ಚಂದನವನ ಸೆಂಚುರಿ; 100ನೇ ಚಿತ್ರ ಇಂದು ರಿಲೀಸ್

Cinivani lead
Published on
ಕಳೆದ ಕೆಲವು ವರ್ಷಗಳಿಂದ ವರ್ಷಂಪ್ರತಿ 200 ಚಿತ್ರಗಳು ಬಿಡುಗಡೆಯಾಗುತ್ತಿದ್ದುದು ವಾಡಿಕೆ. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಕಳೆದ ವರ್ಷ ಆ ಅವಕಾಶ ಮಿಸ್ ಆಗಿತ್ತು. 2020ರಲ್ಲಿ 80 ಪ್ಲಸ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಅದಕ್ಕಿಂತ ಜಾಸ್ತಿ ಚಿತ್ರಗಳು ಬಿಡುಗಡೆಯಾಗಲಿವೆ, ಸೆಂಚುರಿ ಬಾರಿಸಿದರೂ ಆಶ್ಚರ್ಯವಿಲ್ಲ ಎಂಬ ಸೂಚನೆ ಒಂದು ತಿಂಗಳ ಮುಂಚೆಯೇ ಸೂಚನೆ ಸಿಕ್ಕಿತ್ತು. ಅದು ನಿಜವಾಗಿದ್ದು, ಇಂದು (ಡಿ.17) ಈ ವರ್ಷದ ನೂರನೆಯ ಚಿತ್ರ ಬಿಡುಗಡೆಯಾಗುತ್ತಿದೆ.

| ಚೇತನ್ ನಾಡಿಗೇರ್

ವರ್ಷ ಮುಗಿಯುವುದಕ್ಕೆ ಇನ್ನೂ ಎರಡು ವಾರಗಳಿವೆ. ಹೀಗಿರುವಾಗಲೇ, ಕನ್ನಡ ಚಿತ್ರರಂಗ ಇಂದು ಶತಕ ಕಾಣುತ್ತಿದೆ. ಇದುವರೆಗೂ 98 ಸಿನಿಮಾಗಳು ಬಿಡುಗಡೆಯಾಗಿದ್ದು, ಈ ವಾರ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಮತ್ತು ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರಗಳು ಬಿಡುಗಡೆ ಆಗಲಿದ್ದು, ಈ ಮೂಲಕ 100 ಚಿತ್ರಗಳಾಗಲಿವೆ. ‘ರಾಜತಂತ್ರ’ ಚಿತ್ರದ ಮೂಲಕ ಈ ವರ್ಷ ಪ್ರಾರಂಭವಾಯಿತು. ಮೊದಲ ಒಂದು ತಿಂಗಳು ಹೆಚ್ಚು ದೊಡ್ಡ ಚಿತ್ರಗಳು ಬಿಡುಗಡೆಯಾಗಲಿಲ್ಲ. ಕಾರಣ, ಕರೊನಾ ಎರಡನೆಯ ಅಲೆ ಮತ್ತು ಇನ್ನೊಂದು ಲಾಕ್​ಡೌನ್ ಭಯ. ಹಾಗಾಗಿ, ಚಿಕ್ಕ ಮತ್ತು ಮೀಡಿಯಂ ಬಜೆಟ್​ನ ಚಿತ್ರಗಳೇ ಜನವರಿಯಲ್ಲಿ ತೆರೆಕಂಡವು. ಫೆಬ್ರವರಿ ಹೊತ್ತಿಗೆ ಯಾವಾಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ ಎಂದೆನಿಸಿತೋ, ಆಗ ದೊಡ್ಡ ಚಿತ್ರಗಳು ಬಂದವು. ‘ಪೊಗರು’, ‘ಯುವರತ್ನ’ ಸೇರಿ ನಾಲ್ಕೈದು ದೊಡ್ಡ ಚಿತ್ರಗಳು ಬಂದು, ಪರಿಸ್ಥಿತಿ ಸರಿಹೋಯಿತು ಎನ್ನುವಷ್ಟರಲ್ಲಿ ಮತ್ತೆ ಏಪ್ರಿಲ್​ನಲ್ಲಿ ಇನ್ನೊಂದು ಲಾಕ್​ಡೌನ್ ಘೋಷಣೆಯಾಯಿತು. ಅಲ್ಲಿಂದ ಮೂರೂವರೆ ತಿಂಗಳುಗಳ ಕಾಲ ಯಾವುದೇ ಹೊಸ ಚಿತ್ರ ಪ್ರಾರಂಭವಾಗಲಿಲ್ಲ. ಜುಲೈನಲ್ಲಿ ಪುನಃ ಚಿತ್ರ ಪ್ರದರ್ಶನ ಪ್ರಾರಂಭವಾದರೂ, ಹೊಸ ಚಿತ್ರಗಳ ಬಿಡುಗಡೆ ಶುರುವಾಗಿದ್ದು ಆಗಸ್ಟ್ 6ರಿಂದ. ಏ. 16ರವರೆಗೂ 40 ಪ್ಲಸ್ ಹೊಸ ಚಿತ್ರಗಳು ಬಿಡುಗಡೆಯಾದರೆ, ಆ.4ರಿಂದ 50 ಪ್ಲಸ್ ಚಿತ್ರಗಳು ಸಿಗುತ್ತವೆ. ಈ ಪೈಕಿ ಡಿ. 10ರಂದು ಆರು ಚಿತ್ರಗಳು ಬಿಡುಗಡೆಯಾಗಿದ್ದು ಈ ವರ್ಷದ ದಾಖಲೆ.

ವರ್ಷದ ಕೊನೆಗೆ 110 ಸಾಧ್ಯತೆ: ಈ 100ರ ಪೈಕಿ ಕನ್ನಡದ ಸ್ವಂತ ಚಿತ್ರಗಳನ್ನು ಮಾತ್ರ ಸೇರಿಸಲಾಗಿದೆ. ತುಳು ಚಿತ್ರಗಳನ್ನು ಮತ್ತು ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳನ್ನು ಸೇರಿಸಿದರೆ ಈ ಸಂಖ್ಯೆ ಜಾಸ್ತಿಯಾಗುತ್ತದೆ. ವರ್ಷ ಮುಗಿಯುವುದಕ್ಕೆ ಇನ್ನೂ ಎರಡು ವಾರಗಳಿದ್ದು, ಡಿ. 24ರಂದು ಎರಡು ಮತ್ತು ಡಿ. 31ರಂದು ನಾಲ್ಕು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಅವೆಲ್ಲ ಸೇರಿಸಿದರೆ ಈ ವರ್ಷದ ಲೆಕ್ಕ 110ರಷ್ಟಾಗಬಹುದು.

ಒಟಿಟಿಯಲ್ಲಿ ನಾಲ್ಕು ಚಿತ್ರಗಳು: ಇಷ್ಟು ವರ್ಷಗಳಲ್ಲಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಮಾತ್ರ ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಎರಡು ವರ್ಷಗಳಿಂದ ಒಟಿಟಿ ಸಹ ಸೇರ್ಪಡೆಯಾಗಿದ್ದು, ಅಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಈ ವರ್ಷ ಒಟಿಟಿಯಲ್ಲಿ ನೇರವಾಗಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿವೆ. ನಾಗಭೂಷಣ್ ಅಭಿನಯದ ‘ಇಕ್ಕಟ್’, ಧನಂಜಯ್ ಅಭಿನಯದ ‘ಬಡವ ರಾಸ್ಕಲ್’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘1980’ ಮತ್ತು ರವಿಚಂದ್ರನ್ ನಟನೆಯ ‘ಕನ್ನಡಿಗ’ ಚಿತ್ರಗಳು ಇವೆ. ಈ ಪೈಕಿ ಮೊದಲರೆಡು ಚಿತ್ರಗಳು ಅಮೆಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾದರೆ, ಒಂದು ನಮ್ಮಫ್ಲಿಕ್ಸ್​ನಲ್ಲಿ, ಇನ್ನೊಂದು ಜೀ5ನಲ್ಲಿ ಬಿಡುಗಡೆಯಾಗಿದೆ.

ಹೊಸಬರ ಪಾಲು ಹೆಚ್ಚು: ಈ ವರ್ಷ ಬಿಡುಗಡೆಯಾದ ಇಷ್ಟು ಚಿತ್ರಗಳ ಪೈಕಿ ಹೊಸಬರ ಪಾಲು ದೊಡ್ಡದು. ಉಪೇಂದ್ರ, ರಕ್ಷಿತ್ ಶೆಟ್ಟಿ, ಯಶ್, ಶರಣ್ ಹೊರತುಪಡಿಸಿ ಮಿಕ್ಕಂತೆ ಬಹುತೇಕ ಸ್ಟಾರ್ ನಟರ ಒಂದೊಂದು ಚಿತ್ರ ತೆರೆಕಂಡಿದೆ. ಶಿವರಾಜ ಕುಮಾರ್, ಪುನೀತ್, ಸುದೀಪ್, ಶ್ರೀಮುರಳಿ, ಗಣೇಶ್, ‘ದುನಿಯಾ’ ವಿಜಯ್, ಧ್ರುವ ಸರ್ಜಾ, ರಮೇಶ್ ಅರವಿಂದ್, ಪ್ರೇಮ್ ನಿಖಿಲ್ ಮುಂತಾದ ಸ್ಟಾರ್ ನಟರ ಒಂದು ಚಿತ್ರಗಳು ಬಿಡುಗಡೆಯಾಗಿವೆ. ಬಿಡುಗಡೆಯಾಗಬೇಕಿರುವ ಚಿತ್ರಗಳನ್ನೂ ಸೇರಿಸಿದರೆ, ರವಿಚಂದ್ರನ್, ಪ್ರಜ್ವಲ್, ಯೋಗಿ ಅಭಿನಯದ ಎರಡೆರಡು ಚಿತ್ರಗಳು ಸೇರಿದಂತಾಗುತ್ತವೆ.

ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ: ಎಲ್ಲ ಅಂದು ಕೊಂಡಂತೆ ಆಗಿದ್ದರೆ, ಈ ವರ್ಷ ಇನ್ನಷ್ಟು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಯಾಗಬೇಕಿದ್ದವು. ಪ್ರಮುಖವಾಗಿ, ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರವು ಜುಲೈ 16ಕ್ಕೆ ನಿಗದಿಯಾಗಿತ್ತು. ಆ. 19ಕ್ಕೆ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’, ಡಿ. 10ಕ್ಕೆ ಶರಣ್ ಅಭಿನಯದ ‘ಅವತಾರ್ ಪುರುಷ’ ಮತ್ತು ಡಿ. 31ಕ್ಕೆ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್ ಭಯದಿಂದ ಈ ಚಿತ್ರಗಳ ಬಿಡುಗಡೆಯನ್ನು 2022ಕ್ಕೆ ಮುಂದೂಡಲಾಯಿತು. ಈ ಪೈಕಿ, ‘ವಿಕ್ರಾಂತ್ ರೋಣ’ ಚಿತ್ರವು ಫೆ. 24ರಂದು ಬಿಡುಗಡೆಯಾದರೆ, ‘ಕೆಜಿಎಫ್2’ ಚಿತ್ರವು ಏ. 14ರಂದು ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net