ಓ ಮನಸೇ ಮೂಲಕ ಸಂಚಿತಾ ಪಡುಕೋಣೆ ಕಂಬ್ಯಾಕ್

Sanchitha
Published on

ಬೆಂಗಳೂರು: 2017ರಲ್ಲಿ ಶರಣ್ ಜತೆಗೆ ‘ಸತ್ಯ ಹರಿಶ್ಚಂದ್ರ’ ಸಿನಿಮಾ ತೆರೆಗೆ ಬಂದಿತ್ತು. ಆ ಚಿತ್ರದಲ್ಲಿ ಸಂಚಿತಾ ಪಡುಕೋಣೆ ನಾಯಕಿಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸಂಚಿತಾ ಮತ್ತೆ ಕಾಣಿಸಿಕೊಂಡಿರಲಿಲ್ಲ. 2018ರಲ್ಲಿ ‘ರ್ಯಾಂಬೊ 2’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರಾದರೂ, ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರಲಿಲ್ಲ. ಇದೀಗ ಸುದೀರ್ಘ ಗ್ಯಾಪ್​ನ ಬಳಿಕ ಸಂಚಿತಾ ಮತ್ತೆ ಕನ್ನಡದಲ್ಲಿ ‘ಓ ಮನಸೇ’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಸರಳ ಮುಹೂರ್ತ ಮುಗಿಸಿರುವ ಈ ಚಿತ್ರವನ್ನು ಡಿ.ಜಿ ಉಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಧರ್ಮ ಕೀರ್ತಿರಾಜ್ ಸಹ ಚಿತ್ರದ ಮತ್ತೋರ್ವ ನಾಯಕ. ‘ಕೋವಿಡ್​ಗೂ ಮುನ್ನ ‘ಮುತ್ತುಕುಮಾರ’ ಮತ್ತು ರವಿಚಂದ್ರನ್ ಅವರ ಜತೆ ‘ರವಿ ಬೋಪಣ್ಣ’ ಸಿನಿಮಾ ಮಾಡಿದ್ದೆ. ಅದಾದ ಬಳಿಕ ಬೇರೆ ಸಿನಿಮಾ ಒಪ್ಪಿರಲಿಲ್ಲ. ಇದೀಗ ತೆಲುಗು, ಕನ್ನಡದಲ್ಲಿ ಮತ್ತೆ ಸಕ್ರಿಯಳಾಗಿದ್ದೇನೆ. ‘ಓ ಮನಸೇ’ ಚಿತ್ರದಲ್ಲಿ ವಿಶೇಷ ಪಾತ್ರ ಸಿಕ್ಕಿದೆ. ಕ್ರೖೆಂ ಥ್ರಿಲ್ಲರ್ ಶೈಲಿಯ ಈ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿದ್ದೇನೆ. ಮಡಿಕೇರಿ, ಸಕಲೇಶಪುರದ ಸುತ್ತ ಚಿತ್ರದ ಶೂಟಿಂಗ್ ನಡೆಯಲಿದೆ’ ಎನ್ನುವ ಸಂಚಿತಾ, ಕನ್ನಡದಲ್ಲಿಯೇ ಹೆಚ್ಚು ಸಿನಿಮಾ ಮಾಡುವ ಬಯಕೆಯೂ ಇದೆ ಅಂತೆ. ಫ್ರೆಂಡ್ಸ್ ಮೂವಿ ಮೇಕರ್ರ್ ಬ್ಯಾನರ್​ನಲ್ಲಿ ಚಿತ್ರ ನಿರ್ವಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net