ಸಹನೆಯಲ್ಲಿ ಸಂಚಿತಾ ಪಡುಕೋಣೆ

Sanchita Padukone 16 jan 20
Published on

ಸ್ಯಾಂಡಲ್​ವುಡ್​ನಲ್ಲಿ ಒಂದು ದಶಕವನ್ನು ಪೂರೈಸಿರುವ ನಟಿ ಸಂಚಿತಾ ಪಡುಕೋಣೆ, ಇದೀಗ ‘ಗಡಿನಾಡು’ ಚಿತ್ರದ ಮೂಲಕ 2020ರ ತಮ್ಮ ಸಿನಿಖಾತೆ ತೆರೆಯುತ್ತಿದ್ದಾರೆ. ಅರ್ಥಾತ್, ಈ ವರ್ಷದಲ್ಲಿ ಅವರ ಅಭಿನಯದ ಮೊದಲ ಸಿನಿಮಾ ಆಗಿ ‘ಗಡಿನಾಡು’ ಚಿತ್ರ ಜ. 24ರಂದು ತೆರೆ ಕಾಣುತ್ತಿದೆ. ನಾಗ್ ಹುಣಸೋಡ್ ನಿರ್ದೇಶನ, ಪ್ರಭುಸೂರ್ಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಬಗ್ಗೆ ಮಾತನಾಡುತ್ತಲೇ ಒಂದು ದಶಕದ ಅನುಭವ- ಅನಿಸಿಕೆಯನ್ನೂ ಸಂಚಿತಾ ಇಲ್ಲಿ ಹಂಚಿಕೊಂಡಿದ್ದಾರೆ.

‘ಏನೇ ಬಂದರೂ ತಾಳ್ಮೆಯಿಂದ ಇರಬೇಕು, ಎಲ್ಲದಕ್ಕೂ ಸಮಯ ಬರಬೇಕು, ಅಲ್ಲಿಯವರೆಗೂ ಪ್ರಯತ್ನ ಜಾರಿಯಲ್ಲಿರಬೇಕು..’ - ಇದು ಸ್ಯಾಂಡಲ್​ವುಡ್ ನಟಿ, ಕರಾವಳಿ ಬೆಡಗಿ ಸಂಚಿತಾ ಪಡುಕೋಣೆ ತಮ್ಮ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಕಂಡುಕೊಂಡ ಸತ್ಯ. ಚಂದನವನಕ್ಕೆ ಪದಾರ್ಪಣೆ ಮಾಡಿ ಒಂದು ದಶಕ ಪೂರೈಸಿರುವ ಅವರು ಇದೀಗ ‘ಗಡಿನಾಡು’ ಪ್ರವೇಶಿಸಿದ್ದಾರೆ. ಅಂದರೆ ‘ಗಡಿನಾಡು’ ಎಂಬ ಸಿನಿಮಾದಲ್ಲಿ ಅಭಿನಯಿಸಿರುವ ಅವರು ಜ. 24ರಂದು ಮರಾಠಿ ಹುಡುಗಿಯಾಗಿ ಪರದೆ ಮೇಲೆ ಮಿಂಚಲಿದ್ದಾರೆ. ‘ಇದು ಹದಿಹರೆಯದ ಪ್ರೀತಿ ಹಾಗೂ ಭಾಷಾಭಿಮಾನದ ಕಥಾಹಂದರ ಇರುವ ಸಿನಿಮಾ. ನಾನಿಲ್ಲಿ ಮಹಾರಾಷ್ಟ್ರದ ಯುವತಿಯಾಗಿ ಕಾಣಿಸಿಕೊಂಡಿದ್ದು ವಿದ್ಯಾರ್ಥಿನಿ ಪಾತ್ರ ಮಾಡಿದ್ದೇನೆ. ಬೆಳಗಾವಿ ಹುಡುಗ ಹಾಗೂ ಮರಾಠಿ ಹುಡುಗಿ ನಡುವೆ ಪ್ರೇಮಾಂಕುರವಾದರೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ’ ಎನ್ನುತ್ತ ಪಾತ್ರ ಹಾಗೂ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು ಸಂಚಿತಾ ಪಡುಕೋಣೆ. ಪ್ರಯತ್ನ ನಿರಂತರ: ‘ರಾವಣ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ಸಂಚಿತಾ, ಚಿತ್ರರಂಗದಲ್ಲಿ ಇದೀಗ ಒಂದು ದಶಕವನ್ನೇ ಕಳೆದಿದ್ದಾರೆ. ಈ ಅವಧಿ ಅವರಿಗೆ ಸಾಕಷ್ಟು ಅನುಭವಗಳನ್ನು ನೀಡಿದೆ. ‘ಈ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಏಳು-ಬೀಳು ಎರಡನ್ನೂ ಕಂಡಿದ್ದೇನೆ. ಆದರೆ ನಾನು ಅಂದುಕೊಂಡಷ್ಟರ ಮಟ್ಟಿಗೆ ಯಶಸ್ಸು ಸಿಕ್ಕಿಲ್ಲ. ಕೆಲವೊಮ್ಮೆ ತುಂಬ ಬೇಸರವಾಗುತ್ತದೆ. ಹಾಗಂತ ಪ್ರಯತ್ನ ಬಿಡಬಾರದು’ ಎನ್ನುತ್ತ ತಾವು ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು. ಅಂದಹಾಗೆ ಸಂಚಿತಾ ಈ ಕ್ಷೇತ್ರಕ್ಕೆ ಬಯಸಿ ಬಂದವರಲ್ಲ. ಅನಿರೀಕ್ಷಿತವಾಗಿ ಚಲನಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರೂ ಭವಿಷ್ಯದ ಬಗ್ಗೆ ಇಲ್ಲಿಯೇ ನಿರೀಕ್ಷೆ ಇರಿಸಿಕೊಂಡಿದ್ದಾರೆ. ‘ನಟಿ ಆಗಬೇಕು ಎಂಬ ಕನಸು ನನಗೆ ಇರಲಿಲ್ಲ. ಆದರೂ ಯಾವುದೇ ಬ್ಯಾಕ್​ಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇನೆ. ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಎಲ್ಲದಕ್ಕೂ ಕಾಲಕೂಡಿ ಬರಬೇಕು. ನಮ್ಮ ಪ್ರಯತ್ನವನ್ನು ಬಿಡಬಾರದು’ ಎನ್ನುತ್ತಾರೆ ಅವರು. ಮುಂದಿನ ಕನಸು-ಯೋಜನೆಗಳು ಏನು ಎಂಬುದಾಗಿ ಕೇಳಿದರೆ ಅವರ ಉತ್ತರ, ಸಿನಿಮಾ ಸಿನಿಮಾ ಸಿನಿಮಾ. ಹೌದು.., ‘ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ..’ ಎನ್ನುವ ಸಂಚಿತಾ, ‘ಏನೇ ಆದರೂ ಚಿತ್ರರಂಗದಲ್ಲಿರುತ್ತೇನೆ. ಇಲ್ಲಿಯೇ ಬದುಕು ಕಟ್ಟಿಕೊಳ್ಳುತ್ತೇನೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

ಅವಕಾಶ ಸಿಕ್ಕರೆ ಖಂಡಿತ...

ಸಿನಿಮಾಗೆ ಸಂಬಂಧಿಸಿದಂತೆ ‘ಪಡುಕೋಣೆ’ ಎಂದಾಕ್ಷಣ ಥಟ್ಟಂತ ಮನಸ್ಸಿಗೆ ಬರುವ ಮತ್ತೊಂದು ಹೆಸರೆಂದರೆ ದೀಪಿಕಾ ಪಡುಕೋಣೆ. ದೀಪಿಕಾ-ಸಂಚಿತಾ ಇಬ್ಬರಿಗೂ ಪಡುಕೋಣೆ ಎಂಬ ಸರ್​ನೇಮ್ ಮಾತ್ರ ಒಂದೇ ಎನ್ನುವುದು ಬಿಟ್ಟರೆ ಇಬ್ಬರೂ ಬೇರೆ ಬೇರೆಯೇ. ಇನ್ನು ಇದುವರೆಗೆ ಕನ್ನಡ ಮಾತ್ರವಲ್ಲದೆ ತಮಿಳು-ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿರುವ ಸಂಚಿತಾಗೆ, ಬಾಲಿವುಡ್ ಪ್ರವೇಶದ ಬಗ್ಗೆ ಕೇಳಿದರೆ ಅವರು ಹೇಳುವುದಿಷ್ಟು.. ‘ಬಾಲಿವುಡ್​ಗೆ ಎಂಟ್ರಿ ಕೊಡಲೇಬೇಕು ಎಂಬ ಆಸೆ ಅಂತೇನೂ ಇಲ್ಲ. ಆದರೆ ಅವಕಾಶ ಸಿಕ್ಕರೆ ಖಂಡಿತ ಹೋಗುತ್ತೇನೆ’ ಎನ್ನುತ್ತಾರೆ.

ಸಾರ್ಥಕವಾಯಿತು ಪರಿಶ್ರಮ

ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಸಾಕಷ್ಟು ಗುಡ್ಡ ಬೆಟ್ಟ ಹತ್ತಿಳಿಸಿದ್ದಾರಂತೆ ನಿರ್ದೇಶಕ ನಾಗ್ ಹುಣಸೋಡ್. ‘ಬೆಟ್ಟಗುಡ್ಡಗಳನ್ನು ಹತ್ತಿಳಿಯುವಾಗ ಯಾಕಪ್ಪ ಇಷ್ಟೆಲ್ಲ ದಣಿಸುತ್ತಾರೆ ಎನಿಸಿತ್ತು. ಆದರೆ ಅದು ದೃಶ್ಯವಾಗಿ ಮೂಡಿಬಂದ ಮೇಲೆ ತುಂಬ ಖುಷಿ ಕೊಟ್ಟಿದೆ.

ಅಷ್ಟೆಲ್ಲ ಶ್ರಮಪಟ್ಟಿದ್ದು ಸಾರ್ಥಕವಾಗಿದೆ ಅನಿಸಿದೆ’ ಎನ್ನುತ್ತ ಅವರು ಶೂಟಿಂಗ್ ಅನುಭವ ಹಂಚಿಕೊಂಡರು. ‘ಈ ಸಿನಿಮಾದಲ್ಲಿ ಪ್ರೀತಿ-ಪ್ರೇಮದ ಜತೆಗೆ ನಾಡು-ನುಡಿಯ ವಿಚಾರಗಳಿವೆ.

ಅದೇ ಕಾರಣಕ್ಕೆ ಈ ಸಿನಿಮಾ ನನಗೆ ಹೆಚ್ಚು ಖುಷಿ ಕೊಟ್ಟಿದೆ’ ಎನ್ನುವ ಸಂಚಿತಾ, ತಮ್ಮ ಇದುವರೆಗಿನ ಸಿನಿಮಾಗಳಿಗಿಂತ ಇದು ಹೇಗೆ ವಿಶೇಷ ಎಂಬುದನ್ನು ವಿವರಿಸಿದರು. ರವಿಚಂದ್ರನ್ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಿರುವ ಬಹುನಿರೀಕ್ಷಿತ ‘ರವಿ ಬೋಪಣ್ಣ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಸಂಚಿತಾ, ಅದರ ಶೂಟಿಂಗ್ ಕೂಡ ಮುಗಿಸಿದ್ದಾರೆ. ಇನ್ನೊಂದು ಸಿನಿಮಾ ‘ಮುತ್ತು ಕುಮಾರ’ ಚಿತ್ರೀಕರಣವೂ ಮುಗಿದಿದೆ. ಅಲ್ಲದೆ ತೆಲುಗಿನಲ್ಲಿ ನಾಯಕ ಶ್ರೀರಾಮ್​ಗೆ ಜೋಡಿಯಾಗಿ ‘ಅಸಲೆಮ್ ಜರಿಗಿಂದಿ’ ಸಿನಿಮಾದಲ್ಲೂ ಸಂಚಿತಾ ಪಡುಕೋಣೆ ನಟಿಸಿದ್ದಾರೆ.

| ಜಲಜತನಯ ರವಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net