

ಬೆಂಗಳೂರು: ಚಿತ್ರರಂಗದಲ್ಲಿ ನಡೆಯುವ ಘಟನೆಗಳನ್ನೇ ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು ಮೂಡಿಬಂದಿವೆ. ಕಳೆದ ವರ್ಷವಷ್ಟೇ ‘ಫಸ್ಟ್ ಡೇ, ಫಸ್ಟ್ ಶೋ’ ತೆರೆಕಂಡಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಹೆಸರು ‘18 ಎಕ್ರೆ ಸಿನಿಮಾ ಲಕ್ಕಪ್ಪ’. ‘ಪ್ರೀತಿಯ ಹುಚ್ಚ’ ನಿರ್ದೇಶಕ ವಿ. ಕುಮಾರ್ (ರಾಘವ್ ವಿನೋದ್ ಕುಮಾರ್) ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜತೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಚಿತ್ರರಂಗದ ತೆರೆಯ ಹಿಂದೆ ನಡೆಯುವ ಘಟನೆಗಳ ಸುತ್ತ ಸಾಗುವ ಚಿತ್ರವಿದು. ಚಿತ್ರರಂಗಕ್ಕೆ ಹೊಸದಾಗಿ ಬರುವ ನಾಯಕ- ನಾಯಕಿಯರ ಅನುಭವಗಳು, ಪ್ರೊಡಕ್ಷನ್ ಅನುಭವ ಇಲ್ಲದೆ ಚಿತ್ರರಂಗಕ್ಕೆ ಬರುವ ನಿರ್ಮಾಪಕರನ್ನು ಮ್ಯಾನೇಜರ್‌ಗಳು ಹೇಗೆಲ್ಲಾ ವಂಚಿಸುತ್ತಾರೆ? ಎಂಬುದೇ ‘18 ಎಕ್ರೆ ಸಿನಿಮಾ ಲಕ್ಕಪ್ಪ’ ಚಿತ್ರ’ ಎಂದು ಮಾಹಿತಿ ನೀಡುತ್ತಾರೆ ಕುಮಾರ್. ಹರಿಚೇತು, ಸಂಜನಾ ನಾಯ್ಡು ಮುಖ್ಯಪಾತ್ರದಲ್ಲಿದ್ದಾರೆ. ಮಂಡ್ಯ, ಕೀಲಾರ, ಬೆಂಗಳೂರು, ಸಕಲೇಶಪುರ ಹಾಗೂ ಶ್ರವಣಬೆಳಗೊಳ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ರಂಗರಾಜನ್ ಸಂಗೀತ, ಅರುಣ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಶೂಟಿಂಗ್, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿಕೊಂಡು ರಿಲೀಸ್‌ಗೆ ಸಿದ್ಧವಾಗಿದ್ದು, ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ.