿಸಲು ಪ್ರಯತ್ನಿಸುತ್ತೇನೆ. "ಎ ಫಾರ್​ ಆನಂದ್​'ಗೆ ಆ ಸಾಮರ್ಥ್ಯವಿದೆ ಎಂಬ ಭಾವನೆಯಿದೆ. ನಿರ್ದೇಶಕ ಶ್ರೀನಿ ಮಕ್ಕಳು, ಶಿಕ್ಷಣದ ಕುರಿತ ಹಲವು ವಿಷಯಗಳನ್ನು ಸೇರಿಸಿ ಸೂಕ್ಷ್ಮವಾದ ಕಥೆ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ "ಎ ಫಾರ್​ ಆನಂದ್​' ಚಿತ್ರವನ್ನು ಖಂಡಿತ ಆಸ್ಕರ್​ಗೆ ಕಳುಹಿಸಲು ಪ್ರಯತ್ನಿಸುತ್ತೇವೆ.
- ಶಿವರಾಜಕುಮಾರ್​, ಹಿರಿಯ ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net