

ಹೇಳಿಕೇಳಿ ಇದು ‘ಟ್ವೆಂಟಿ ಟ್ವೆಂಟಿ’. ಸದ್ಯದ ಲಕ್ಷಣಗಳನ್ನು ಗಮನಿಸಿದರೆ 2020ರಲ್ಲಿ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಬೌಂಡರಿ-ಸಿಕ್ಸರ್ಗಳ ಸಾಧ್ಯತೆ ಗೋಚರಿಸುತ್ತಿದೆ. ಈ ಸಲ ಎಲ್ಲ ಸ್ಟಾರ್ಗಳ ಸಿನಿಮಾ ತೆರೆ ಕಾಣಲಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರಗಳ ಸಂಖ್ಯೆ ಲೆಕ್ಕದಲ್ಲೂ ಹ್ಯಾಟ್ರಿಕ್ ಲಕ್ಷಣ ಕಾಣುತ್ತಿದೆ. ಕಳೆದ ಸಲ ಯಶ್ ಎಂಟ್ರಿ ಆಗಲಿಲ್ಲ. ಆದರೆ ಈ ಸಲ ‘ಕೆಜಿಎಫ್: ಚಾಪ್ಟರ್ 2’ ಈಗಾಗಲೇ ಸದ್ದು ಮಾಡುತ್ತಿದ್ದು, ಅದರ ಶೂಟಿಂಗ್ ಕೂಡ ಬಹುತೇಕ ಮುಗಿದಿರುವುದರಿಂದ ಅವರು ಇದೇ ವರ್ಷ ತೆರೆ ಮೇಲೆ ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಾಗಿ 3 ವರ್ಷ ತೆಗೆದುಕೊಂಡರೂ, ರಕ್ಷಿತ್ ತಮ್ಮ ಮುಂದಿನ ಚಿತ್ರಕ್ಕೆ ಅಷ್ಟೊಂದು ದೀರ್ಘಾವಧಿ ತೆಗೆದುಕೊಳ್ಳದಿರುವ ಸೂಚನೆ ನೀಡಿರುವುದರಿಂದ ಅವರೂ ಈ ವರ್ಷ ಮತ್ತೊಂದು ಅದ್ದೂರಿ ಸಿನಿಮಾ ಮೂಲಕ ಹ್ಯಾಟ್ರಿಕ್ ಬಾರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದ ಉಪೇಂದ್ರ, ಈ ಸಲ ಆರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ. ಪುನೀತ್ ರಾಜ್ಕುಮಾರ್, ದರ್ಶನ್, ಸುದೀಪ್ ಮೂವರೂ ಬಿಗ್ಬಜೆಟ್ನ ತಲಾ ಒಂದೊಂದು ಬಹುನಿರೀಕ್ಷೆಯ ಅದ್ದೂರಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಅವೆಲ್ಲವೂ ಇದೇ ವರ್ಷದಲ್ಲಿ ಬಿಡುಗಡೆ ಆಗಲಿವೆ. ಇನ್ನೊಂದೆಡೆ ಯೋಗರಾಜ್ ಭಟ್, ದುನಿಯಾ ಸೂರಿ ಮುಂತಾದ ನಿರ್ದೇಶಕರ ಜತೆಗೆ ಪ್ರತಿಭಾನ್ವಿತ ಉದಯೋನ್ಮುಖ ಕಿರಿಯರ ನಿರ್ದೇಶನದಲ್ಲಿಯೂ ಹಲವಾರು ಸಿನಿಮಾಗಳು ಮೂಡಿ ಬರಲಿರುವುದರಿಂದ ಎಂದಿನಂತೆ ಮತ್ತಷ್ಟು ವೆರೈಟಿಯ ಚಿತ್ರಗಳು ಈ ಸಲವೂ ಬಿಡುಗಡೆ ಆಗಲಿರುವುದಂತೂ ಖಚಿತ.
ಕೆಜಿಎಫ್: ಚಾಪ್ಟರ್ 2
2019ರಲ್ಲಿ ತಮ್ಮ ಯಾವುದೇ ಸಿನಿಮಾ ತೆರೆ ಕಾಣದಿದ್ದರೂ 2018ರ ಡಿಸೆಂಬರ್ನಲ್ಲಿ ತೆರೆ ಕಂಡಿದ್ದ ‘ಕೆಜಿಎಫ್: ಚಾಪ್ಟರ್1’ರ ಯಶಸ್ಸಿನಿಂದ ಕಳೆದ ವರ್ಷವಿಡೀ ಸುದ್ದಿಯಲ್ಲಿದ್ದ ‘ರಾಕಿಂಗ್ ಸ್ಟಾರ್’ ಯಶ್, ಈ ಸಲ ‘ಕೆಜಿಎಫ್: ಚಾಪ್ಟರ್ 2’ನಿಂದಾಗಿ ಈಗಾಗಲೇ ಭಾರಿ ಸುದ್ದಿಯಲ್ಲಿದ್ದಾರೆ. ಮಾತ್ರವಲ್ಲ ಇತ್ತೀಚೆಗಷ್ಟೇ ಚಿತ್ರದ ಫಸ್ಟ್ಲುಕ್ ಬಿಡುಗಡೆ ಆಗಿದ್ದು, ನರಾಚಿ ಸಾಮ್ರಾಜ್ಯ ಕಟ್ಟುವ ಯತ್ನದಲ್ಲಿ ಕಾಣಿಸಿಕೊಂಡಿದ್ದಾರೆ. ‘..ಚಾಪ್ಟರ್ 2’ ಶೂಟಿಂಗ್ ಈಗಾಗಲೇ ಬಹುತೇಕ ಮುಗಿದಿದ್ದು, ಇದೇ ವರ್ಷ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಒಂದು ವೇಳೆ ಬಿಡುಗಡೆ ವಿಳಂಬವಾದರೂ ಟೀಸರ್-ಟ್ರೇಲರ್-ಆಡಿಯೋ ಬಿಡುಗಡೆ ಸೇರಿ ಚಿತ್ರಕ್ಕೆ ಸಂಬಂಧಿತ ಹಲವು ವಿಚಾರಗಳಿಂದಾಗಿ 2020ರಲ್ಲಿ ಯಶ್ ಸದ್ದು ಮಾಡುವುದಂತೂ ಖಚಿತ.
ಯುವರತ್ನ, ಜೇಮ್ಸ್
ಕಳೆದ ವರ್ಷ ‘ನಟಸಾರ್ವಭೌಮ’ ಆಗಿ ತೆರೆ ಮೇಲೆ ಬಂದಿದ್ದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈ ಸಲ ‘ಯುವರತ್ನ’, ‘ಜೇಮ್ಸ್’ ಆಗಿಯೂ ಪರದೆ ಮೇಲೆ ಮಿಂಚಲಿದ್ದಾರೆ. ಈ ಹಿಂದೆ ‘ರಾಜಕುಮಾರ’ ನಿರ್ದೇಶಿಸಿದ್ದ ಸಂತೋಷ್ ಆನಂದ್ರಾಮ್ ಅವರೇ ‘ಯುವರತ್ನ’ಕ್ಕೂ ನಿರ್ದೇಶನ ಮಾಡಿರುವುದರಿಂದ ಹಾಗೂ ಪುನೀತ್ ಅಭಿನಯದ ಯಶಸ್ವಿ ಸಿನಿಮಾಗಳಾದ ‘ನಿನ್ನಿಂದಲೇ’, ‘ರಾಜಕುಮಾರ’ ಚಿತ್ರಗಳನ್ನು ನಿರ್ವಿುಸಿದ್ದ ‘ಹೊಂಬಾಳೆ ಫಿಲಮ್್ಸ’ ಸಂಸ್ಥೆಯೇ ಇದನ್ನು ನಿರ್ವಿುಸಿರುವುದರಿಂದ ಪುನೀತ್ ಅದ್ದೂರಿ ಆಗಿಯೇ ಹೊರಹೊಮ್ಮುವ ಸಾಧ್ಯತೆ ಈ ವರ್ಷ ಅಧಿಕವಾಗಿದೆ. ಮತ್ತೊಂದೆಡೆ ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಪುನೀತ್ ನಿರ್ವಣಕ್ಕೂ ಇಳಿದಿದ್ದು, ಅವರ ಸಂಸ್ಥೆ ಮೂಲಕ ‘ಮಾಯಾಬಜಾರ್’, ‘ಲಾ’ ಹಾಗೂ ಇನ್ನೂ ಹೆಸರಿಡದ ಇನ್ನೊಂದು ಸಿನಿಮಾ ಕೂಡ ಮೂಡಿ ಬರಲಿದೆ. ಆ ಮೂಲಕ ಪುನೀತ್ ಸದ್ದು ಈ ಸಲ ಹೆಚ್ಜು ಪವರ್ಫುಲ್ ಆಗುವ ಸಾಧ್ಯತೆಗಳಿವೆ.
100, ಶಿವಾಜಿ ಸುರತ್ಕಲ್, ಬಟರ್ ಫ್ಲೈ, ಭೈರಾದೇವಿ
ಕಳೆದ ವರ್ಷ ರಮೇಶ್ ಅರವಿಂದ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈ ಸಲ ಅವರ ಅಭಿನಯದ ಚಿತ್ರವಷ್ಟೇ ಅಲ್ಲದೆ ಅವರ ನಿರ್ದೇಶನದ ಚಿತ್ರಗಳೂ ಸದ್ದು ಮಾಡಲಿವೆ. ‘100’ ಎಂಬ ಶೀರ್ಷಿಕೆಯ ಸಿನಿಮಾ ರಮೇಶ್ ಅಭಿನಯ-ನಿರ್ದೇಶನದಲ್ಲಿ ಮೂಡಿ ಬರಲಿದ್ದು, ಶೂಟಿಂಗ್ ಮುಗಿದಿದೆ. ಮತ್ತೊಂದೆಡೆ ಹಿಂದಿಯ ‘ಕ್ವೀನ್’ ಚಿತ್ರ 4 ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು ಅದರ ಕನ್ನಡ (ಬಟರ್ ಫ್ಲೈ), ತಮಿಳು (ಪ್ಯಾರಿಸ್ ಪ್ಯಾರಿಸ್) ರಿಮೇಕ್ಗೆ ರಮೇಶ್ ನಿರ್ದೇಶನವಿದೆ. ಅಲ್ಲದೆ ‘ಶಿವಾಜಿ ಸುರತ್ಕಲ್’ ಎಂಬ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ, ‘ಭೈರಾದೇವಿ’ ಎಂಬ ಮತ್ತೊಂದು ಸಿನಿಮಾದಲ್ಲಿ ರಮೇಶ್ ಅಭಿನಯಿಸುತ್ತಿದ್ದು, ಅವೂ ಇದೇ ವರ್ಷ ತೆರೆಕಂಡರೆ ರಮೇಶ್ ಈ ಸಲ ಭರ್ಜರಿ ಸೌಂಡ್ ಮಾಡಿದಂತಾಗುತ್ತದೆ.
ಕಳೆದ ವರ್ಷ 7 ಚಿತ್ರಗಳಲ್ಲಿ ನಟಿಸಿದ್ದ ರಚಿತಾ ರಾಮ್ ಈ ಸಲವೂ ಅಷ್ಟೇ ಬೇಡಿಕೆಯಲ್ಲಿದ್ದಾರೆ. 100, ಡಾಲಿ, ಏಕಲವ್ಯು, ಏಪ್ರಿಲ್, ವೀರಂ, ರವಿ ಬೋಪಣ್ಣ ಚಿತ್ರಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಜತೆಗೆ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜತೆ ತೆಲುಗಿನ ‘ಸೂಪರ್ ಮಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇ ಚಿತ್ರ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎಂಬ ಹೆಸರಿನಲ್ಲಿ ಕನ್ನಡದಲ್ಲೂ ತೆರೆ ಕಾಣಲಿದೆ ಎನ್ನಲಾಗುತ್ತಿದೆ.
ದ್ರೋಣ, ಭಜರಂಗಿ 2
ಕಳೆದ ವರ್ಷ ‘ರುಸ್ತುಂ’, ‘ಕವಚ’, ‘ಆಯುಷ್ಮಾನ್ ಭವ’ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಶಿವರಾಜ್ ಕುಮಾರ್ ಈ ಸಲ ‘ದ್ರೋಣ’, ‘ಭಜರಂಗಿ 2’ ಚಿತ್ರದ ಮೂಲಕ ಮತ್ತೆ ನಿರೀಕ್ಷೆ ಮೂಡಿಸಿದ್ದಾರೆ. ಬಹುನಿರೀಕ್ಷೆಯ ಈ ಸಿನಿಮಾಗಳೆರಡೂ ಇದೇ ವರ್ಷ ತೆರೆ ಕಾಣುವ ಲಕ್ಷಣಗಳಿವೆ.
ಕಳೆದ ವರ್ಷ ‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದಲ್ಲಿ ತೆರೆ ಕಂಡಿದ್ದು ‘ಐ ಲವ್ ಯೂ’ ಮಾತ್ರ. ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಸಾಕಷ್ಟು ಸದ್ದು ಮಾಡಿದ್ದಷ್ಟೇ ಅಲ್ಲ, ಗಳಿಕೆಯಲ್ಲೂ ಸೈ ಎನಿಸಿಕೊಂಡಿತ್ತು. ಈ ವರ್ಷ ಇವರಿಬ್ಬರದೇ ಕಾಂಬಿನೇಷನ್ನಲ್ಲಿ ‘ಕಬ್ಜ’ ಸಿನಿಮಾ ಮೂಡಿ ಬರುತ್ತಿದೆ. ಏಳು ಭಾಷೆಗಳಲ್ಲಿ, ಬೇರೆ ಬೇರೆ ಭಾಷೆಗಳ ಘಟಾನುಘಟಿ ಕಲಾವಿದರೂ ವಿಲನ್ಗಳಾಗಿ ಅಬ್ಬರಿಸಲಿರುವ ಈ ಚಿತ್ರ ಇದೇ ವರ್ಷ ತೆರೆ ಕಾಣಲಿದೆ. ಜತೆಗೆ ಕನ್ನಡ-ತೆಲುಗು ಭಾಷೆಯ ‘ಹೋಮ್ ಮಿನಿಸ್ಟರ್’, ‘ಬುದ್ಧಿವಂತ’ ಚಿತ್ರದ ಸೀಕ್ವೆಲ್ ‘ಬುದ್ಧಿವಂತ 2’ ಚಿತ್ರಗಳೂ ಇದೇ ವರ್ಷ ರಿಲೀಸ್ ಆಗಲಿವೆ. ಮತ್ತೊಂದೆಡೆ ಶಶಾಂಕ್ ನಿರ್ದೇಶನ-ನಿರ್ವಣದ ಹಾಗೂ ನವನೀತ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಗಳಲ್ಲೂ ಉಪ್ಪಿ ಅಭಿನಯಿಸಲಿದ್ದಾರೆ. ರವಿಚಂದ್ರನ್-ಉಪೇಂದ್ರ ಅಭಿನಯದ ರವಿಚಂದ್ರ ಸಿನಿಮಾ ಇದೇ ವರ್ಷ ತೆರೆ ಕಂಡರೆ ಈ ವರ್ಷ ಉಪ್ಪಿಯ ಆರು ಚಿತ್ರ ಬಿಡುಗಡೆ ಆದಂತಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಉಪೇಂದ್ರ ಮತ್ತೆ ಯಾವಾಗ ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಸದ್ಯ ಒಪ್ಪಿರುವ ಚಿತ್ರಗಳ ಅಭಿನಯ ಮುಗಿದರೆ ಉಪ್ಪಿ ಸ್ವಲ್ಪ ಬಿಡುವಾಗುತ್ತಾರೆ. ಅಲ್ಲದೆ ಈ ವರ್ಷ ಚುನಾವಣೆ ಇರದ್ದರಿಂದ ಪ್ರಜಾಕೀಯದ ಕೆಲಸಕ್ಕೂ ಅಷ್ಟು ಒತ್ತಡ ಇರಲ್ಲ. ಹೀಗಾಗಿ ಉಪ್ಪಿ ಈ ಸಲ ಡೈರೆಕ್ಟರ್ ಕ್ಯಾಪ್ ತೊಟ್ಟರೂ ಅಚ್ಚರಿ ಏನಿಲ್ಲ.
ಕೋಟಿಗೊಬ್ಬ 3, ಫ್ಯಾಂಟಮ್ ಬಿಲ್ಲಾ ರಂಗ ಬಾಷಾ
‘ಕಿಚ್ಚ’ ಸುದೀಪ್ ಅಭಿನಯದ ‘ಕೋಟಿಗೊಬ್ಬ 2’ ಚಿತ್ರದ ಸೀಕ್ವೆಲ್ ‘ಕೋಟಿಗೊಬ್ಬ 3’ ಅದ್ದೂರಿಯಾಗಿ ಮೂಡಿಬರುತ್ತಿದ್ದು, ಶೂಟಿಂಗ್ ಮುಗಿಯುತ್ತ ಬಂದಿದೆ. ಇದೇ ವರ್ಷ ‘ಕೋಟಿಗೊಬ್ಬ 3’ ತೆರೆಗೆ ಅಪ್ಪಳಿಸಲಿದೆ. ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಬಾಷಾ’ಗೂ ಸುದೀಪ್ ನಾಯಕನಾಗಲಿದ್ದಾರೆ. ಆದರೆ ಅದಕ್ಕೂ ಮುನ್ನ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್ನಲ್ಲಿ ಸುದೀಪ್ ನಾಯಕನಾಗಿ ಮಿಂಚಲಿದ್ದು, ಅದು ಇದೇ ವರ್ಷ ಸೆಟ್ಟೇರಲಿದೆ. ವಿಶೇಷವೆಂದರೆ ‘ಮಾಣಿಕ್ಯ’ ಚಿತ್ರದ ನಂತರ ಅಂದರೆ ಐದು ವರ್ಷಗಳ ಬಳಿಕ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಿದ್ದು, ಸ್ವಮೇಕ್ ಚಿತ್ರವೊಂದಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಇದು ಕೂಡ ಇದೇ ವರ್ಷ ಶುರುವಾದರೆ ಕಿಚ್ಚನ ಕೆಚ್ಚು ಈ ವರ್ಷ ಮತ್ತಷ್ಟು ಹೆಚ್ಚಾಗಲಿದೆ.
ರಾಬರ್ಟ್, ರಾಜವೀರ ಮದಕರಿ ನಾಯಕ
ಕಳೆದ ವರ್ಷ ‘ಯಜಮಾನ’, ‘ಕುರುಕ್ಷೇತ್ರ’, ‘ಒಡೆಯ’ ಚಿತ್ರಗಳ ಮೂಲಕ ಸದ್ದು ಮಾಡಿದ್ದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ಈಗಾಗಲೇ ‘ರಾಬರ್ಟ್’ ಸಿನಿಮಾ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. 2017ರಲ್ಲಿ ತರುಣ್ ಸುಧೀರ್ ನಿರ್ದೇಶನದಲ್ಲಿ ತೆರೆಗೆ ಬಂದಿದ್ದ ‘ಚೌಕ’ ಚಿತ್ರದಲ್ಲಿ ದರ್ಶನ್ ‘ರಾಬರ್ಟ್’ ಎಂಬ ಪಾತ್ರದ ಮೂಲಕ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುತಾರಾಗಣದ ಆ ಸಿನಿಮಾ ಸಾಕಷ್ಟು ಯಶಸ್ಸು ಕಂಡಿತ್ತು. ಇದೀಗ ದರ್ಶನ್-ತರುಣ್ ಕಾಂಬಿನೇಷನ್ನಲ್ಲೇ ‘ರಾಬರ್ಟ್’ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ಭರ್ಜರಿ ತಾರಾಗಣವೇ ಇದೆ. ನಾಯಕಿಯಾಗಿ ಆಶಾ ಭಟ್ ನಟಿಸುತ್ತಿರುವುದಲ್ಲದೇ ಸೋನಲ್ ಮೊಂತೆರೊ ಹಾಗೂ ತೇಜಸ್ವಿನಿ ಪ್ರಕಾಶ್ ಕೂಡ ತಂಡಕ್ಕೆ ಸೇರ್ಪಡೆ ಆಗಿದ್ದು, ಚಿತ್ರದ ಗ್ಲಾಮರ್ ಹೆಚ್ಚಾಗಿದೆ. ಕಳೆದ ವರ್ಷ ಪೌರಾಣಿಕ ಕಥಾವಸ್ತುವಿನ ‘ಮುನಿರತ್ನ ಕುರುಕ್ಷೇತ್ರ’ ಮೂಲಕ ಅಬ್ಬರಿಸಿದ್ದ ದರ್ಶನ್, ಈ ಸಲ ‘ರಾಜವೀರ ಮದಕರಿ ನಾಯಕ’ ಎಂಬ ಐತಿಹಾಸಿಕ ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಲಿರವುದರಿಂದ ಅವರೆಡೆಗೆ ಸ್ಯಾಂಡಲ್ವುಡ್ ಕುತೂಹಲ ಹೆಚ್ಚಾಗಿದೆ.
| ರವಿಕಾಂತ್ ಕುಂದಾಪುರ