

ಮೈಸೂರು: ಹಾಸ್ಯನಟ ಚಿಕ್ಕಣ್ಣ ಸಕಲಕಲಾವಲ್ಲಭ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಾಣಿ ಪ್ರಿಯರೂ ಹೌದು. ಮೈಸೂರಿನ ಫಾರ್ಮ್ ಹೌಸ್ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡು, ಕೃಷಿಯಲ್ಲಿಯೂ ನಿರತರಾಗಿದ್ದಾರೆ. ಇದೀಗ ಇದೇ ಚಿಕ್ಕಣ್ಣ ಗಾರೆ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ!
ಹಾಗೆಂದ ಮಾತ್ರಕ್ಕೆ ಸಿನಿಮಾ ಬಿಟ್ಟು ಈ ಕೆಲಸಕ್ಕೆ ಇಳಿದರಾ ಎಂದಲ್ಲ. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಖಾಲಿ ಕೂರುವ ಬದಲು, ಫಾರ್ಮ್ ಹೌಸ್ನಲ್ಲಿನ ಬಾಕಿ ಉಳಿದ ಗಾರೆ ಕೆಲಸವನ್ನೂ ತಾವೇ ಮಾಡುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಕೆಲಸವನ್ನು ಸ್ವತಃ ತಾವೇ ಕೈಯಲ್ಲಿ ಕರಣಿ ಹಿಡಿದು, ಸಿಮೆಂಟ್ ಮೆತ್ತಿತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿಕ್ಕಣ್ಣನ ಈ ಕೆಲಸಕ್ಕೂ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಣ್ಣ ಅವರ ಬಗ್ಗೆ ಇನ್ನೊಂದು ಮುಖ್ಯವಾದ ವಿಚಾರವನ್ನು ಇಲ್ಲಿ ಹೇಳಲೇಬೇಕು. ಸಿನಿಮಾರಂಗಕ್ಕೆ ಆಗಮಿಸುವುದಕ್ಕೂ ಮೊದಲು ಗಾರೆ ಕೆಲಸವನ್ನೇ ಮಾಡುತ್ತಿದ್ದರು. ಹಾಗಾಗಿ ಮೊದಲ ಕಸುಬನ್ನು ಇದೀಗ ಮತ್ತೆ ಮುಂದುವರಿಸಿದ್ದು, ಫಾರ್ಮ್ಹೌಸ್ನಲ್ಲಿನ ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.