ಸುದೀಪ್‌ಗೆ ಅಕ್ಟೋಬರ್ ತಿಂಗಳು ಟೈಟ್ ಶೆಡ್ಯೂಲ್ ಇತ್ತು. ‘ಮಾರ್ಕ್’ ಶೂಟಿಂಗ್ ಭರದಿಂದ ಸಾಗಿತ್ತು. ಜತೆಗೆ ಸೆ.30ಕ್ಕೆ ‘ಬಿಗ್‌ಬಾಸ್ ಕನ್ನಡ’ ಸೀಸನ್ 12’ಗೂ ಚಾಲನೆ ಸಿಕ್ಕಿತ್ತು. ಈ ನಡುವೆಯೂ ಅ.7ರಂದು ಶಿವ ಗಣೇಶ್ ನಿರ್ದೇಶನದ ಹೊಸಬರ ‘ಯಾರಿಗೂ ಹೇಳ್ಬೇಡಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ತಂಡಕ್ಕೆ ಬೆಂಬಲವಾಗಿ ನಿಂತಿದ್ದರು. ಹಾಗೆಯೇ ಅದೇ 17ರಂದು ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್‌ನ ‘ಬ್ರ್ಯಾಟ್’ ತಂಡಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರೇಲರ್ ರಿಲೀಸ್ ಮಾಡಿಕೊಟ್ಟು, ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದಾದ ಎರಡು ದಿನಕ್ಕೆ ಅ.19ರ ರವಿವಾರ ‘ಬಿಗ್‌ಬಾಸ್’ ಶೋ ನಿರೂಪಣೆ ಮುಗಿಸಿಕೊಂಡವರೇ ನೇರ ಚಂದನ್ ಕುಮಾರ್ ನಟಿಸಿ, ನಿರ್ದೇಶಿಸಿರುವ ಫ್ಲರ್ಟ’ ಟ್ರೇಲರ್ ಬಿಡುಗಡೆಗೆ ಆಗಮಿಸಿದ್ದರು. ಮರುದಿನವೇ ಅಂದರೆ ಅ.20ರಂದು ಕಾರ್ತಿಕ್ ಜಯರಾಮ್ ನಟಿಸಿರುವ ‘ದ ವೀರ್’ ಟೀಸರ್ ಅನಾವರಣಗೊಳಿಸಿದ್ದರು. ಡಾರ್ಲಿಂಗ್ ಕೃಷ್ಣ, ಚಂದನ್, ಕಾರ್ತಿಕ್ ಜಯರಾಮ್ ‘ಸಿಸಿಎಲ್’ನಿಂದಲೂ ಕಿಚ್ಚನ ಜತೆ ಒಡನಾಡಿಗಳಾಗಿದ್ದು, ಆತ್ಮೀಯರ ಚಿತ್ರಕ್ಕೆ ಸುದೀಪ್ ಆತ್ಮೀಯವಾಗಿಯೇ ಬೆಂಬಲಿಸಿದ್ದರು.