

ಬೆಂಗಳೂರು: ‘ದುನಿಯಾ’ ವಿಜಯ್ ನಿರ್ದೇಶನ ಮಾಡಿ ನಟಿಸುತ್ತಿರುವ ‘ಸಲಗ’ ಸಿನಿಮಾದ ಹಾಡುಗಳು ದಿನೇ ದಿನೇ ಸದ್ದು ಮಾಡುತ್ತಿವೆ. ಈಗ ಕನ್ನಡದ ಪ್ರತಿಭಾವಂತ ಮತ್ತು ಮಧುರವಾದ ಧ್ವನಿಯ ಒಡೆಯ ಸಂಚಿತ್ ಹೆಗ್ಡೆ ಈ ಚಿತ್ರಕ್ಕೆ ಹಾಡಿದ್ದಾರೆ.
ಹೌದು, ಕೆಲ ದಿನಗಳ ಹಿಂದೆಯಷ್ಟೇ ಮಲೇಷ್ಯಾದ ರ್ಯಾಪರ್ ಯೋಗಿ ಒಂದು ಹಾಡನ್ನು ‘ಸಲಗ’ಕ್ಕಾಗಿ ಹಾಡಿದ್ದರು. ಈಗ ಸಂಚಿತ್ ಸರದಿಯಾಗಿದೆ. ‘ನಮ್ಮ ಚಿತ್ರದಲ್ಲಿ ಡ್ಯುಯೆಟ್ ಹಾಡೊಂದು ಇತ್ತು. ಅದನ್ನು ಯಾರ ಬಳಿ ಹಾಡಿಸಿದರೆ ಚೆಂದ ಎಂದು ಯೋಚಿಸುತ್ತಿದ್ದಾಗ ಸಂಚಿತ್ ಹೆಸರು ಜ್ಞಾಪಕಕ್ಕೆ ಬಂತು.
ಸಂಚಿತ್ ಹೆಗ್ಡೆ ಸದ್ಯ ಟ್ರೆಂಡಿಂಗ್ನಲ್ಲಿರುವ ಹುಡುಗ ಮತ್ತು ಅದ್ಭುತ ಹಾಡುಗಾರ. ನಮ್ಮ ಹಾಡನ್ನು ಓದಿ ಬಹಳ ಖುಷಿಯಾಗಿ ಆತ ಬೆಳಗಿನ ಜಾವ 4 ಗಂಟೆಯವರೆಗೂ ಹಾಡಿದ್ದಾನೆ. ನಾಗಾರ್ಜುನ್ ಎಂಬುವವರು ಈ ಹಾಡನ್ನು ಬರೆದಿದ್ದು, ಚಿತ್ರದಲ್ಲಿ ಕೆಲ ಮಾಂಟೇಜ್ಗಳ ಮೇಲೆ ಇದನ್ನು ಬಳಸಿಕೊಳ್ಳುತ್ತೇವೆ. ಖಂಡಿತಾ ಇದು ಎಲ್ಲರಿಗೂ ಇಷ್ಟವಾಗುತ್ತದೆ’ಎನ್ನುತ್ತಾರೆ ನಟ-ನಿರ್ದೇಶಕ ವಿಜಯ್. ಕೆ.ಪಿ. ಶ್ರೀಕಾಂತ್ ನಿರ್ವಣದ ಈ ಚಿತ್ರದಲ್ಲಿ ‘ಡಾಲಿ’ ಧನಂಜಯ ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.