

ಬೆಂಗಳೂರು: ಎಲ್ಲ ಚಿತ್ರ ನಟ-ನಟಿಯರು ಕರೊನಾ ಕಾಟದಿಂದಾಗಿ ಗೃಹಬಂಧನಕ್ಕೀಡಾಗಿದ್ದರೆ, ನಟಿ ಸಂಯುಕ್ತಾ ಹೊರನಾಡು ಮಾತ್ರ ತೆಲುಗಿನ ಅಲ್ಲು ಅರವಿಂದ್ ಕೈಯಲ್ಲಿ ‘ಲಾಕ್ಡ್’ ಆಗಿದ್ದಾರೆ. ವಿಷಯ ಏನೆಂದರೆ, ಅಲ್ಲು ಅರವಿಂದ್ ನಿರ್ವಣದ ‘ಲಾಕ್ಡ್’ ಎಂಬ ಹೆಸರಿನ ವೆಬ್ಸೀರಿಸ್ನಲ್ಲಿ ಸಂಯುಕ್ತಾ ನಾಯಕಿ ಆಗಿ ಅಭಿನಯಿಸಿದ್ದು, ಅದು ಮಾರ್ಚ್ ಕೊನೆಯ ವಾರದಲ್ಲಿ ‘ಎಎಚ್ಎ’ ಆಪ್ನಲ್ಲಿ ಬಿಡುಗಡೆ ಆಗಲಿದೆ. ಅಲ್ಲು ಅರವಿಂದ್ ಮತ್ತು ಅವರ ಮಗ ಅಲ್ಲು ಅರ್ಜುನ್ ಒಡೆತನದ ಈ ಒಟಿಟಿ ಪ್ಲಾಟ್ಫಾಮರ್್ನಲ್ಲಿ ಈಗಾಗಲೇ ಹಲವು ಚಿತ್ರಗಳು ಮತ್ತು ವೆಬ್ ಸೀರೀಸ್ಗಳು ಸ್ಟ್ರೀಮಿಂಗ್ ಆಗುತ್ತಿದ್ದು, ‘ಲಾಕ್ಡ್’ ಹೊಸ ಸೇರ್ಪಡೆಯಾಗಲಿದೆ.
ಶೀರ್ಷಿಕೆಯೇ ಸೂಚಿಸುವಂತೆ ಇದು ಏಳು ಜನರು ಮನೆಯೊಂದರಲ್ಲಿ ಅಚಾನಕ್ಕಾಗಿ ಬಂಧನಕ್ಕೆ ಒಳಗಾಗುವ ಸನ್ನಿವೇಶವೊಂದರ ಸುತ್ತುವ ಕಥೆ. ‘ಆರ್ಗನ್ ಟ್ರಾಫಿಕಿಂಗ್ ಈ ವೆಬ್ಸೀರಿಸ್ನ ಕಥಾವಸ್ತು. ಒಂದು ಮನೆಯಲ್ಲಿ ಏಳು ಮಂದಿ ಬಂಧಿಯಾಗಿ ಬಿಡುತ್ತಾರೆ. ಆ ಏಳರಲ್ಲಿ ಎಷ್ಟು ಜನ ಬದುಕುಳಿಯುತ್ತಾರೆ ಎಂಬುದೇ ಕಥಾಹಂದರ’ ಎನ್ನುತ್ತಾರೆ ಸಂಯುಕ್ತಾ.
‘ತೆಲುಗಿನ ಈ ವೆಬ್ಸೀರಿಸ್ನಲ್ಲಿ ಸತ್ಯದೇವ್ ನಾಯಕನಾಗಿ ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ನಾನು ನಟಿಸಿದ್ದೇನೆ. ನಾಯಕನ ಮನೆಯಲ್ಲಿ ಬಂಧಿಯಾಗುವ ಒಟ್ಟು ಏಳು ಮಂದಿ ಹೊರಗೆ ಬರಲು ನಡೆಸುವ ಪ್ರಯತ್ನವೇ ಚಿತ್ರದ ಕಥೆ. ಹೇಗೆ ಮನುಷ್ಯ ಇಕ್ಕಟ್ಟಿಗೆ ಸಿಲುಕಿದಾಗ ತಾನೊಬ್ಬ ಬಚಾವ್ ಆದರೆ ಸಾಕು ಎಂಬ ಸ್ವಾರ್ಥ ತೋರುತ್ತಾನೆ ಎಂಬ ಅಂಶವನ್ನು ಇಲ್ಲಿ ಹೇಳಲಾಗಿದೆ’ ಎನ್ನುತ್ತ ಸಂಯುಕ್ತಾ ಕಥೆ ಬಗ್ಗೆ ಕಿರು ವಿವರಣೆ ನೀಡುತ್ತಾರೆ. ‘ವೆಬ್ ಸೀರಿಸ್ನಲ್ಲಿ ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಆದರೆ ಇದಕ್ಕಾಗಿ 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ’ ಎಂಬುದಾಗಿ ಶೂಟಿಂಗ್ ಅನುಭವವನ್ನೂ ಹಂಚಿಕೊಳ್ಳುತ್ತಾರೆ. ‘ಈ ಆಪ್ನಲ್ಲಿ ಪ್ರತಿ ತಿಂಗಳಿಗೊಂದರಂತೆ ವೆಬ್ಸೀರಿಸ್ ಬಿಡುಗಡೆ ಮಾಡಲಾಗುತ್ತದೆ. ಆ ಪೈಕಿ ಇದು ಎರಡನೇ ವೆಬ್ಸೀರಿಸ್’ ಎನ್ನುತ್ತಾರೆ ಸಂಯುಕ್ತಾ.
ಲಾಕ್ಡ್ ಹೆಸರಿನ ಈ ವೆಬ್ಸೀರಿಸ್ನ ಶೂಟಿಂಗ್ ಕೆಲವು ದಿನಗಳ ಹಿಂದೆಯೇ ಮುಗಿದಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿದ್ದು, ‘ಎಎಚ್ಎ’ ಆಪ್ನಲ್ಲಿ ಮಾರ್ಚ್ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ. | ಸಂಯುಕ್ತಾ ಹೊರನಾಡು ನಟಿ