

ಬೆಂಗಳೂರು: ಈ ಹಿಂದೆ ಇರುವೆ ಬಿಟ್ಟಿದ್ದವರು ಇದೀಗ ಆಮ್ಲೆಟ್ ಹಾಕಲು ಮುಂದಾಗಿದ್ದಾರೆ. ಅರ್ಥಾತ್, ‘ಕೆಂಪಿರುವೆ’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವೆಂಕಟ್ ಭಾರದ್ವಾಜ್, ಅದಾದ ಬಳಿಕ ಮತ್ತೊಂದು ಸಿನಿಮಾ ‘ಆಮ್ಲೆಟ್’ಗೆ ಆಕ್ಷನ್-ಕಟ್ ಹೇಳಿದ್ದು, ಮಂಗಳವಾರ ಅದರ ಟೈಟಲ್ ಲಾಂಚ್ ಮಾಡಿದ್ದಾರೆ.
‘ಅಮೃತಾ ಫಿಲ್ಮ್ ಸೆಂಟರ್’ ಮೂಲಕ ನಿರ್ವಪಕರಾದ ಪ್ರಸನ್ನ ಮತ್ತು ಓಂಪ್ರಕಾಶ್ ಬಂಡವಾಳ ಹೂಡಿರುವ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿ ಸಂಯುಕ್ತಾ ಹೊರನಾಡು, ಶೋಭರಾಜ್, ನಿರಂಜನ ದೇಶಪಾಂಡೆ, ‘ಬಿಗ್ಬಾಸ್’ ಖ್ಯಾತಿಯ ಸುಜಾತಾ ಸತ್ಯಮೂರ್ತಿ, ಪಿ.ಡಿ. ಸತೀಶ್ ಮುಂತಾದವರು ನಟಿಸಿದ್ದಾರೆ.
‘ನನ್ನದು ಈ ಸಿನಿಮಾದಲ್ಲಿ ಸಾಫ್ಟ್ವೇರ್ ಕಂಪನಿ ಉದ್ಯೋಗಿಯ ಪಾತ್ರ. ಐಟಿ ಕಂಪನಿಯೊಂದರ ಸಿಇಒ ಆಗಿ ಕಾಣಿಸಿಕೊಂಡಿದ್ದೇನೆ. ಸದಾ ಕೆಲಸದ ಬಗ್ಗೆಯೇ ಚಿಂತಿಸುತ್ತ ಹಣದ ಹಿಂದೆಯೇ ಬಿದ್ದಿರುವ, ಯಾರೊಂದಿಗೂ ಅಷ್ಟು ಅಟ್ಯಾಚ್ವೆುಂಟ್ ಇರದೆ ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹಾಗೇಕೆ ಆದೆ ಹಾಗೂ ನಂತರ ಬದುಕಿನ ವಾಸ್ತವ ಹೇಗೆ ಅರಿವಾಗುತ್ತದೆ ಎಂಬುದೇ ಕಥಾಹಂದರ. ಆದರೆ ಇದು ನನ್ನ ನಿಜ ಬದುಕಿಗೆ ವ್ಯತಿರಿಕ್ತವಾದ ಪಾತ್ರ’ ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ನಾಯಕಿ ಸಂಯುಕ್ತಾ.
‘ಇದು ಅವಸರದ ಬದುಕಿನ ಕಥಾನಕ. ಈಗಿನ ಜನರೇಷನ್ ಎಲ್ಲದಕ್ಕೂ ತರಾತುರಿ ನಡೆಸುತ್ತಿದೆ. ಕಾಲಕ್ಕಿಂತಲೂ ಮುಂದೆ ಹೋಗುವಂತೆ ಬದುಕುತ್ತಿದ್ದಾರೆ. ಎಲ್ಲರೂ ರೆಡಿ ಇರುವುದನ್ನೇ ಬಯಸುತ್ತಿದ್ದಾರೆ. ಅದರಿಂದ ಏನೇನು ದುಷ್ಪರಿಣಾಮಗಳು ಆಗುತ್ತವೆ ಎಂಬುದನ್ನು ಐದಾರು ಪಾತ್ರಗಳ ಮೂಲಕ ಹೇಳಲಾಗಿದೆ. ಅರ್ಜೆಂಟ್ಗೆ ಮಾಡಿಕೊಳ್ಳಬಹುದಾದ ‘ಆಮ್ಲೆಟ್’ಅನ್ನೇ ಟೈಟಲ್ ಆಗಿಸಿಕೊಳ್ಳಲಾಗಿದೆ. ‘ರೆಡಿಮಿಕ್ಸ್’ ಎಂಬ ಟ್ಯಾಗ್ಲೈನ್ ಇಡಲಾಗಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕ ವೆಂಕಟ್ ಭಾರದ್ವಾಜ್. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಏಪ್ರಿಲ್ನಲ್ಲಿ ಸಿನಿಮಾ ತೆರೆ ಕಾಣಿಸುವ ತಯಾರಿಯಲ್ಲಿದೆ.
‘ಆಮ್ಲೆಟ್’ ಎಂಬ ಟೈಟಲ್ ನೋಡಿ ಹಲವರು ತಪು್ಪ ಭಾವಿಸಿದ್ದಾರೆ. ನನ್ನ ಬದುಕಿಗೂ ಈ ಟೈಟಲ್ಗೂ ಏನೇನೂ ಸಂಬಂಧವಿಲ್ಲ. ನಾನು ನಿಜಜೀವನದಲ್ಲಿ ಆಮ್ಲೆಟ್ ತಿನ್ನುವುದಿಲ್ಲ, ಚಿತ್ರದಲ್ಲಂತೂ ಆಮ್ಲೆಟ್ ಎನ್ನುವುದೂ ಇಲ್ಲ. ನಾನು ಎಂದೆಂದಿಗೂ ಪ್ರಾಣಿಪ್ರಿಯೆ ಹಾಗೂ ಸಸ್ಯಾಹಾರಿ. | ಸಂಯುಕ್ತಾ ಹೊರನಾಡು ನಟಿ