ಮಗನ ಒತ್ತಾಯಕ್ಕೆ 12 ವರ್ಷಗಳ ಬಳಿಕ ನಟನೆಗೆ ಮರಳಿದ ‘ವರದನಾಯಕ’ ನಟಿ ಸಮೀರಾ ರೆಡ್ಡಿ

sameera 1
Published on

ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಮೂಡಿಸಿದ್ದವರು ನಟಿ ಸಮೀರಾ ರೆಡ್ಡಿ. ಹಿಂದಿಯ ‘ಮೈನೆ ದಿಲ್ ತುಜ್ಕೋ ದಿಯಾ’ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ‘ರೇಸ್’, ‘ಮುಸಾಫಿರ್’, ‘ದೇ ಧನಾ ಧನ್’, ತೆಲುಗಿನ ‘ನರಸಿಂಹಡು’, ‘ಅಶೋಕ’, 2013ರಲ್ಲಿ ತೆರೆಕಂಡಿದ್ದ ಕನ್ನಡದ ‘ವರದನಾಯಕ’ ಸೇರಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 2014ರಲ್ಲಿ ಮಹಾರಾಷ್ಟ್ರ ಮೂಲದ ಉದ್ಯಮಿ ಅಕ್ಷಯ್ ವರ್ದೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಸಾಂಸಾರಿಕ ಜೀವನದಲ್ಲಿ ಬಿಜಿಯಾಗಿದ್ದ ಸಮೀರಾ ಚಿತ್ರರಂಗದಿಂದ ದೂರವಾಗಿದ್ದರು. ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹಿಂದಿಯ ‘ಚಿಮ್ನಿ’ ಎಂಬ ಸೂಪರ್-ನ್ಯಾಚುರಲ್, ಹಾರರ್ ಚಿತ್ರದಲ್ಲಿ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ‘ದೂರದರ್ಶನ್’ ಖ್ಯಾತಿಯ ಗಗನ್ ಪುರಿ ಆ್ಯಕ್ಷನ್-ಕಟ್ ಹೇಳಿರುವ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ. ಕಮ್‌ಬ್ಯಾಕ್ ಬಗ್ಗೆ 46 ವರ್ಷದ ಸಮೀರಾ, ‘ನನ್ನ ಮಗ ‘ರೇಸ್’ ಚಿತ್ರವನ್ನು ನೋಡಿ ನನ್ನ ನಟನೆಯನ್ನು ಕೊಂಡಾಡಿದ. ಅಮ್ಮ ನೀನು ಆ ಚಿತ್ರದಲ್ಲಿರುವ ಹಾಗೆ ಈಗ ಕಾಣುತ್ತಿಲ್ಲ. ನೀನೇಕೆ ಮತ್ತೆ ನಟಿಸಬಾರದು ಎಂದು ಪ್ರಶ್ನಿಸಿದ. ನಿನ್ನ ಮತ್ತು ತಂಗಿಯ ಆರೈಕೆಗಾಗಿ ಸಿನಿಮಾ ಮಾಡಲಿಲ್ಲ ಎಂದಾಗ, ನೀನು ಮತ್ತೆ ಆ್ಯಕ್ಟಿಂಗ್ ಮಾಡು ಎಂದು ಒತ್ತಾಯಿಸಿದ. ಇದರಿಂದ ಬಣ್ಣದ ಲೋಕಕ್ಕೆ ವಾಪಸಾದೆ’ ಎಂದು ಪ್ರತಿಕ್ರಿಯಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net