

ಬೆಂಗಳೂರು: ಸಿನಿಮಾ ಕನಸು ಬೆನ್ನತ್ತಿ ಸಕಲೇಶಪುರದಿಂದ ಬೆಂಗಳೂರಿಗೆ ಬಂದವರು ಸಂಹಿತಾ ವಿನ್ಯಾ. ಮೊದಲು ಮಾಡೆಲಿಂಗ್ ಲೋಕದಲ್ಲಿ ಮಿಂಚಿ, ನಂತರ ಕ್ಯಾಮರಾ ಮುಂದೆ ಬಣ್ಣ ಹಚ್ಚಿ ಕನಸು ನನಸು ಮಾಡಿಕೊಂಡರು. ‘ಹಾಲುತುಪ್ಪ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಅವರು ‘ಅಮೃತ ಘಳಿಗೆ’, ‘ವಿಷ್ಣು ಸರ್ಕಲ್’ ಸಿನಿಮಾದಲ್ಲಿ ನಟಿಸಿದರು. ಜತೆಗೆ ‘ಯು ಆರ್ ಮೈ ಹೀರೋ’ ಮೂಲಕ ಪ್ಯಾನ್ ಇಂಡಿಯಾ ಹೊರಟರು. ಇಂತಹ ಸಂಹಿತಾ ಇದೀಗ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೇ ವರ್ಷ ಅವರ ಆರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಬಗ್ಗೆ ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡಿರುವ ಸಂಹಿತಾ, ‘ಮೊದಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಇದೀಗ ಅವಕಾಶಗಳು ತಾನಾಗಿಯೇ ಹೆಚ್ಚು ಬರುತ್ತಿವೆ. ಸದ್ಯ ಕನ್ನಡದ ‘ಮೆಜೆಸ್ಟಿಕ್-2’, ‘ಹೇ ಪ್ರಭು’, ‘ಜಿಎಸ್‌ಟಿ’, ‘ ಯಾಕೋ ಬೇಜಾರು’, ‘ಒನ್ ಸಿಆರ್’, ‘ಆಯುಧ’ ಹಾಗೂ ತಮಿಳಿನ ‘ಮಿಕ್ಸಿಂಗ್ ಕಾದಲ್’ ಬಿಡುಗಡೆಗೆ ಸಿದ್ಧವಾಗಿವೆ. ಎಲ್ಲ ಚಿತ್ರಗಳಲ್ಲೂ ನನ್ನ ಪಾತ್ರಗಳು ವಿಭಿನ್ನವಾಗಿವೆ. ‘ಮೆಜೆಸ್ಟಿಕ್-2’ನಲ್ಲಿ ರೌಡಿಸಂ ಬಲೆಗೆ ಸಿಲುಕಿರುವ ನಾಯಕನನ್ನು ಅದರಿಂದ ಹೊರತರುವ ನಾಯಕಿ ಪಾತ್ರ ನನ್ನದು. ಹಾಗೇ ಕನ್ನಡದ ‘ಸ್ವಾಭಿಮಾನಿ’ ಎಂಬ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ, ತಮಿಳು ಸಿನಿಮಾವೊಂದರಲ್ಲಿ ಕಿಶೋರ್‌ಗೆ ನಾಯಕಿಯಾಗಿ ನಟಿಸಲಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.
ಪಾತ್ರದಲ್ಲಿ ಆವಾಹನೆ: ಹೀಗೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಹಿತಾ, ಪಾತ್ರಕ್ಕಾಗಿ ಸಿದ್ಧತೆ ನಡೆಸುವ ಕುರಿತಂತೆ, ‘ಇಂದು ಒಂದು ಸಿನಿಮಾ ಶೂಟ್ ಆದರೆ, ನಾಳೆ ಇನ್ನೊಂದು ಚಿತ್ರದ ಚಿತ್ರೀಕರಣ ಇರುತ್ತದೆ. ಎರಡು ಚಿತ್ರಗಳ ಪಾತ್ರ ವಿಭಿನ್ನ. ಆಗ, ಆ ಪಾತ್ರದಲ್ಲಿ ತಲ್ಲೀನರಾಗುವುದು ಸವಾಲಿನ ವಿಷಯ. ಅದನ್ನು ಪಾಸಿಟವ್ ಆಗಿ ಸ್ವೀಕರಿಸುತ್ತೇನೆ. ಆ ಪಾತ್ರವನ್ನು ಅವಾಹನೆ ಮಾಡಿಕೊಳ್ಳುತ್ತೇನೆ ಅಥವಾ ಯಾರೋ ವ್ಯಕ್ತಿಯನ್ನು ನಾನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ಆಗ ನಟನೆ ಸುಲಭ ಎನಿಸುತ್ತದೆ’ ಎಂದು ಹೇಳಿಕೊಳ್ಳುತ್ತಾರೆ. ಸಂಹಿತಾಗೆ ಇತ್ತೀಚೆಗೆ ಬಾಲಿವುಡ್‌ನಿಂದ ಅವಕಾಶ ಬಂದಿದ್ದು, ಕನ್ನಡದಲ್ಲಿ ಬಿಜಿ ಇರುವ ಕಾರಣ ಅವರು ಅದನ್ನು ನಿರಾಕರಿಸಿದ್ದಾರಂತೆ. ‘ಸದ್ಯ ಕನ್ನಡ ಚಿತ್ರರಂಗವೇ ಬೆಳೆಸುತ್ತಿರುವಾಗ ಇಲ್ಲೇ ಇದ್ದು ಬೆಳೆಯೋಣಾ’ ಎಂಬುದು ಅವರ ಅಭಿಮತ.