ರಾಗಿಣಿ ಇಲ್ದೇ 'ಗಾಂಧಿಗಿರಿ' ಮುಂದುವರಿಸೋದು ಹೇಗೆ?!

gandhigiri
Published on

ಬೆಂಗಳೂರು: ಡ್ರಗ್ಸ್ ವಿಷಯದಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಮುಂದೇನಾಗಬಹುದು, ಯಾವ ತರಹದ ತಿರುವು ಪಡೆಯಬಹುದು ಎಂಬ ಕುತೂಹಲ ಮತ್ತು ಪ್ರಶ್ನೆ ಎಲ್ಲರಲ್ಲೂ ಇದೆ. ಹೀಗಿರುವಾಗಲೇ, ‘ಗಾಂಧಿಗಿರಿ’ ಚಿತ್ರತಂಡದವರು ನಮ್ಮ ಕಥೆ ಏನು ಎಂದು ಕಂಗಾಲಾಗಿದ್ದಾರೆ.

ರಾಗಿಣಿ ಬಂಧನಕ್ಕೂ, ‘ಗಾಂಧಿಗಿರಿ’ ಚಿತ್ರಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ‘ಜೋಗಿ’ ಪ್ರೇಮ್ ಅಭಿನಯದ ಈ ಚಿತ್ರಕ್ಕೆ ರಾಗಿಣಿ ನಾಯಕಿ. ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಚಿತ್ರ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ಕುಂಟುತ್ತ್ತ ಸಾಗಿತ್ತು. ಈಗಾಗಲೇ ಶೇ. 80ರಷ್ಟು ಚಿತ್ರೀಕರಣ ಮುಗಿದಿರುವ ಈ ಚಿತ್ರಕ್ಕೆ, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಬೇಕಿತ್ತಂತೆ.

ಅದರಲ್ಲೂ ಸೆಪ್ಟೆಂಬರ್ 14ರಿಂದ ರಾಗಿಣಿ ತಮ್ಮ ಡೇಟ್ಸ್ ಕೊಟ್ಟಿದ್ದರಂತೆ. ಇನ್ನೇನು ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವರ ಬಂಧನವಾಗಿದೆ. ಇದರಿಂದ ಚಿತ್ರೀಕರಣ ಮತ್ತೆ ಸ್ಥಗಿತವಾಗಿದೆ. ಅಷ್ಟೇ ಅಲ್ಲ, ಇದೆಲ್ಲದರಿಂದ ಚಿತ್ರದ ಭವಿಷ್ಯವೇನು ಎಂದು ಚಿತ್ರತಂಡ ಕಂಗಾಲಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ರಘು ಹಾಸನ್, ‘ಸೆಪ್ಟೆಂಬರ್ 14ರಿಂದ ಚಿತ್ರೀಕರಣಕ್ಕೆ ಬರುವುದಾಗಿ ರಾಗಿಣಿ ಹೇಳಿದ್ದರು. ಅದಾಗಿ ಮೂರ್ನಾಲ್ಕು ದಿನಗಳಿಗೆ ಅವರ ಅರೆಸ್ಟ್ ಆಯಿತು. ಅವರಿಲ್ಲದೆ ಚಿತ್ರೀಕರಣ ಮುಂದುವರಿಸುವಂತಿಲ್ಲ. ಏಕೆಂದರೆ, ಉಳಿದಿರುವ ಪ್ರತಿ ದೃಶ್ಯದಲ್ಲೂ ಅವರಿರಬೇಕು. ಜತೆಗೆ ಎರಡು ಹಾಡುಗಳಿವೆ. ಅವರಿಲ್ಲದಿದ್ದರೆ, ಚಿತ್ರದ ಓಟಕ್ಕೆ ಸಮಸ್ಯೆ ಆಗುತ್ತದೆ. ಈ ವಿಷಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರ ಹತ್ತಿರವೂ ಮಾತನಾಡಿದ್ದೇವೆ. ಆದರೆ, ಅವರೂ ಸದ್ಯಕ್ಕೆ ಏನೂ ಮಾಡುವಂತಿಲ್ಲ’ ಎಂದು ಹೇಳುತ್ತಾರೆ.

‘ಗಾಂಧಿಗಿರಿ’ ಚಿತ್ರದಲ್ಲಿ ಪ್ರೇಮ್ ರಾಗಿಣಿ ಅಲ್ಲದೆ ಅರುಂಧತಿ ನಾಗ್, ರಂಗಾಯಣ ರಘು, ಜೆ.ಡಿ. ಚಕ್ರವರ್ತಿ ಸೇರಿದಂತೆ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net