ನಟ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ; ದವಸ-ಧಾನ್ಯ ತರಲು ಮನವಿ ಮಾಡಿದ್ದೇಕೆ ?

d boss
Published on

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. 47 ನೇ ಹುಟ್ಟು ಹಬ್ಬವನ್ನು ಇದೇ ಫೆಬ್ರವರಿ 16 ಶುಕ್ರವಾರ ದರ್ಶನ್ ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಾರೆ.

ತಿಂಗಳಿಗೂ ಮೊದಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎನ್ನುವ ಯೋಜನೆಯನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ. ಈಗಾಗಲೇ ತಯಾರಿ ಶುರುವಾಗಿದೆ. ಆದರೆ ದರ್ಶನ್ ಮನೆ ಮುಂದೆ ಒಂದು ಬೋರ್ಡ್ ಕೂಡ ಹಾಕಲಾಗಿದೆ.

ಬೋರ್ಡ್​ನಲ್ಲಿ ಏನಿದೆ ?

ಬ್ಯಾನರ್​, ಕೇಕ್​ ಹಾರಗಳನ್ನು ದಯಮಾಡಿ ತರಬೇಡಿ ಅನ್ನೋ ಮನವಿ ಬೋರ್ಡ್ ಕೂಡ ಹಾಕಲಾಗಿದೆ. ತರಲೇಬೇಕು ಅಂತ ಇದ್ರೆ ದವಸ-ಧಾನ್ಯಗಳನ್ನ ತಂದು ಕೊಡು ಅಂತಲೇ ದರ್ಶನ್ ಕೇಳಿಕೊಂಡಿದ್ದಾರೆ. ಇವುಗಳನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್​ ಹತ್ತುವುದು , ಹೂವು ಕುಂಡಗಳನ್ನು ಬೀಳಿಸವುದು ಹಾಗೂ ಆ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು ಎಂದು ಮನವಿ ಮಾಡಿದ್ದಾರೆ.

ಕಳೆದ ಐದಾರು ವರ್ಷಗಳಿಂದಲೂ ದರ್ಶನ್ ಅಭಿಮಾನಿಗಳು ದವಸ-ಧಾನ್ಯಗಳನ್ನ ಮೂಟೆಗಟ್ಟಲೆ ತಂದುಕೊಡ್ತಾನೇ ಇದ್ದಾರೆ. ಪ್ರತಿ ಜನ್ಮ ದಿನಕ್ಕೂ ಈ ಒಂದು ಪರಿಪಾಟು ಮುಂದುವರೆದಿದೆ. ಈ ವರ್ಷವೂ ಅದು ಈಗಾಗಲೇ ಶುರು ಆಗಿದೆ. ಜನ್ಮ ದಿನದ 13 ದಿನಗಳ ಮುಂಚೇನೆ ಅಭಿಮಾನಿಗಳು ಅಕ್ಕಿ ಮೂಟೆ ತಂದು ದರ್ಶನ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

ದರ್ಶನ್ ಜನ್ಮ ದಿನಕ್ಕೆ ಅಕ್ಕಿ ಮೂಟೆ ತಂದು ಕೊಡ್ತಿರೋ ಫ್ಯಾನ್ಸ್: ಚಾಲೆಂಗ್​ಸ್ಟಾರ್ ದರ್ಶನ್ ಅವರ ರಾಜರಾಜೇಶ್ವರಿ ನಗರದ ಮನೆಗೆ ಮತ್ತೆ ಅಕ್ಕಿ ಮೂಟೆ ಬಂದು ಬೀಳುತ್ತಿವೆ. ದೂರ ದೂರದ ಅಭಿಮಾನಿಗಳು ಅಕ್ಕಿ ಮೂಟೆಗಳನ್ನ ತಂದು ಕೊಡ್ತಾ ಇದ್ದಾರೆ. ತಮಗೆ ಏನೂ ಇಷ್ಟವೋ ಅದನ್ನ ಕೂಡ ತಂದು ಕೊಡ್ತಿರೋದು ಎಂದಿನಂತೆ ಇದೀಗ ಮುಂದುವರೆದಿದೆ. ದರ್ಶನ್ ಜನ್ಮ ದಿನಕ್ಕೆ ಇನ್ನು 13 ದಿನ ಬಾಕಿ ಇದೆ. ಅದರ ಮುನ್ನಾ ದಿನಗಳಲ್ಲಿ ದರ್ಶನ್ ಫ್ಯಾನ್ಸ್ ಮನೆ ಬಳಿ ಬಂದು ಅಕ್ಕಿ-ಮೂಟೆ ಕೊಟ್ಟು ಹೋಗುತ್ತಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಾಯಕನನ್ನ ಕಣ್ಣಾರೆ ಕಂಡು ಕೈ ಕುಲುಕಿ ಹುಟ್ಟುಹಬ್ಬದ ಶುಭಾಷಯಗಳನ್ನ ಈಗಲೇ ತಿಳಿಸುತ್ತಿದ್ದಾರೆ.

ದರ್ಶನ್ ಹೊಸ ಸಿನಿಮಾ ರಿಲೀಸ್​ ಸಾಧ್ಯತೆ: ಕಾಟೇರ ಆದ್ಮೇಲೆ ದರ್ಶನ್ ಡೆವಿನ್ ಸಿನಿಮಾ ಮಾಡುತ್ತಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗಾಗಲೇ ಶುರು ಆಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇದರ ಶೂಟಿಂಗ್ ನಡೆಯುತ್ತಿದೆ. Vaishno ಸ್ಟುಡಿಯೊಸ್ ಬ್ಯಾನರ್ ಅಡಿಯಲ್ಲಿ, ಮಿಲನ ಪ್ರಕಾಶ್ ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ #D57 "ಡೆವಿಲ್" ಚಿತ್ರದ ಫಸ್ಟ್ ಲುಕ್ ಫೆಬ್ರವರಿ 16 ಡಿ ಬಾಸ್ ರವರ ಹುಟ್ಟು ಹಬ್ಬದಂದು ಅನಾವರಣಗೊಳ್ಳಲಿದೆ. ಡಿ ಬಾಸ್ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗೇರಿಸಲಿದೆ ಎನ್ನಲಾಗಿದೆ.

ದರ್ಶನ್ ಜನ್ಮ ದಿನದಂದು ಆರ್.ಆರ್.ನಗರದ ದರ್ಶನ್ ಮನೆ ಸುತ್ತ-ಮುತ್ತ ಅಭಿಮಾನಿಗಳ ದಂಡು ಇರುತ್ತದೆ. ರಾಜ್ಯಾದ್ಯಂತ ಒಂದು ರೀತಿ ಹಬ್ಬದ ವಾತಾವರಣವೂ ಇರುತ್ತದೆ. ಈ ಮೂಲಕ ಪ್ರತಿ ವರ್ಷ ಅಭಿಮಾನಿಗಳ ದರ್ಶನ್ ಹುಟ್ಟುಹಬ್ಬವನ್ನ ಹಬ್ಬದಂತೇನೆ ಆಚರಿಸಿಕೊಂಡು ಬಂದಿದ್ದಾರೆ ಅಂತಲೇ ಹೇಳಬಹುದು.

ನಟ ಯಶ್‌ ಜನ್ಮದಿನದ ಹಿಂದಿನ ದಿನದ ರಾತ್ರಿ ಬ್ಯಾನರ್ ಕಟ್ಟಲು ಹೋಗಿ ಮೂವರು ಫ್ಯಾನ್ಸ್ ಸಾವನ್ನಪ್ಪಿದ್ದರು. ಅಭಿಮಾನಿಗಳ ಸಾವಿಗೆ ಯಶ್ ತಲಾ 5 ಲಕ್ಷ ರೂಪಾಯಿ ಪರಿಹಾರ‌ ನೀಡಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ದರ್ಶನ್ ತಮ್ಮ ಮನೆ ಮುಂದಿನ ಬೋರ್ಡ್‌ ನಲ್ಲಿ ಬ್ಯಾನರ್‌, ಫ್ಲೆಕ್ಸ್‌ ಬೇಡವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net