

ಒಟಿಟಿಗಳ ಅಬ್ಬರಿಂದಾಗಿ ಬಿಡುಗಡೆಯಾದ ಹೊಸ ಚಿತ್ರಗಳೇ ಥಿಯೇಟರ್ಗಳಲ್ಲಿ ನಿಲ್ಲಲು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇನ್ನು ರಿ&ರಿಲೀಸ್ ಆಗುವ ಚಿತ್ರಗಳನ್ನು ಕೇಳುವವರು ಯಾರು? ಅಂತನ್ನಿಸಬಹುದು. ಆದರೆ, ಕಳೆದ ಸೆಪ್ಟೆಂಬರ್ನಲ್ಲಿ ರಿ-ರಿಲೀಸ್ ಆದ "ತುಂಬಾದ್' ಸಿನಿಮಾ, ಆ ಮಾತನ್ನು ಸುಳ್ಳಾಗಿಸಿತ್ತು. 2018ರಲ್ಲಿ ಮೊದಲ ಬಾರಿ ತೆರೆಗೆ ಬಂದಿದ್ದ ಅನಿಲ್ ಬಾರ್ವೆ ನಿರ್ದೇಶನದ ಈ ಹಾರರ್ ಚಿತ್ರ, ಬಾಕ್ಸಾಫಿಸಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ಸೆಪ್ಟೆಂಬರ್ನಲ್ಲಿ ರಿ-ರಿಲೀಸ್ ಆದಾಗ 38 ಕೋಟಿ ರೂ. ಗಳಿಕೆ ಮಾಡಿಕೊಳ್ಳುವ ಮೂಲಕ ಸೂಪರ್ಹಿಟ್ ಎನಿಸಿಕೊಂಡಿತ್ತು.
"ತುಂಬಾದ್'ಗೆ ಸಿಕ್ಕ ಯಶಸ್ಸಿನಿಂದ ಎಚ್ಚೆತ್ತುಕೊಂಡ ಹರ್ಷವರ್ಧನ್ ರಾಣೆ ಮತ್ತು ಮರ್ವಾ ಹೊಕೇನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ಸನಮ್ ತೇರಿ ಕಸಮ್' ಚಿತ್ರತಂಡ ಪ್ರೇಮಿಗಳ ದಿನದ ಪ್ರಯುಕ್ತ ಚಿತ್ರವನ್ನು ಮರುಬಿಡುಗಡೆ ಮಾಡಿತ್ತು. ವಿಶೇಷ ಅಂದರೆ, ಈ ಸಿನಿಮಾಗೂ ಬಾಕ್ಸಾಫಿಸಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 18ರಿಂದ 20 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ "ಸನಮ್ ತೇರಿ ಕಸಮ್' 2016ರಲ್ಲಿ ಮೊದಲ ಬಾರಿ ರಿಲೀಸ್ ಆದಾಗ ಕೇವಲ 16 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡಿತ್ತು.
ಇದೀಗ ರಿ-ರಿಲೀಸ್ ಆಗಿ 17 ದಿನಗಳಲ್ಲಿ 50 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿಕೊಳ್ಳುವ ಮೂಲಕ, ಮರುಬಿಡುಗಡೆಯಾಗಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಭಾರತೀಯ ಸಿನಿಮಾ ಎಂಬ ದಾಖಲೆ ಬರೆದಿದೆ. ಇದೇ ಖುಷಿಯಲ್ಲಿ "ಸನಮ್ ತೇರಿ ಕಸಮ್' ಸೀಕ್ವೆಲ್ಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.