

ಬೆಂಗಳೂರು: ಕಳೆದ ವರ್ಷ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಗೌಡ, ಆ ನಂತರ ಸದ್ದಿಲ್ಲದೆ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕವಿತಾ ಅಭಿನಯದ ಎರಡು ಚಿತ್ರಗಳು ಒಂದೇ ತಿಂಗಳ ಅಂತರದಲ್ಲಿ ಬಿಡುಗಡೆಯಾಗ ಬೇಕಿದ್ದವು. ಆದರೆ, ಲಾಕ್ಡೌನ್ನಿಂದಾಗಿ ಒಂದು ಅಪರೂಪದ ಅವಕಾಶವನ್ನು ಕವಿತಾ ಮಿಸ್ ಮಾಡಿಕೊಂಡಿದ್ದಾರೆ.
ದಿಗಂತ್ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’ ಮತ್ತು ಸುಮಂತ್ ಶೈಲೇಂದ್ರ ಅಭಿನಯದ ‘ಗೋವಿಂದ ಗೋವಿಂದ’ ಚಿತ್ರಗಳಲ್ಲಿ ಕವಿತಾ ನಟಿಸಿದ್ದು, ಎರಡೂ ಚಿತ್ರಗಳು ಒಂದೇ ತಿಂಗಳ ಅಂತರದಲ್ಲಿ ಬಿಡುಗಡೆಯಾಗಬೇಕಿದ್ದವು. ಕವಿತಾ ಸಹ ಮಾನಸಿಕವಾಗಿ ಸಿದ್ಧರಾಗಿ, ಒಂದೇ ತಿಂಗಳಲ್ಲಿ ಎರಡು ಬಾರಿ ಚಿತ್ರಮಂದಿರಕ್ಕೆ ಆಗಮಿಸುವ ಖುಷಿಯಲ್ಲಿದ್ದರು. ಆದರೆ, ಕರೊನಾ ಅದನ್ನು ಕಿತ್ತುಕೊಂಡಿದೆ. ಈ ಕುರಿತು ಮಾತನಾಡುವ ಅವರು, ‘ಎರಡೂ ಸಿನಿಮಾಗಳ ಶೂಟಿಂಗ್ ಮುಗಿದಿದೆ. ಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟು, ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ನಲ್ಲಿದ್ದೆವು. ಆದರೆ, ಅಂದುಕೊಂಡಿದ್ದು ಈಡೇರಲಿಲ್ಲ. ಸದ್ಯಕ್ಕೆ ಲಾಕ್ಡೌನ್ನಿಂದಾಗಿ ಮನೆಯಲ್ಲಿಯೇ ಕಾಲಕಳೆಯುತ್ತಿದ್ದೇವೆ. ಎಲ್ಲವೂ ತಹಬದಿಗೆ ಬಂದ ಬಳಿಕ ಯಾವ ಸಿನಿಮಾ ಮೊದಲು ಬರಲಿದೆ ಎಂಬುದನ್ನು ನೋಡಬೇಕು’ ಎನ್ನುವ ಕವಿತಾ, ಶೀರ್ಷಿಕೆ ಅಂತಿಮವಾಗದ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಅರ್ಧ ಶೂಟಿಂಗ್ ಸಹ ಮುಗಿದಿದೆ. ಈಗ ಕರೊನಾ ಹಿನ್ನೆಲೆಯಲ್ಲಿ ಅದರ ಉಳಿದ ಕೆಲಸಗಳು ಮುಂದಕ್ಕೆ ಹೋಗಿವೆ.
‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರವನ್ನು ನಾಗರಾಜ್ ಬೇತೂರ್ ನಿರ್ದೇಶನ ಮಾಡುತ್ತಿದ್ದರೆ, ‘ಗೋವಿಂದ ಗೋವಿಂದ’ ಚಿತ್ರಕ್ಕೆ ತಿಲಕ್ ನಿರ್ದೇಶನವಿದೆ. ಭಾವನಾ ಮೆನನ್ ಸಹ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.