ಲವ್​ ಮಾಕ್​ಟೇಲ್​ನಲ್ಲಿ ಅದೇ ರಾಗ ಹೊಸ ಹಾಡು

Ade raga hadu 25 Jan 20
Published on

ಬೆಂಗಳೂರು: ‘ಹಾಡು ಹಳೆಯದಾದರೇನು, ಭಾವ ನವನವೀನ..’ ಎಂಬ ಹಾಡೇ ಇದೆ. ಆದರೆ ಹೊಸ ಸಿನಿಮಾ ‘ಲವ್ ಮಾಕ್​ಟೇಲ್’ನಲ್ಲಿ ಅದನ್ನೇ ‘ರಾಗ ಹಳೆಯದಾದರೇನು, ಹಾಡು ನವನವೀನ..’ ಎಂದೆನ್ನಬಹುದು. ಏಕೆಂದರೆ 25 ವರ್ಷಗಳ ಹಿಂದೆ ಸಂಯೋಜಿಸಿದ್ದ ರಾಗವೊಂದಕ್ಕೆ ಹೊಸ ಸಾಹಿತ್ಯ ರಚಿಸಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ಅದು ಹೊಸ ಫೀಲ್ ಕೊಡುವಂತೆಯೇ ಮೂಡಿಬಂದಿದೆ. ಡಾರ್ಲಿಂಗ್ ಕೃಷ್ಣ ನಿರ್ಮಾಣ, ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಿರುವ ಈ ಸಿನಿಮಾಗೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕಾಗಿ ಅವರು ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಆ ಪೈಕಿ ‘ಕಣ್ಣ ಹನಿಯೊಂದು ಕಣ್ಣಲ್ಲೇ ತೂಗಿ.. ಏಕೆ ಹೀಗೊಂದು ಭಾರ ಎದೆಯೊಳಗೆ..’ ಎಂಬ ಗೀತೆಗೆ 25 ವರ್ಷಗಳ ಹಿಂದೆ ರಘು ದೀಕ್ಷಿತ್ ಅವರೇ ಸಂಯೋಜಿಸಿದ್ದ ರಾಗವೊಂದನ್ನು ಬಳಕೆ ಮಾಡಿಕೊಳ್ಳಲಾಗಿದೆ. ‘ತಮ್ಮ ಸಂಗೀತ ಯಾನದ ಆರಂಭದಲ್ಲಿ ಸಂಯೋಜಿಸಲಾಗಿದ್ದ ಈ ರಾಗವನ್ನು ಹಿಂದೆ ಒಂದೆರಡು ಸಿನಿಮಾತಂಡಗಳ ಮುಂದೆ ಪ್ರಸ್ತಾಪಿಸಿದ್ದರೂ ಅದು ತೆರೆ ಮೇಲೆ ಹಾಡಾಗಿ ಮೂಡಿ ಬಂದಿರಲಿಲ್ಲ. ‘ಲವ್ ಮಾಕ್​ಟೇಲ್’ ಮೂಲಕ ಈಗ ಅದಕ್ಕೆ ಕಾಲ ಕೂಡಿ ಬಂದಿದೆ’ ಎಂದು ಹೇಳಿಕೊಂಡಿದ್ದಾರೆ ಸಂಗೀತ ನಿರ್ದೇಶಕ ರಘು ದೀಕ್ಷಿತ್. ‘ಈ ಸಿನಿಮಾದ ಒಂದು ಮಹತ್ವದ ಸನ್ನಿವೇಶದಲ್ಲಿ ಈ ಹಾಡು ಬರುತ್ತದೆ. ಅದಕ್ಕಾಗಿ ಒಂದು ಸ್ಪೆಷಲ್ ಟ್ಯೂನ್ ಬೇಕಾಗಿತ್ತು. ದೃಶ್ಯ-ಸನ್ನಿವೇಶದ ಬಗ್ಗೆ ಒಂದೊಳ್ಳೆಯ ಟ್ಯೂನ್ ಕೊಡಿ ಎಂದು ಕೇಳಿದಾಗ ರಘು ದೀಕ್ಷಿತ್ ಅವರು ಈ ಟ್ಯೂನ್ ಒಮ್ಮೆ ಗುನುಗಿದರು. ಅದು ತುಂಬ ಇಷ್ಟವಾದ್ದರಿಂದ ರಾಘವೇಂದ್ರ ಕಾಮತ್ ಅವರ ಬಳಿ ಅದಕ್ಕೆ ಸಾಹಿತ್ಯ ರಚಿಸಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ. ವಿಶೇಷವೆಂದರೆ ಈ ಚಿತ್ರಕ್ಕೆ ನಾಯಕ ಮಾತ್ರವಲ್ಲ, ನಾಯಕಿ ಮಿಲನಾ ನಾಗರಾಜ್ ಕೂಡ ನಿರ್ವಪಕರು. ಇವರೊಂದಿಗೆ ಅಮೃತಾ ಅಯ್ಯಂಗಾರ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರ ಜೀವನದ ನಾಲ್ಕೈದು ಕಾಲಘಟ್ಟದಲ್ಲಿ ಪ್ರೀತಿ ಉಂಟಾಗುತ್ತದೆ. ಅಂತ ನಾಲ್ಕೈದು ಪ್ರೇಮಪ್ರಕರಣಗಳೇ ಈ ಚಿತ್ರದ ಕಥಾಹಂದರ ಎನ್ನುತ್ತಾರೆ ಕೃಷ್ಣ. ಅಂದಹಾಗೆ ಈ ಸಿನಿಮಾ ಜ. 31ರಂದು ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net