ದಿಗ್ದರ್ಶಕ ಶಂಕರ್‌ನಾಗ್ : ಪುಣ್ಯ ಸ್ಮರಣೆ ದಿನದಂದು ಹಿರಿಯ ನಟನ ಜತೆಗಿನ ಒಡನಾಟ ನೆನದ ನಟ ಮಂಜುನಾಥ್

shankar nag1
Published on

ನಟ ಶಂಕರ್‌ನಾಗ್- ಮಾಸ್ಟರ್ ಮಂಜುನಾಥ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಿದೆ. ‘ಹೊಸ ತೀರ್ಪು’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ‘ಮಾಲ್ಗುಡಿ ಡೇಸ್’, ‘ಸಾಂಗ್ಲಿಯಾನಾ’ ಸೇರಿ ಹಲವು ಸಿನಿಮಾಗಳಲ್ಲಿ ಶಂಕರ್‌ನಾಗ್ ಜತೆ ಮಾಸ್ಟರ್ ಮಂಜು ಕಾಣಿಸಿಕೊಂಡಿದ್ದರು. ಇಂದು ಶಂಕರ್‌ನಾಗ್ 35ನೇ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ನಟ ಮಂಜುನಾಥ್ (ಮಾ.ಮಂಜುನಾಥ್) ಹಿರಿಯ ನಟನ ಜತೆಗಿನ ಒಡನಾಟವನ್ನು ‘ವಿಜಯವಾಣಿ’ ಜತೆ ನೆನಪಿಸಿಕೊಂಡಿದ್ದಾರೆ.

ಮಂಜುನಾಥ್, ‘ಮಾಲ್ಗುಡಿ ಡೇಸ್’ನಟ

1980ರ ದಶಕದಲ್ಲಿ ನಾನು, ಶಂಕರ್‌ನಾಗ್ ಅವರನ್ನು ಸೇರಿಕೊಂಡೆ. ಸರಿಯಾದ ವೇಳೆ, ವಯಸ್ಸಿನಲ್ಲಿಯೇ ಅವರ ಜತೆಯಾದೆ ಅನಿಸುತ್ತದೆ. 9ರಿಂದ 10 ವರ್ಷಗಳ ಕಾಲ ಅವರ ಜತೆ ಹೆಜ್ಜೆ ಹಾಕಿದ್ದೇನೆ. ಆಗ ನಾನು ಚಿಕ್ಕವನಾದರೂ ಸ್ನೇಹಿತನಂತೆ ಕಾಣುತ್ತಿದ್ದರು. ಅವರು ಹೇಳಿದಂತೆಯೇ ಬದುಕಿ ತೋರಿಸಿದವರು. ಅವರಂತೆ 5ರಿಂದ 10ರಷ್ಟಾದರೂ ಇಂದು ಬದುಕುತ್ತಿದ್ದೇನೆ ಅನಿಸುತ್ತದೆ. ಶಂಕರ್‌ನಾಗ್ ಹೇಳಿಕೊಟ್ಟ ವಿಚಾರಗಳು, ಪಾಠಗಳು ಇಂದಿಗೂ ನನಗೆ ಗೈಡ್ ಮಾಡುತ್ತವೆ. ಅವರು ನನ್ನ ಹೃದಯದಲ್ಲಿದ್ದಾರೆ. ಇನ್ನು ಕೆಲವರು, ‘ನೀವು ಶಂಕರ್‌ನಾಗ್‌ರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀರಾ’ ಎಂದು ಪ್ರಶ್ನಿಸುತ್ತಾರೆ. ಎಂದೂ ಅವರನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅವರು ನನ್ನೊಂದಿಗೆ ದೈಹಿಕವಾಗಿ ಇಲ್ಲವಷ್ಟೇ. ಹೃದಯದಲ್ಲಿದ್ದಾರೆ. ಅವರ ಮಾತುಗಳೇ ಇಂದಿಗೂ ನನ್ನನ್ನು ಮುನ್ನಡೆಸುತ್ತಿವೆ.

ಸಕಲಕಲಾ ವಲ್ಲಭ

ಶಂಕರನಾಗ್ ಸರ್ ಪ್ರತಿಭೆಗೆ ‘ಜೀನಿಯಸ್’ ಎಂಬ ಪದ ಕಡಿಮೆಯಾಗುತ್ತದೆ. ಅವರನ್ನು ಮರ್ಕ್ಯುರಿ ದ್ರವ್ಯಕ್ಕೆ ಹೋಲಿಸಬಹುದು. ಆ ದ್ರವ್ಯವು ಯಾವತ್ತಿಗೂ ಒಂದೆಡೆ ಇರುವುದಿಲ್ಲ. ಅತ್ತಿತ್ತ ಓಲಾಡುತ್ತಿರುತ್ತದೆ. ಮುಟ್ಟಲೂ, ಹಿಡಿಯಲು ಆಗುವುದಿಲ್ಲ. ಅದರಂತೆ ಶಂಕರ್‌ನಾಗ್ ಯಾರಿಗೂ ನಿಲುಕದ ವ್ಯಕ್ತಿ, ವ್ಯಕ್ತಿತ್ವ. ಅವರ ಕೈಯಿಂದ ಆಗದಂತ ವಿಚಾರ ಇರಲಿಲ್ಲ, ಮಾಡದಂತ ಕೆಲಸ ಇರಲಿಲ್ಲ. ಎಲ್ಲವನ್ನೂ ಮಾಡಿ ತೋರಿಸಿದ್ದಾರೆ. ನಟನೆ, ನಿರ್ದೇಶನ, ಬರವಣಿಗೆ ಸೇರಿ ಸಿನಿಮಾ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಅವರು ಮಾಡಿ ತೋರಿಸಿದ್ದಾರೆ. ಅವರ ಜತೆ ಆ್ಯಕ್ಟಿಂಗ್ ಮಾಡುವುದೇ ಒಂದು ಪುಣ್ಯದ ಕೆಲಸ. ಪ್ರತಿ ದೃಶ್ಯದಲ್ಲೂ ಹೊಸ ಕಲಿಕೆ ಇರುತ್ತದೆ. ಒಂದೇ ವಿಚಾರವನ್ನು ಯಾವೆಲ್ಲ ವಿಧದಲ್ಲಿ ತೋರಿಸಬಹುದು ಎಂದು ಆಲೋಚಿಸುತ್ತಿದ್ದರು. ನಮಗೆಲ್ಲಾ ಶಂಕರ್‌ನಾಗ್ ಎಂದರೆ, ಆಟೋರಾಜ, ಕರಾಟೆ ಕಿಂಗ್ ಅಂತೆಲ್ಲ ನೆನಪಿಗೆ ಬರುತ್ತದೆ. ಅವರು ಪಾತ್ರವಾಗಲಿ ಯಾವುದಾಗಲಿ ಅದಕ್ಕೆ ಜೀವ ತುಂಬುತ್ತಿದ್ದರು. ಅದಕ್ಕೆ ‘ರಕ್ತ ತಿಲಕ’ ಚಿತ್ರದ ಪೆದ್ದನ ಪಾತ್ರವೇ ಸಾಕ್ಷಿ. ಆ ಚಿತ್ರದಲ್ಲಿ ಊರಿನವರು ಶೋಷಣೆ ಮಾಡಿದಾಗ ಶಂಕರ್‌ನಾಗ್ ಕೇವಲ ಒಳಉಡುಪಿನಲ್ಲಿ ನಡೆದುಕೊಂಡು ಹೋಗುವ ಒಂದು ದೃಶ್ಯ ಬರುತ್ತದೆ. ಅದನ್ನು ಅವರು ಯಾವುದೇ ಮುಜುಗರ, ಹಮ್ಮುಬಿಮ್ಮುವಿಲ್ಲದೆ ಮಾಡಿ ಮುಗಿಸಿದ್ದರು. ಅಷ್ಟರಮಟ್ಟಿಗೆ ಅವರು ಕಲೆಯನ್ನು ದೇವರು ಎಂದು ಭಾವಿಸಿದ್ದರು. ಇದು ಕೂಡ ಅವರಿಂದ ನೋಡಿ ಕಲಿತಿರುವುದು.

ಆ್ಯಕ್ಟರ್ಸ್ ಡೈರೆಕ್ಟರ್

ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು, ಮಾತನಾಡುವುದು ಶಂಕರ್‌ನಾಗ್ ಅವರ ಇಷ್ಟದ ಕೆಲಸ. ‘ಮಾಲ್ಗುಡಿ ಡೇಸ್’ ಶೂಟಿಂಗ್ ಸಮಯದಲ್ಲಿ ಏನಾದರೂ ನಾನು ಹೇಳಿದರೆ, ಅದನ್ನು ಅವರು ಕೇಳುತ್ತಿದ್ದರು. ಸಣ್ಣ ಹುಡುಗನಾಗಿದ್ದರೂ ನನ್ನ ಮಾತನ್ನು ಗಂಭೀರವಾಗಿ ಆಲಿಸುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ಶೂಟಿಂಗ್ ಸೆಟ್‌ನಲ್ಲಿ ನನ್ನ ಮಾತು ಆಲಿಸುತ್ತಿರುವ ಫೋಟೋ ಇದೆ. ನಿಜವಾಗಿಯೂ ಅವರೊಬ್ಬ ಆ್ಯಕ್ಟರ್ಸ್ ಡೈರೆಕ್ಟರ್. ಅಂತಹ ಒಬ್ಬ ವ್ಯಕ್ತಿ ಸಿಕ್ಕರೆ ಸಾಕು ನಮ್ಮನ್ನು ನಾವು ಯಾರಂತಾ ತೋರಿಸಿಕೊಳ್ಳಬಹುದು.

ಮುಂದಾಲೋಚನೆಗಾರ

ಶಂಕರ್‌ನಾಗ್ ಸರ್ ಒಬ್ಬ ಮುಂದಾಲೋಚನೆಗಾರರಾಗಿದ್ದರು. ನಾವು ಇಂದಿಗೆ ಯೋಚಿಸುತ್ತಿದ್ದರೆ, ಅವರು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರು. ಆ ಕಾಲದಲ್ಲಿ ನಮಗೆ ಶೂಟಿಂಗ್ ಅಥವಾ ಪೋಸ್ಟ್-ಪ್ರೊಡಕ್ಷನ್‌ಗಳಿಗೆ ಚೆನ್ನೈಗೆ ಹೋಗಬೇಕಾಗುತ್ತಿತ್ತು. ಅಲ್ಲಿ ನಮಗೆ ತುಂಬಾ ಕಾಯಿಸುತ್ತಿದ್ದರು. ಆಗ ಇದನ್ನರಿತ ಅವರು ಬೆಂಗಳೂರಿನಲ್ಲಿಯೇ ಸಂಕೇತ್ ಸ್ಟುಡಿಯೋ ಆರಂಭಿಸಿದ್ದರು. 1990ರಲ್ಲಿ ಹಾಲಿವುಡ್‌ನಲ್ಲಿ ‘ಘೋಸ್ಟ್’ ಎಂಬ ರಿಲೀಸ್ ಆಗಿತ್ತು. ಅದರಲ್ಲಿ ಡಿಜಿಟಲ್ ಸ್ಪೆಶಲ್ ಎಫೆಕ್ಟ್ ಬಳಸಲಾಗಿತ್ತು. ಇಟಲಿ ಫಿಲಂ ಫೆಸ್ಟಿವಲ್‌ನಲ್ಲಿ ನಾವು ಆ ಸಿನಿಮಾ ನೋಡಿದ್ದೆವು. ಡಿಜಿಟಲ್ ಸ್ಪೇಶಲ್ ಎಫೆಕ್ಟ್ ಬಗ್ಗೆ ಅವರಿಗೆ ಆಸಕ್ತಿ ಹುಟ್ಟಿ, ಇದನ್ನು ಬೆಂಗಳೂರಿಗೆ ತರಬೇಕು ಎಂದು ಅವರು ಲಂಡನ್‌ಗೆ ಸ್ವಂತ ಖರ್ಚಿನಲ್ಲಿ ಹೋಗಿ, ಆ ಸಂಸ್ಥೆ ಜತೆ ಮಾತಾಡಿಕೊಂಡು ಬಂದಿದ್ದರು. ಬೆಂಗಳೂರು ಸಿಲಿಕಾನ್ ಸಿಟಿ ಆಗದಿರುವ ಕಾಲದಲ್ಲೇ ಅವರು ಅಂತಹ ಮುಂದಾಲೋಚನೆ ಮಾಡಿದ್ದರು. ದುರಾದೃಷ್ಟವಶಾತ್, ಆ ಮಾತುಕತೆ ಆದ ಆರು ತಿಂಗಳಿಗೆ ಅವರಿಲ್ಲವಾದರು. ಇನ್ನು ಬೆಂಗಳೂರಿಗೆ ಮೆಟ್ರೋ, ನಂದಿ ಹಿಲ್ಸ್‌ಗೆ ರೋಪ್ ವೇ.. ಹೀಗೆ ಅಂದಿನ ಕಾಲದಲ್ಲಿ ಆಧುನಿಕತೆಗೆ ನಮ್ಮ ನಗರಗಳು ತೆರೆದುಕೊಳ್ಳಬೇಕು ಎಂದು ಆಲೋಚಿಸಿದ್ದರು. ಈ ಕಾರಣಕ್ಕಾಗಿಯಾದರೂ, ಜೆಪಿನಗರದ ನಾಲ್ಕನೇ ಸ್ಟೇಜ್‌ನಲ್ಲಿ ಹೊಸದಾಗಿ ಆಗುವ ಮೆಟ್ರೋ ಸ್ಟೇಷನ್‌ಗೆ ಅವರ ಹೆಸರಿಡಲು ಸರ್ಕಾರ ಮುಂದಾಗಬೇಕು.

ಕ್ಲೋಸ್‌ಫ್ರೆಂಡ್

ಶಂಕರ್ ನಾಗ್ ಅವರು ನನ್ನ ವೃತ್ತಿ ಜೀವನದ ಗಾಢ್‌ಫಾದರ್ ಆದರೆ, ದೈನಂದಿನ ಜೀವನದ ದ ಬೆಸ್ಟ್, ಕ್ಲೋಸೆಸ್ಟ್ ಫ್ರೆಂಡ್ ಆಗಿದ್ದರು. ನನ್ನ ಪ್ರತಿಯೊಂದು ಕಷ್ಟ-ಸುಖಗಳನ್ನು ಮನಸ್ಸು ಬಿಚ್ಚಿಹೇಳಿಕೊಂಡಿದ್ದೇನೆ. ಎಂದಿಗೂ ಅವರು ನನಗೆ ದೊಡ್ಡ ಸ್ಟಾರ್ ಎಂಬ ಭಾವನೆ ಬರುವಂತೆ ನಡೆದುಕೊಂಡವರಲ್ಲ. ನನ್ನ ಜತೆ ಅವರು ಸದಾ ಇರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net