ಪ್ರಜ್ಞಾ ಅಲ್ಲ, ಸಂಯುಕ್ತಾ: ತೆಲುಗಿನ ‘ಅಖಂಡ-2’ ಚಿತ್ರಕ್ಕೆ ನಾಯಕಿಯಾದ ‘ಗಾಳಿಪಟ-2’ ನಟಿ

samyktha menon
Published on

ಕನ್ನಡದ ‘ಗಾಳಿಪಟ-2’ ಸೇರಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಸಂಯುಕ್ತಾ ಮೆನನ್‌ಗೆ ಸಲ್ಲುತ್ತದೆ. ಮಲಯಾಳಂನ ‘ಪಾಪ್‌ಕಾರ್ನ್’ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ಹೆಚ್ಚು ಮಿಂಚಿದ್ದು ಟಾಲಿವುಡ್‌ನಲ್ಲಿ. ‘ಭೀಮ್ಲಾ ನಾಯಕ್’ ಮೂಲಕ ತೆಲುಗಿಗೆ ಎಂಟ್ರಿಯಾದ ಸಂಯುಕ್ತಾ ಬಳಿಕ ‘ಬಿಂಬಿಸಾರ’, ‘ವಿರೂಪಾಕ್ಷ’, ‘ಸರ್’, ‘ಡೆವಿಲ್’ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇಂತಹ ನಟಿ, ಇದೀಗ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಬಾಲಕೃಷ್ಣ ನಟನೆಯಲ್ಲಿ 2021ರಲ್ಲಿ ರಿಲೀಸ್ ಆಗಿದ್ದ ‘ಅಖಂಡ’ ಚಿತ್ರದ ಸೀಕ್ವೆಲ್ ‘ಅಖಂಡ-2: ತಾಂಡವಂ’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಅ.16ರಂದು ಸಿನಿಮಾ ಮುಹೂರ್ತ ಕಂಡಿತ್ತು. ಮೊದಲಿಗೆ ಬಾಲಕೃಷ್ಣಗೆ ನಾಯಕಿಯಾಗಿ ಪ್ರಜ್ಞಾ ಜೈಸ್ವಾಲ್ ಮುಂದುವರಿಯುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ನಾಯಕಿಯ ಬದಲಾವಣೆಯಾಗಿದ್ದು, ಅವರ ಜಾಗಕ್ಕೆ ಸಂಯುಕ್ತಾ ಮೆನನ್ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡವು ಹೊಸ ಪೋಸ್ಟರ್ ಮೂಲಕ ಸಂಯುಕ್ತಾರನ್ನು ಸ್ವಾಗತಿಸಿದೆ. ನಟಿಯು ಸದ್ಯದಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಭಾಗ ಹಿಟ್ ಆಗಿದ್ದ ಕಾರಣ ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸೀಕ್ವೆಲ್ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಉಳಿದಂತೆ, ಸಂಯುಕ್ತಾ ಮೆನನ್ ಹಿಂದಿಯ ‘ಮಹಾರಾಗ್ನಿ: ಕ್ವೀನ್ ಆಫ್​ ಕ್ವೀನ್ಸ್’, ತೆಲುಗಿನ ‘ಸ್ವಯಂಭೂ’ ಸೇರಿ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net