

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿದ್ದ ಇಳಯರಾಜ, ಕಳೆದ 40 ವರ್ಷಗಳಲ್ಲಿ ಕನ್ನಡದಲ್ಲೂ ಸಾಕಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಜನ್ಮಜನ್ಮದ ಅನುಬಂಧ’, ‘ನೀ ನನ್ನ ಗೆಲ್ಲಲಾರೆ’, ‘ಗೀತಾ’, ‘ಪಲ್ಲವಿ ಅನುಪಲ್ಲವಿ’, ‘ಭಾರೀ ಭರ್ಜರಿ ಬೇಟೆ’, ‘ನಮ್ಮೂರ ಮಂದಾರ ಹೂವೇ’, ‘ಶಿವಸೈನ್ಯ’, ‘ಆ ದಿನಗಳು’ ಸೇರಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವುದಷ್ಟೇ ಅಲ್ಲ, ಕನ್ನಡದಲ್ಲಿ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅದರಲ್ಲೂ ಇಳಯರಾಜ ಎಂದರೆ, ಮೊದಲಿಗೆ ನೆನಪಾಗುವುದು ಶಂಕರ್ನಾಗ್ ನಿರ್ದೇಶನದ ‘ಗೀತಾ’. ‘
ಈ ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿರುವುದಷ್ಟೇ ಅಲ್ಲ, ಎವರ್ಗ್ರೀನ್ ಎಂದೆನಿಸಿಕೊಂಡಿವೆ. ಅದರಲ್ಲೂ ‘ಜೊತೆಯಲಿ ಜೊತೆಜೊತೆಯಲಿ ...’ ಹಾಡಂತೂ, ಇಳಯರಾಜ ಕಂಪೋಸ್ ಮಾಡಿರುವ ಶ್ರೇಷ್ಠ ಹಾಡುಗಳ ಪೈಕಿ ಒಂದು ಎಂದು ಹೆಸರಾಗಿದೆ. ಈ ಹಾಡು ಅದೆಷ್ಟು ಜನಪ್ರಿಯವೆಂದರೆ, ‘ಗೀತಾ’ ಬಿಡುಗಡೆಯಾದ ಮೇಲೆ ಈ ಟ್ಯೂನ್ ಅನ್ನು ಎರಡು ಬಾರಿ ಮರುಬಳಕೆ ಮಾಡಲಾಗಿದೆ. ತಮಿಳಿನ ಕೋಕಿಲ ಮೋಹನ್ ಅಭಿನಯದ ‘ನೂರಾವತ್ತು ನಾಳ್’ನಲ್ಲಿ ‘ವಿಳಿಯಿಲೆ ಮಣಿ ವಿಳಿಯಿಲೆ ...’ ಎಂಬ ಹಾಡು ಇದೇ ಟ್ಯೂನ್ನಲ್ಲಿದೆ. ಹಿಂದಿಯ ‘ಚೀನಿ ಕಮ್ ಚಿತ್ರದಲ್ಲಿಯೂ ಮರುಬಳಕೆಯಾಗಿದೆ.